Advertisement

ಉಪಚುನಾವಣೆ: ಮೂರು ಲೆಕ್ಕಕ್ಕೆ, ಎರಡು ಸ್ಪರ್ಧೆಗೆ​​​​​​​

06:25 AM Oct 22, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸದ್ಯ ಎದುರಾಗಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಬಿಜೆಪಿ ಎಲ್ಲ ಕ್ಷೇತ್ರದಲ್ಲೂ ಗೆಲ್ಲುವುದಾಗಿ ಹೇಳುತ್ತಿದ್ದರೂ ಮೂರು ಕ್ಷೇತ್ರಗಳನ್ನಷ್ಟೇ ಗುರಿಯಾಗಿಸಿಕೊಂಡು ಗೆಲುವಿಗಾಗಿ ಬೆವರು ಹರಿಸುತ್ತಿದೆ.

Advertisement

ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರ ಹಾಗೂ ಜಮಖಂಡಿ ವಿಧಾನಸಭೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ರಣತಂತ್ರ ಹೆಣೆಯುತ್ತಿದ್ದು, ಶತಾಯಗತಾಯ ಜಯಭೇರಿ ಬಾರಿಸಲು ಪ್ರಯತ್ನ ನಡೆಸಿದೆ. ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷ ಸಂಘಟನೆ ಜತೆಗೆ ಮತ ಗಳಿಕೆ ಪ್ರಮಾಣ ವೃದ್ಧಿಸಿಕೊಳ್ಳುವ ಲೆಕ್ಕಾಚಾರ ನಡೆಸಿದೆ ಎನ್ನಲಾಗಿದೆ.

ಅನಿರೀಕ್ಷಿತವಾಗಿ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ಹಾಗೂ ರಾಜ್ಯ ಸರ್ಕಾರದಲ್ಲಿನ ಮೈತ್ರಿ ಪಕ್ಷವಾದ ಕಾಂಗ್ರೆಸ್‌, ಜೆಡಿಎಸ್‌ ಕ್ಷಿಪ್ರವಾಗಿ ಉಪಚುನಾವಣೆ ಎದುರಿಸಲು ಸಜ್ಜಾಗಿವೆ. ಮೂರು ಲೋಕಸಭೆ ಉಪಚುನಾವಣೆ ಪೈಕಿ ಎರಡು ಕ್ಷೇತ್ರಗಳನ್ನು ಹಿಂದೆ ಬಿಜೆಪಿ ಸಂಸದರೇ ಪ್ರತಿನಿಧಿಸುತ್ತಿದ್ದರು. ಹಾಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಕಮಲ ಪಕ್ಷಕ್ಕೆ ಮುಖ್ಯವೆನಿಸಿದೆ. ಅಲ್ಲದೇ ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆ ದೃಷ್ಟಿಯಿಂದಲೂ ಈ ಉಪಚುನಾವಣೆ ಗೆಲ್ಲುವುದು ಮಹತ್ವವೆನಿಸಿದ್ದು, ಮುಂದೆ ಗೆಲುವಿನ ಓಟ ಮುಂದುವರಿಕೆಗೆ ಪೂರ್ವಭಾವಿ ಪರೀಕ್ಷೆಯಂತಿದೆ. ಆ ಹಿನ್ನೆಲೆಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಗೆಲುವಿಗಾಗಿ ನಾನಾ ಕಸರತ್ತು ನಡೆಸಿದೆ.

ಶಿವಮೊಗ್ಗದಲ್ಲಿ ಪಕ್ಷ ಸಂಘಟನೆ ಸಮರ್ಥವಾಗಿದ್ದರೂ ಮೈತ್ರಿ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಜೆಡಿಎಸ್‌ನ ಮಧು ಬಂಗಾರಪ್ಪ ಕಣಕ್ಕಿಳಿದಿರುವುದರಿಂದ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಉಸ್ತುವಾರಿ ವಹಿಸಿರುವ ನಾಯಕರ ಜತೆಗೆ ಇತರೆ ಪ್ರಭಾವಿ ನಾಯಕರು, ಮುಖಂಡರು ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸಹ ಪುತ್ರನ ಗೆಲುವಿಗಾಗಿ ಕ್ಷೇತ್ರದಲ್ಲಿ ಸಂಘಟನೆ ಜತೆಗೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಮೈತ್ರಿ ಪಕ್ಷಗಳ ಪೈಕಿ ಒಂದು ಪಕ್ಷದ ಅಭ್ಯರ್ಥಿ ಕಣಕ್ಕಿಳಿದಾಗ ಮತ್ತೂಂದು ಪಕ್ಷದ ಮತದಾರರು ಬಿಜೆಪಿಯನ್ನು ಪರೋಕ್ಷವಾಗಿ ಬೆಂಬಲಿಸುವ ಲೆಕ್ಕಾಚಾರ ಕೆಲ ಮುಖಂಡರಲ್ಲಿತ್ತು. ಆದರೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಸೋಲಿಸಲೆಂದೇ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಿರುವುದಾಗಿ ಹೇಳಿದ್ದು, ಗೆಲುವಿಗೆ ಶತಪ್ರಯತ್ನ ನಡೆಸುವುದಾಗಿ ಘೋಷಿಸಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಭಿನ್ನ ಕಾರ್ಯತಂತ್ರ ರೂಪಿಸಲು ನಾಯಕರು ನಿರ್ಧರಿಸಿದ್ದಾರೆ.

Advertisement

ಬಳ್ಳಾರಿ ಲೋಕಸಭಾ ಉಪಚುನಾವಣೆಯನ್ನೂ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿಯು ಕ್ಷೇತ್ರವನ್ನು ಪಕ್ಷದ ನಿಯಂತ್ರಣದಲ್ಲೇ ಉಳಿಸಿಕೊಳ್ಳಲು ಹರಸಾಹಸ ನಡೆಸಿದೆ. ಕ್ಷೇತ್ರದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದರೆ, ಜಿ.ಸೋಮಶೇಖರರೆಡ್ಡಿ ಹಾಗೂ ಕೊನೆಯ ಕ್ಷಣದಲ್ಲಿ ಶ್ರೀರಾಮುಲು ಅವರು ಪಕ್ಷಕ್ಕೆ ಕರೆತಂದ ಎನ್‌.ವೈ.ಗೋಪಾಲಕೃಷ್ಣ ಅವರಷ್ಟೇ ಶಾಸಕರಿದ್ದಾರೆ. ಮಾಜಿ ಸಂಸದ ಬಿ.ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದ ಬಳಿಕ ಬಳ್ಳಾರಿ ಮೇಲೆ ಹಿಂದಿನಷ್ಟು ಹಿಡಿತ ಇಲ್ಲದಿರುವುದು ಪಕ್ಷಕ್ಕೆ ಆತಂಕ ಮೂಡಿಸಿದೆ ಎನ್ನಲಾಗಿದೆ.

ವಿಧಾನಸಭೆಯಲ್ಲಿ ಪಕ್ಷದ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಜಮಖಂಡಿ ವಿಧಾನಸಭೆ ಉಪಚುನಾವಣೆಯೂ ಬಿಜೆಪಿಗೆ ಮಹತ್ವದ್ದೆನಿಸಿದೆ. ಹಾಗಾಗಿ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಸಂಗಮೇಶ್‌ ನಿರಾಣಿ ಅವರೊಂದಿಗೆ ಪಕ್ಷದ ನಾಯಕರು ಮಾತುಕತೆ ನಡೆಸಿ ಸಮಾಧಾನಪಡಿಸಿದ್ದಾರೆ. ಜತೆಗೆ ಮಾಜಿ ಶಾಸಕ ಬಸವರಾಜ ಸಿಂಧೂರ ಅವರೊಂದಿಗೂ ಮಾತುಕತೆ ನಡೆಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಪ್ರೇರೇಪಿಸುವ ಕಾರ್ಯ ನಡೆದಿದೆ.

ಈ ಮೂರು ಉಪಚುನಾವಣೆ ಗೆಲ್ಲುವ ಅವಕಾಶ ಕೈತಪ್ಪದಂತೆ ನೋಡಿಕೊಳ್ಳಲು ಹಿರಿಯ ನಾಯಕರ ದಂಡೇ ಪ್ರಚಾರಕ್ಕಿಳಿದಿದೆ. ಹಾಗಾಗಿ ಪಕ್ಷ ವಿರೋಧಿ ಚಟುವಟಿಕೆ, ಬಂಡಾಯ ಇತರೆ ಕಾರಣಕ್ಕೆ ಪಕ್ಷದಿಂದ ಅಮಾನತುಪಡಿಸಿದ್ದ ಆದೇಶವನ್ನು ಹಿಂಪಡೆದು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಯಡಿಯೂರಪ್ಪ ಸೂಚಿಸಿದ್ದಾರೆ. ಜತೆಗೆ ಸ್ಥಳೀಯವಾಗಿ ಪ್ರಬಲವಾಗಿರುವ ಸಮುದಾಯದ ಮತದಾರರನ್ನು ಸೆಳೆಯಲು ಆಯಾ ಸಮುದಾಯದ ನಾಯಕರನ್ನೇ ಕರೆಸಿ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಮತ ಗಳಿಕೆ ಪ್ರಮಾಣ ಏರಿಕೆಗೆ ಆದ್ಯತೆ
ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭೆ ಉಪಚುನಾವಣೆಗೂ ಉಸ್ತುವಾರಿಗಳನ್ನು ನಿಯೋಜಿಸಿರುವ ಕಮಲ ಪಕ್ಷ ಕ್ಷೇತ್ರಗಳಲ್ಲಿ ಭದ್ರವಾಗಿ ನೆಲೆಯೂರಲು ಪ್ರಯತ್ನಿಸುತ್ತಿದೆ. ಈ ಎರಡೂ ಕ್ಷೇತ್ರದಲ್ಲಿ ಗೆಲ್ಲುವುದಾಗಿ ಬಿಜೆಪಿ ಹೇಳುತ್ತಿದ್ದರೂ ಗಮನಾರ್ಹ ಪ್ರಮಾಣದಲ್ಲಿ ಮತ ಗಳಿಸುವ ಗುರಿಯೊಂದಿಗೆ ಪ್ರಚಾರಕ್ಕಿಳಿದಿದೆ ಎನ್ನಲಾಗಿದೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಗೆ ಪೂರ್ವಭಾವಿ ಎಂಬಂತಿರುವ ಉಪಚುನಾವಣೆಯಲ್ಲಿ ಫ‌ಲಿತಾಂಶ ಏನೇ ಬಂದರು ಶಿವಮೊಗ್ಗ, ಬಳ್ಳಾರಿ ಹಾಗೂ ಜಮಖಂಡಿ ಕ್ಷೇತ್ರದ ಉಪಚುನಾವಣೆಯ ಫ‌ಲಿತಾಂಶ ಬಿಜೆಪಿಯ ವರ್ಚಸ್ಸಿಗೆ ಅಳತೆಗೋಲು ಎನ್ನಲಾಗುತ್ತಿದೆ.

ಐದು ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಗೆಲುವಿಗೆ ಶ್ರಮಿಸಲಾಗುತ್ತಿದೆ. ಶಿವಮೊಗ್ಗ, ಬಳ್ಳಾರಿ ಹಾಗೂ ಜಮಖಂಡಿ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಲಾಗಿದೆ. ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದೆ. ಹಾಗೆಂದು ಅತಿಯಾದ ಆತ್ಮವಿಶ್ವಾಸವಿಟ್ಟುಕೊಳ್ಳದೆ ಎಲ್ಲ ವರ್ಗದ ಮತದಾರರನ್ನು ಸೆಳೆಯಲು ಸರ್ವ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಮತದಾನ ದಿನದವರೆಗೂ ಯಾವುದೇ ರೀತಿಯಲ್ಲೂ ಲೋಪವಾಗದಂತೆ ಎಚ್ಚರಿಕೆಯಿಂದ ಸಂಘಟನೆ ಮುಂದುವರಿಸಲಾಗುವುದು. ಮಂಡ್ಯ, ರಾಮನಗರದಲ್ಲಿ ಪಕ್ಷ ಸಂಘಟನೆ ಆಳವಾಗಿ ಬೇರೂರದ ಕಾರಣ ಭದ್ರ ನೆಲೆ ಕಂಡುಕೊಳ್ಳುವ ಜತೆಗೆ ಗೆಲುವಿಗೆ ಶ್ರಮಿಸಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಮುಖ ನಾಯಕರೊಬ್ಬರು ತಿಳಿಸಿದರು.

– ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next