Advertisement

By Polls: ಚನ್ನಪಟ್ಟಣದ ಅಭಿವೃದ್ಧಿ ನಾನೇ ಮಾಡುವೆ, ಅಭ್ಯರ್ಥಿ ನೆಪಕ್ಕೆ ಮಾತ್ರ: ಡಿಕೆಶಿ

09:00 PM Oct 04, 2024 | Team Udayavani |

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ನೆಪ ಮಾತ್ರ, ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಮಾಡುವುದು ನಾನು. ಕ್ಷೇತ್ರದ ಜನತೆ ಕಾಂಗ್ರೆಸ್‌ ಅಭ್ಯರ್ಥಿ ಯಾರೇ ಆದರೂ ನನ್ನ ಮುಖ ನೋಡಿ ಮತಹಾಕಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಂದು ಮನವಿ ಮಾಡಿದರು.

Advertisement

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಅಭ್ಯರ್ಥಿ ಬಗ್ಗೆ ಆಲೋಚಿಸುತ್ತಿಲ್ಲ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದೇವೆ. ಕ್ಷೇತ್ರದ ಜನತೆ ಮತ್ತು ಕಾರ್ಯಕರ್ತರಲ್ಲಿ ನಾನೇ ಅಭ್ಯರ್ಥಿ ಎಂದು ಭಾವಿಸಿ ಮತ ಹಾಕುವಂತೆ ಪ್ರಾರ್ಥಿಸುತ್ತೇನೆ ಎಂದರು.

ಎಚ್‌ಡಿಕೆ ವಿಚಾರಕ್ಕೆ ನೋ ರಿಯಾಕ್ಷನ್‌:
ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು 50 ಕೋಟಿ ರೂ. ಹಣ ಕೇಳಿರುವ ಸಂಬಂಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಗುರುವಾರ ನಡೆದ ದಸರಾ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ನಿರತವಾಗಿದ್ದೆ. ಶುಕ್ರವಾರ ಚನ್ನಪಟ್ಟಣ ಪ್ರವಾಸ ಮಾಡುತ್ತಿದ್ದೇನೆ. ಹೀಗಾಗಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ಖಾಸಗಿ ವಿಚಾರಕ್ಕೆ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಮೈಸೂರು ದಸರಾ ನೋಡಿ:
ಇಡೀ ಮೈಸೂರು ತುಂಬಾ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಅದರ ಸೌಂದರ್ಯವನ್ನು ರಾಜ್ಯದ ಜನತೆ ಕಣ್ಣುತುಂಬಿಕೊಳ್ಳಬೇಕು. ದಸರಾ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ರಾಜ್ಯದ ಎಲ್ಲಾ ಭಾಗಗಳಿಂದ ಜನ ಆಗಮಿಸಿ ಈ ಭವ್ಯ ಆಚರಣೆಯ ಭಾಗವಾಗಬೇಕು ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಎಲ್ಲಾ ಸಮುದಾಯಗಳಿಗೆ ನ್ಯಾಯ:
ಜಾತಿಗಣತಿಯ ಬಗ್ಗೆ ಮಾಜಿ ಸಂಸದ ಡಿ.ಕೆ.ಸುರೇಶ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ನೀತಿಯಂತೆ ನಾವು ಈ ವಿಚಾರದಲ್ಲಿ ತೀರ್ಮಾನ ಮಾಡುತ್ತೇವೆ. ಎಲ್ಲಾ ಸಮುದಾಯಗಳಿಗೂ ನಾವು ನ್ಯಾಯ ಒದಗಿಸಿಕೊಡುತ್ತೇವೆ. ಈ ವರದಿಯಲ್ಲಿ ಏನಾದರೂ ನ್ಯೂನ್ಯತೆ ಇದ್ದರೆ ಸಿದ್ದರಾಮಯ್ಯ, ನಾನು ಹಾಗೂ ನಮ್ಮ ಪಕ್ಷದ ನಾಯಕರು ಕೂತು ಸರಿಪಡಿಸುತ್ತೇವೆ. ಈ ವಿಚಾರವಾಗಿ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next