ಈ ವಾರ ಬರೋಬ್ಬರಿ ಒಂಭತ್ತು ಸಿನಿಮಾಗಳು ಬಿಡುಗಡೆಯಾಗುತ್ತಿರುವ ವಿಚಾರ ನಿಮಗೆ ಗೊತ್ತೆ. ಹಾಗೆ ನೋಡಿದರೆ ಇದು ದಾಖಲೆಯ ಬಿಡುಗಡೆ ಎಂದರೆ ತಪ್ಪಲ್ಲ. ಅಷ್ಟಕ್ಕೂ ಈ ತರಹದ ಒಂದು ಸಂದರ್ಭ ಹೇಗೆ ಬಂತೆಂದರೆ ಕಾದು ಕಾದು ಸುಸ್ತಾದ ನಿರ್ಮಾಪಕರು ಬಿಡುಗಡೆಗೆ ಮುಂದಾಗಿದ್ದು ಎಂದರೆ ತಪ್ಪಲ್ಲ. ಹೆಚ್ಚು ಸಿನಿಮಾ ಬಿಡುಗಡೆಯಾಗದ ವಾರದಲ್ಲಿ ತಮ್ಮ ಸಿನಿಮಾ ಬಂದರೆ ಚೆನ್ನಾಗಿರುತ್ತದೆ ಎಂದು ಮೂರ್‍ನಾಲ್ಕು ಸಿನಿಮಾಗಳಿದ್ದ ವಾರದಿಂದ ದೂರ ಉಳಿದ ನಿರ್ಮಾಪಕರು ಈಗ ಅನಿವಾರ್ಯವಾಗಿ ಒಂಭತ್ತು ಸಿನಿಮಾಗಳ ಜೊತೆ ಬರಬೇಕಾಗಿದೆ.
ಹೌದು, “ನನ್ ಮಗಳೇ ಹೀರೋಯಿನ್’ ಚಿತ್ರದ ನಿರ್ಮಾಪಕರು ಸಿನಿಮಾ ರೆಡಿಮಾಡಿಕೊಂಡು ಜೂನ್‌ನಿಂದಲೇ ಬಿಡುಗಡೆಗೆ ಕಾದಿದ್ದರಂತೆ. ಆಗ ಮೂರು, ನಾಲ್ಕು ಸಿನಿಮಾಗಳಿದ್ದ ಕಾರಣ, ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಾ ಬಂದರಂತೆ. ಆದರೆ, ವರ್ಷ ಕಳೆಯುತ್ತಾ ಬಂದರೂ ಸಿನಿಮಾ ಬಿಡುಗಡೆಗೆ ಅವಕಾಶ ಸಿಗಲೇ ಇಲ್ಲ. ಕೊನೆಗೂ ಒಂದು ದಿನಾಂಕ ಅಂತಿಮಗೊಳಿಸಿ ಬಿಡುಗಡೆಗೆ ಮುಂದಾಗಿದ್ದಾರೆ. ಅದು ನವೆಂಬರ್ 17.
ಆರಂಭದಲ್ಲಿ ಹೆಚ್ಚು ಸಿನಿಮಾ ಬರಲ್ಲ ಎಂದುಕೊಂಡಿದ್ದ ನಿರ್ಮಾಪಕರು ಈಗ ಒಂಭತ್ತು ಸಿನಿಮಾಗಳ ಜೊತೆ ಬರುತ್ತಿದ್ದಾರೆ. ಈ ಬಾರಿ ಯಾವ ಕಾರಣಕ್ಕೂ ಹಿಂದೇಟು ಹಾಕದೇ ಬಿಡುಗಡೆ ಮಾಡುತ್ತೇವೆ ಎನ್ನುತ್ತಾರೆ ನಿರ್ಮಾಪಕರಾದ ಪಟೇಲ್ ಅನ್ನದಾಪ್ಪ ಹಾಗೂ ಮೋಹನ್ ಕುಮಾರ್. “ಜೂನ್‌ನಿಂದ ನಾವು ಬಿಡುಗಡೆಗೆ ಕಾಯುತ್ತಾ ಬಂದೆವು. ಆದರೆ ಸಿನಿಮಾಗಳ ಮೇಲೆ ಸಿನಿಮಾಗಳು ಬಿಡುಗಡೆಯಾಗುತ್ತಿದ್ದರಿಂದ ರಿಲೀಸ್ ಡೇಟ್ ಮುಂದೆ ಹಾಕುತ್ತಲೇ ಬಂದೆವು.
ಈ ಬಾರಿ ರಿಲೀಸ್ ಮಾಡಿಯೇ ಮಾಡುತ್ತೇವೆ. ಯಾವ ಕಾರಣಕ್ಕೂ ಮುಂದೆ ಹೋಗುವುದಿಲ್ಲ. ಈ ವಾರ ಒಂಭತ್ತು ಸಿನಿಮಾ ಇದೆ. ಇನ್ನು ಕಾದರೆ 15 ಸಿನಿಮಾ ಜೊತೆ ರಿಲೀಸ್ ಮಾಡಬೇಕಾದ ಪರಿಸ್ಥಿತಿ ಬರಬಹುದು. ನಮಗೆ ನಮ್ಮ ಸಿನಿಮಾ ಮೇಲೆ ನಂಬಿಕೆ ಇದೆ. ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ. ಜನ ಇಷ್ಟಪಡುತ್ತಾರೆ’ ಎನ್ನುವುದು ನಿರ್ಮಾಪಕದ್ವಯರ ಮಾತು. ಅಂದಹಾಗೆ, “ನನ್ ಮಗಳೇ ಹೀರೋಯಿನ್’ ಚಿತ್ರವನ್ನು ಬಾಹುಬಲಿ ನಿರ್ದೇಶಿಸಿದ್ದು, ಸಂಚಾರಿ ವಿಜಯ್ ಹೀರೋ.