Advertisement

ಉಪ ಚುನಾವಣೆ: ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ನಮದೇ

11:48 AM Oct 22, 2018 | Team Udayavani |

ಮೈಸೂರು: ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಸಮಿಶ್ರ ಸರ್ಕಾರದ ಪಕ್ಷಗಳ ಅಭ್ಯರ್ಥಿಗಳು ಗೆಲ್ಲುತ್ತಾರೆ, ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ನಮದೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. 

Advertisement

ನಗರದಲ್ಲಿ ಭಾನುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉಪ ಚುನಾವಣೆ ಹಿನ್ನೆಲೆಯಲ್ಲಿ ಐದು ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ. ಸೋಮವಾರದಂದು ಬಳ್ಳಾರಿಯಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದು, ಅ.24ಕ್ಕೆ ಮಂಡ್ಯದಲ್ಲಿ ಪ್ರಚಾರ ಮಾಡುತ್ತೇನೆ. ನಂತರ ಅ.25ರಂದು ಶಿವಮೊಗ್ಗ, ಅ.26 ಮತ್ತು 27ಕ್ಕೆ ಜಮಖಂಡಿಯಲ್ಲಿ,

ಅ.28-29 ಬಳ್ಳಾರಿ, ಅ.30 ಶಿವಮೊಗ್ಗ, ಅ.31 ಮತ್ತು ನವೆಂಬರ್‌ 1ಕ್ಕೆ ಜಮಖಂಡಿಯಲ್ಲಿ ಪ್ರಚಾರ ಮಾಡುತ್ತೇನೆ. ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಜಯಗಳಿಲಿದ್ದು, ಜಮಖಂಡಿ ಹಾಗೂ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಹೇಳಿದರು. 

ಒಣ ಜಂಬ ಬಿಡಬೇಕು: ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಅವಳ ಹಲ್ಲೇನು ಬಿಗಿಯಾಗಿದೆಯಾ?, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಅವಳು ಸೋತಿಲ್ಲವೇ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಅವಳಿಗೆ ಇದೆಯಾ ಎಂದು ಏಕವಚನದಲ್ಲೇ ನಿಂದಿಸಿದರು. ಅಲ್ಲದೇ ಓಟುಗಳೇನು ಯಡಿಯೂರಪ್ಪನ ಜೇಬಿನಲ್ಲಿಲ್ಲಾ, ಬಿಜೆಪಿಯವರು ಒಣ ಜಂಬ ಬಿಡಬೇಕು. ನಮ್ಮ ಸರ್ಕಾರ ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ. ಈಗಾಗಲೇ ಹಲವು ಡೆಡ್‌ಲೈನ್‌ಗಳು ಮುಗಿದಿವೆ ಎಂದರು. 

ಮುಗಿದ ಅಧ್ಯಾಯ: ನಾಡಹಬ್ಬ ದಸರಾ ದಸರಾ ಮುಕ್ತಾಯಗೊಂಡಿದ್ದು, ದಸರಾ ಮುಗಿದ ಅಧ್ಯಾಯ. ಹೀಗಾಗಿ ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ನುಂಗಿದ ತುತ್ತು ರುಚಿ ಹತ್ತುವುದಿಲ್ಲ, ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಮುಂಬರುವ 2019ರ ದಸರಾದಲ್ಲಿ ನೋಡೋಣ ಎಂದು ದಸರಾ ಆಚರಣೆಯಲ್ಲಿನ ಗೊಂದಲಗಳ ಬಗ್ಗೆ ಕೇಳಿದ ಪ್ರಶ್ನೆಗೆ ಮಾಧ್ಯಮದವರ ಮೇಲೆ ಗರಂ ಆದ ಮಾಜಿ ಸಿಎಂ ಸಿದ್ದರಾಮಯ್ಯ. 

Advertisement

ರಾಜಕೀಯ ಚಟುವಟಿಕೆ ಜೋರು: ಮೈಸೂರಿನ ಶಾರದಾದೇವಿ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಭಾನುವಾರ ರಾಜಕೀಯ ಚಟುವಟಿಕೆ ಗರಿಗೆದರಿತ್ತು. ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ಸ್ಥಳೀಯ ಕಾಂಗ್ರೆಸ್‌ ಮುಖಂಡರು, ದಸರಾ ಕಾರ್ಯಕ್ರಮಗಳಲ್ಲಿ ಉಂಟಾದ ಅವ್ಯವಸ್ಥೆ, ಗೊಂದಲಗಳ ಬಗ್ಗೆ ಮಾಹಿತಿ ನೀಡಿದರು.

ಇದೇ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ನಗರ ಕಾಂಗ್ರೆಸ್‌ ಆರ್‌.ಮೂರ್ತಿ ದಸರಾ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯಗೆ ಮಾಹಿತಿ ನೀಡಿದರು. ಇದೇ ವೇಳೆ ಜೆಡಿಎಸ್‌ ಬಂಡಾಯ ನಾಯಕ ಹರೀಶ್‌ಗೌಡ ಸಹ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ, ಕುತೂಹಲ ಮೂಡಿಸಿದರು.

ಪಾಲಿಕೆ ಚುನಾವಣೆಯಲ್ಲಿ ಗೆದ್ದಿರುವ ಹರೀಶ್‌ ಗೌಡ ಬೆಂಬಲಿತ ಪಕ್ಷೇತರ ಸದಸ್ಯರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನ ನಡೆದಿದ್ದು, ಆ ಮೂಲಕ ಮುಂದಿನ ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಕಾರ್ಯತಂತ್ರ ರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next