ಬೆಂಗಳೂರು: ನಗರದ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಸ್ಥಾಪಿಸಲಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ಆಗಸ್ಟ್ ಕೊನೆಯ ವಾರ ಚಾಲನೆ ಸಿಗಲಿದೆ. ಆರ್ಥಿಕ ತಜ್ಞರೂ ಆಗಿರುವ ಮಾಜಿ ಫ್ರಧಾನಿ ಡಾ.ಮನಮೋಹನ್‌ಸಿಂಗ್ ಅವರು ಪಾಠ ಮಾಡುವ ಮೂಲಕ ಇದಕ್ಕೆ ಚಾಲನೆ ನೀಡಲಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಬಿಎಸ್‌ಸಿ ಇನ್ ಎಕನಾಮಿಕ್ಸ್ ಕೋರ್ಸ್‌ನ ಮೊದಲ ವರ್ಷದ 50 ವಿದ್ಯಾರ್ಥಿಗಳನ್ನು ಒಳಗೊಂಡ ತರಗತಿಗೆ ಚಾಲನೆ ನೀಡಲಾಗುತ್ತದೆ. ಮುಂದಿನ ವರ್ಷದ ವೇಳೆಗೆ ಇನ್ನಷ್ಟು ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದ್ದು,ವಿದ್ಯಾರ್ಥಿಗಳ ಸಂಖ್ಯೆ ಒಂದು ಸಾವಿರಕ್ಕೆ ಏರಲಿದೆ ಎಂದು ಹೇಳಿದರು. ಪ್ರಸಕ್ತ ಸಾಲಿನಲ್ಲಿ 50 ವಿದ್ಯಾರ್ಥಿಗಳಿಗೆ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪ್ರವೇಶ ಕಲ್ಪಿಸಲಾಗುತ್ತಿದೆ. ಲಿಖೀತ ಪರೀಕ್ಷೆ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತಿದ್ದು, 259 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆ. 17ರಂದು ಆಯ್ಕೆ ಪ್ರಕ್ರಿಯೆ ಕೌನ್ಸಲಿಂಗ್ ನಡೆಯಲಿದೆ. ಪರಿಶಿಷ್ಟ ಜಾತಿಗೆ ಶೇ. 20, ಪಂಗಡಕ್ಕೆ ಶೇ. 10ರಷ್ಟು ಮೀಸಲಾತಿ
ನೀಡುತ್ತಿದ್ದು, ಶೇ. 60ರಷ್ಟು ಸೀಟುಗಳನ್ನು ರಾಜ್ಯದ ಮತ್ತು ಉಳಿದ ಸೀಟುಗಳನ್ನು ಹೊರರಾಜ್ಯದ ವಿದ್ಯಾರ್ಥಿಗಳಿಗೆ ಕಲ್ಪಿಸಲಾಗುತ್ತದೆ
ಎಂದು ತಿಳಿಸಿದರು. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಜತೆ ಒಪ್ಪಂದ ಮಾಡಿಕೊಳ್ಳಲಾಗವುದು. ಪ್ರಾಧ್ಯಾಪಕರ ನೇಮಕಾತಿಗೆ ಡಾ.ಕಸ್ತೂರಿರಂಗನ್ ನೇತೃತ್ವದ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
ರಾಷ್ಟ್ರಪಿತನಿಗೆ ಪುಷ್ಪ ನಮನ : 1942ರ ಆಗಸ್ಟ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆದ “ಕ್ವಿಟ್ ಇಂಡಿಯಾ
ಚಳವಳಿ’ಗೆ 75 ವರ್ಷಗಳು ಸಂದ ಹಿನ್ನೆಲೆಯಲ್ಲಿ ಎಂ.ಜಿ ರಸ್ತೆಯಲ್ಲಿನ ಗಾಂಧಿ ಪ್ರತಿಮೆಗೆ ಮಕ್ಕಳು ಪುಷ್ಪ ನಮನ ಸಲ್ಲಿಸಿದರು.