Advertisement

By election; ಶಿಗ್ಗಾವಿ ಟಿಕೆಟ್‌ ಆಕಾಂಕ್ಷಿಗಳ ಎದೆಯಲ್ಲಿ ಢವಢವ

06:20 PM Oct 17, 2024 | Team Udayavani |

ಹಾವೇರಿ: ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಎದೆಯಲ್ಲಿ ಢವಢವ ಶುರುವಾಗಿದ್ದು, ಕೊನೆ ಕ್ಷಣದಲ್ಲಿ ಶತಾಯಗತಾಯ ಟಿಕೆಟ್‌ ಗಿಟ್ಟಿಸಿಕೊಳ್ಳಲು ಪಕ್ಷದ ವರಿಷ್ಠರು, ನಾಯಕರ ದುಂಬಾಲು ಬೀಳುತ್ತಿದ್ದಾರೆ.

Advertisement

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಸದರಾಗಿ ಆಯ್ಕೆಯಾದ ಬಳಿಕ ಶಿಗ್ಗಾವಿ ಕ್ಷೇತದ ಶಾಸಕ
ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳು ಕಳೆದ ನಾಲ್ಕೈದು ತಿಂಗಳಿಂದ ಕ್ಷೇತ್ರಾದ್ಯಂತ ಸಂಚರಿಸಿ ಸಭೆ, ಸಮಾರಂಭಗಳನ್ನು ಮಾಡಿ ಪ್ರಚಾರ ಕೈಗೊಂಡು ಪಕ್ಷದ ಮುಂದಿನ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಂಡಿದ್ದರು.

ಮಂಗಳವಾರ ಉಪಚುನಾವಣೆ ಘೋಷಣೆಗೊಂಡ ಬೆನ್ನಲ್ಲೆ ಕಾಂಗ್ರೆಸ್‌, ಬಿಜೆಪಿ ಪಕ್ಷದ ಆಕಾಂಕ್ಷಿಗಳು ಚುರುಕುಗೊಂಡಿದ್ದು ಮುಖಂಡರು, ಮಠಾಧೀಶರ ದುಂಬಾಲು ಬಿದ್ದು, ಕೊನೆ ಕ್ಷಣದಲ್ಲಿ ಟಿಕೆಟ್‌ ಗಿಟ್ಟಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ಅಗರವಾಲ್‌ ಅವರು ಶಿಗ್ಗಾವಿಗೆ ಭೇಟಿ ನೀಡಿ
ಸ್ಥಳೀಯ ಮುಖಂಡರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು. ಆಗ ಬಹುತೇಕ ಆಕಾಂಕ್ಷಿಗಳು ಭರತ್‌ ಬೊಮ್ಮಾಯಿಗೆ ಟಿಕೆಟ್‌ ಕೊಡಿ ಇಲ್ಲದಿದ್ದರೆ ನಮಗೆ ಟಿಕೆಟ್‌ ಕೊಡಿ ಎಂದು 50ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಕ್ಷೇತ್ರದಲ್ಲಿ ಭರತ್‌ ಬೊಮ್ಮಾಯಿ ಓಡಾಡುತ್ತಿಲ್ಲ, ಹೀಗಾಗಿ ಇತರೆ ಆಕಾಂಕ್ಷಿಗಳು ತಮಗೇ ಟಿಕೆಟ್‌
ಸಿಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಪಕ್ಷದ ಹೈಕಮಾಂಡ್‌ ಯಾರಿಗೆ ಮಣೆ ಹಾಕಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಬಾರಿ ಕಮಲ ಅರಳಿಸಿದ್ದ ಬಸವರಾಜ ಬೊಮ್ಮಾಯಿ ಈಗ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ. ಕಾರಣ ಬಿಜೆಪಿ ಭದ್ರಕೋಟೆಯಾಗಿರುವ ಶಿಗ್ಗಾವಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಸೂಕ್ತ ಅಭ್ಯರ್ಥಿ ಕಣಕ್ಕಿಳಿಸಲು ಲೆಕ್ಕಾಚಾರ ನಡೆಸುತ್ತಿದೆ.

Advertisement

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗಿಂತಲೂ ಹೆಚ್ಚು ಮತಗಳಿಸಿರುವ ಕಾಂಗ್ರೆಸ್‌ ಹೆಚ್ಚಿನ ಹುಮ್ಮಸ್ಸಿನಲ್ಲಿದೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮಯೂರ್‌ ಜಯಕುಮಾರ್‌ ಹಾಗೂ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಉಸ್ತುವಾರಿ ಸಮಿತಿ ಸದಸ್ಯರು ಶಿಗ್ಗಾವಿಗೆ ಬಂದು ಆಕಾಂಕ್ಷಿಗಳಿಂದ ಅರ್ಜಿ ಪಡೆದುಕೊಂಡಿದ್ದರು. ಆಡಳಿತರೂಢ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಅಲ್ಪಸಂಖ್ಯಾತರಿಗೆ ಟಿಕೆಟ್‌ ಕೊಡಬೇಕೋ ಅಥವಾ ಬೇರೆಯವರಿಗೆ ಟಿಕೆಟ್‌ ಕೊಡಬೇಕೋ ಎಂಬ ಚರ್ಚೆ ಕೈ ಪಾಳೆಯದಲ್ಲಿ ಗಂಭೀರವಾಗಿ ನಡೆದಿದ್ದು, ಎರಡೂ¾ರು ದಿನಗಳಲ್ಲಿ ಅಭ್ಯರ್ಥಿ ಘೋಷಿಸುವ ಮೂಲಕ ಎಲ್ಲ ಕುತೂಹಲಕ್ಕೆ ತೆರೆ ಎಳೆಯುವ ಸಾಧ್ಯತೆಯಿದೆ.

ಬಿಜೆಪಿ -ಕಾಂಗ್ರೆಸ್‌ಗೆ ಪ್ರತಿಷ್ಠೆ
ಉಪಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬಿಜೆಪಿಗೆ ಕ್ಷೇತ್ರ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದರೆ,  ಆಡಳಿತರೂಢ ಕಾಂಗ್ರೆಸ್‌ಗೆ ಕ್ಷೇತ್ರವನ್ನು ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳಬೇಕಾಗಿದೆ.
ಆದ್ದರಿಂದ ಎರಡೂ ಪಕ್ಷಗಳು ರಣತಂತ್ರ ಹುಡೂವುದು ನಿಶ್ಚಿತವಾಗಿದೆ. ಅದಕ್ಕಾಗಿ ಅಳೆದು ತೂಗಿ ಟಿಕೆಟ್‌ ನೀಡಲು ಮುಖಂಡರು ನಿರ್ಧರಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷ ಯಾವ ಅಭ್ಯರ್ಥಿಗಳಿಗೆ ಮಣೆ ಹಾಕುತ್ತವೆ ಎಂಬ ಕುತೂಹಲ ಕ್ಷೇತ್ರದಲ್ಲಿ ಮನೆ ಮಾಡಿದೆ.

ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರದ ವಿಶೇಷತೆ
ಜಿಲ್ಲೆಯಲ್ಲೇ ಅತಿಹೆಚ್ಚು ಅಲ್ಪಸಂಖ್ಯಾತ ಜನಸಂಖ್ಯೆ ಹೊಂದಿದ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೆಚ್ಚಿನ ಅವ ಧಿಗೆ ಅಲ್ಪಸಂಖ್ಯಾತರಿಗೆ ಅವಕಾಶ ಕೊಟ್ಟಿದೆ. ಇಲ್ಲಿನ ಮತದಾರರು 8 ಬಾರಿ ಕಾಂಗ್ರೆಸ್‌ಗೆ ಮಣೆ ಹಾಕಿದ್ದರೆ 2 ಬಾರಿ ಪಕ್ಷೇತರರು, ಒಂದು ಬಾರಿ ಜೆಡಿಎಸ್‌, ಕಳೆದ ನಾಲ್ಕು ಬಾರಿ ಬಿಜೆಪಿಗೆ ಒಲಿದಿದ್ದಾರೆ. ನದಾಫ ಮಹಮ್ಮದಕಾಶೀಂಸಾಬ್‌ ಮರ್ಧಾನಸಾಬ್‌ 1972, 1978, 1983ರಲ್ಲಿ ಸತತ ಮೂರು ಸಾರಿ ಆಯ್ಕೆಯಾಗಿದ್ದಾರೆ.
1985ರ ಚುನಾವಣೆಯಲ್ಲಿ ಮಹಮ್ಮದಕಾಶೀಂಸಾಬ ಅವರನ್ನು ಪಕ್ಷೇತರ ಅಭ್ಯರ್ಥಿ ಎನ್‌.ವಿ. ಪಾಟೀಲ ಸೋಲಿಸಿದ್ದು ದಾಖಲೆಯಾಗಿದೆ. ಮಹಮ್ಮದ್‌ ಕಾಶೀಂಸಾಬ್‌ ಅವರ ನಂತರ ಎಂ.ಸಿ. ಕುನ್ನೂರ ಹಾಗೂ, ಸಂಸದ ಬಸವರಾಜ ಬೊಮ್ಮಾಯಿ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. 1952ರಲ್ಲಿ ದುಂಡಿಸಿ ಗ್ರಾಮದ ಸಿಎಂ ಬಸವರಾಜ
ಬೊಮ್ಮಾಯಿ ಅವರ ಅಜ್ಜ (ಬೊಮ್ಮಾಯಿ ತಾಯಿಯ ತಂದೆ) ಎಂ.ಬಿ. ಹುರುಳಿಕುಪ್ಪಿ ಅವರು ಮುಂಬೈ ಕರ್ನಾಟಕದಲ್ಲಿ ಮೊದಲ ಶಾಸಕರಾಗಿ ಆಯ್ಕೆಯಾಗಿದ್ದರು.

ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next