ಬೆಂಗಳೂರು: 17ನೇ ಸೀಸನ್ ನ ಐಪಿಎಲ್ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ರೋಮಾಂಚನಕಾರಿ ಘಟ್ಟ ತಲುಪುತ್ತಿದೆ. ಲೀಗ್ ಹಂತದಲ್ಲಿ ಕೇವಲ ಎಂಟು ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಪ್ಲೇ ಆಫ್ ತಲುಪುವ ಕೊನೆಯ ಎರಡು ತಂಡಗಳು ಯಾವುದು ಎನ್ನುವುದು ಮಾತ್ರ ಇನ್ನೂ ಕುತೂಹಲವಾಗಿಯೇ ಉಳಿದಿದೆ.
ಮೊದಲಿಗೆ ಸತತ ಆರು ಪಂದ್ಯಗಳಲ್ಲಿ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ಸತತ ಪಂದ್ಯಗಳಲ್ಲಿ ಗೆಲುವು ಕಾಣುತ್ತಿರುವುದು ಉಳಿದ ತಂಡಗಳ ಪ್ಲೇ ಆಫ್ ಲೆಕ್ಕಚಾರವನ್ನು ತಲೆಕೆಳಗು ಮಾಡಿದೆ. ಆರಂಭಿಕ ಹಂತದಲ್ಲಿ ನೀರಸ ಪ್ರದರ್ಶನದಿಂದ ಬಹುತೇಕ ಕೂಟದಿಂದ ಔಟ್ ಆಗುವ ಹಂತಕ್ಕೆ ಬಂದಿದ್ದ ಆರ್ ಸಿಬಿ ಇದೀಗ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.
ಆರ್ ಸಿಬಿ ಆಡಿರುವ 13 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದುಕೊಂಡು 12 ಅಂಕ ಸಂಪಾದಿಸಿಕೊಂಡಿದೆ. ತಂಡದ ರನ್ ರೇನ್ +0.387 ಇದೆ. ಮತ್ತೊಂದೆಡೆ ಸಿಎಸ್ ಕೆ ತಂಡವು 13 ಪಂದ್ಯಗಳಲ್ಲಿ ಏಳು ಪಂದ್ಯ ಗೆದ್ದು 14 ಅಂಕ ಪಡೆದಿದೆ. +0.528 ರನ್ ರೇಟ್ ಹೊಂದಿದೆ.
ಹೇಗಿದೆ ಆರ್ ಸಿಬಿ ಲೆಕ್ಕಾಚಾರ?
ಡೆಲ್ಲಿ ವಿರುದ್ಧ ಗೆದ್ದ ಬಳಿಕ ಆರ್ ಸಿಬಿ ಗೆಲುವಿನ ಹಾದಿ ಮತ್ತಷ್ಟು ಸುಗಮವಾಗಿದೆ. ಆರ್ ಸಿಬಿ ತನ್ನ ಕೊನೆಯ ಪಂದ್ಯವನ್ನು ಸಿಎಸ್ ಕೆ ವಿರುದ್ಧ ಬೆಂಗಳೂರಿನಲ್ಲಿ ಆಡಲಿದೆ. ಈ ಪಂದ್ಯವು ಎರಡೂ ತಂಡಗಳಿಗೆ ಮಾಡು ಇಲ್ಲವೆ ಮಡಿ ಪಂದ್ಯವಾಗಲಿದೆ.
ಮತ್ತೊಂದೆಡೆ ಏಳನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಟ್ ತಂಡಕ್ಕೆ ಇನ್ನೂ ಪ್ಲೇ ಆಫ್ ಕನಸು ಜೀವಂತವಿದೆ. ಕಾರಣ 12 ಅಂಕ ಹೊಂದಿರುವ ಲಕ್ನೋಗೆ ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿದೆ. ಒಂದು ಡೆಲ್ಲಿ ವಿರುದ್ದ ಮತ್ತೊಂದು ಮುಂಬೈ ವಿರುದ್ಧ. ರನ್ ರೇಟ್ ಕಳಪೆ ಇರುವ ಕಾರಣ ಲಕ್ನೋ ಒಂದು ಪಂದ್ಯ ಸೋತರೂ ಸಾಕು ಅದು ಬಹುತೇಕ ಕೂಟದಿಂದ ಹೊರಬೀಳಲಿದೆ. ಲಕ್ನೋ ಎರಡೂ ಪಂದ್ಯಗಳನ್ನು ಗೆದ್ದರೆ ಆರ್ ಸಿಬಿ ಕನಸು ನುಚ್ಚು ನೂರಾಗಲಿದೆ.
ಲಕ್ನೋ ಒಂದು ಪಂದ್ಯ ಸೋತರೆ, ಆರ್ ಸಿಬಿ ಚೆನ್ನೈ ಪಂದ್ಯವು ನಿರ್ಣಾಯಕವಾಗಲಿದೆ. ಈ ಪಂದ್ಯದಲ್ಲಿ ಒಂದು ವೇಳೆ ಆರ್ ಸಿಬಿ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಗಳಿಸಿದರೆ, ಸಿಎಸ್ ಕೆ ತಂಡವನ್ನು 182 ಅಥವಾ ಕಡಿಮೆ ರನ್ ಗಳಿಗೆ ನಿಯಂತ್ರಿಸಬೇಕು. ಅಥವಾ ಸಿಎಸ್ ಕೆ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಹೊಡೆದರೆ, ಅದನ್ನು ಆರ್ ಸಿಬಿ 18.1 ಓವರ್ ಗಳ ಒಳಗೆ ಚೇಸ್ ಮಾಡಬೇಕು. ಹೀಗಾದಲ್ಲಿ ಆರ್ ಸಿಬಿ ನೆಟ್ ರನ್ ರೇಟ್ ಸಿಎಸ್ ಕೆ ಗಿಂತ ಉತ್ತಮಗೊಂಡು ಪ್ಲೇ ಆಫ್ ತಲುಪಲಿದೆ.
ಆರ್ ಸಿಬಿ – ಸಿಎಸ್ ಕೆ ಎರಡೂ ತಂಡಕ್ಕೆ ಇದೆ ಅವಕಾಶ
ಹೌದು, ಇತರ ತಂಡಗಳ ಫಲಿತಾಂಶದ ಮೇಲೆ ಇದು ಆಧಾರಿತವಾಗಿದೆ. ನಾಲ್ಕನೇ ಸ್ಥಾನದಲ್ಲಿರುವ ಹೈದರಾಬಾದ್ ತಂಡವು ಇನ್ನು ಗುಜರಾತ್ ಮತ್ತು ಪಂಜಾಬ್ ವಿರುದ್ಧ ಆಡಲಿದ್ದು, ಎರಡೂ ಪಂದ್ಯಗಳನ್ನು ಸೋತರೆ ಆರ್ ಸಿಬಿ ಮತ್ತು ಸಿಎಸ್ ಕೆ ಗೆ ಅವಕಾಶವಿದೆ.