Advertisement
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿರೋಧ ಪಕ್ಷಗಳ ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ಮೆಟ್ಟಿನಿಂತು ನಾವು ಸಾಧಿಸಿರುವ ಈ ಗೆಲುವು ಹೊಸ ಸ್ಫೂರ್ತಿ ತುಂಬಿದೆ. ನಮ್ಮ ಸರ್ಕಾರದ ಸಾಧನೆಗಳ ಜನರು ಬೆಂಬಲಿಸುತ್ತಲೇ ಬಂದಿದ್ದಾರೆ. ನಾನು ದಂತದ ಗೋಪುರದಲ್ಲಿ ಕೂತವನಲ್ಲ, ನಿರಂತರವಾಗಿ ಜನರ ಜೊತೆ ಒಡನಾಟ ಇಟ್ಟುಕೊಂಡವನು, ನಮ್ಮ ಎಲ್ಲ ಗ್ಯಾರಂಟಿ ಯೋಜನೆಗಳಿಂದ ಫಲಾನುಭವಿಗಳು ಖುಷಿಯಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಧ್ಯಮಗಳ ಮೂಲಕ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರು. ಪ್ರಧಾನಿಯವರು ಕೂಡ ನಮ್ಮ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಸುಳ್ಳು ಹೇಳಿದರು ಎಂದರು.
ಎಲ್ಲಕ್ಕಿಂತ ಮಿಗಿಲಾಗಿ ಈ ಉಪಚುನಾವಣಾ ಫಲಿತಾಂಶ ಬೇರೆ ಕಾರಣಕ್ಕಾಗಿ ನನಗೆ ಮಹತ್ವದ್ದಾಗಿತ್ತು. ಈ ಬಾರಿ ನಾನು ಮುಖ್ಯಮಂತ್ರಿಯಾದ ನಂತರ ನನ್ನ ಮತ್ತು ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಾ ನನ್ನ ಚಾರಿತ್ರ್ಯ ಹನನ ಮಾಡುವ ಪ್ರಯತ್ನ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡುತ್ತಾ ಬಂದಿದ್ದಾರೆ. ರಾಜಕೀಯ ದ್ವೇಷಸಾಧನೆಗಾಗಿ ನನ್ನ ಕುಟುಂಬದ ವಿರುದ್ಧವೂ ಸುಳ್ಳು ಆರೋಪ ಮಾಡಿ ತನಿಖೆ ನಡೆಸುವಂತೆ ಮಾಡಿದರು. ನನ್ನನ್ನು ಕಟ್ಟಿಹಾಕುವ ದೂರಾಲೋಚನೆಯಿಂದಲೇ ಬಿಜೆಪಿ ನಾಯಕರು ನನ್ನ ಮತ್ತು ಪತ್ನಿಯ ಮೇಲೆ ಸುಳ್ಳು ಆರೋಪಗಳ ಮಾಡಿದ್ದರು. ಆದರೆ ಜನರು ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸುಳ್ಳುಗಳ ಯಾರೂ ನಂಬಿಲ್ಲ. ಇದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿ. ಶಿಗ್ಗಾವಿ ಗೆಲುವು ಬಿಜೆಪಿ ಕೋಮುವಾದಿ ರಾಜಕಾರಣಕ್ಕೆ ಉತ್ತರ:
ನಾವು ಶಿಗ್ಗಾವಿ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದಾಗ ಒಂದಷ್ಟು ವಿರೋಧ ವ್ಯಕ್ತವಾಗಿದ್ದು ನಿಜ. ಇದರಿಂದ ಹಿಂದೂ ಮತ ಧ್ರುವೀಕರಣವಾಗುತ್ತದೆ ಎಂಬ ಶಂಕೆ ಕೆಲವರು ವ್ಯಕ್ತಪಡಿಸಿದ್ದರು. ನನ್ನ ಮೇಲೆಯೂ ಒತ್ತಡ ಇತ್ತು. ಹೀಗಿದ್ದರೂ ಮುಸ್ಲಿಂ ವ್ಯಕ್ತಿಗೆ ನಾವು ಟಿಕೆಟ್ ಕೊಟ್ಟೆವು. ಜಾತಿ-ಧರ್ಮದ ಭೇದ ಮಾಡದೆ ಸಮರ್ಥ ಅಭ್ಯರ್ಥಿಗೆ ಮತ ಹಾಕಿ ಎಂದು ಕೇಳಿಕೊಂಡೆವು. ಜನ ನಮ್ಮ ಮಾತಿಗೆ ಒಪ್ಪಿಕೊಂಡು ಶಿಗ್ಗಾಂವಿಯಲ್ಲಿ ನಮ್ಮ ಅಭ್ಯರ್ಥಿಯ ಗೆಲ್ಲಿಸಿದ್ದಾರೆ. ಇದು ಬಿಜೆಪಿಯವರ ಕೋಮುವಾದಿ ರಾಜಕಾರಣಕ್ಕೆ ನೀಡಿದ ಉತ್ತರ ಎಂದು ನಾನು ಭಾವಿಸಿದ್ದೇನೆ. ಈ ಉಪ ಚುನಾವಣೆಯ ಸೋಲು ಬಿಜೆಪಿ ನಾಯಕರ ಆತ್ಮಾವಲೋಕನಕ್ಕೆ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ. ಇನ್ನಾದರೂ ಅವರು ದ್ವೇಷದ ರಾಜಕಾರಣ ಕೈಬಿಟ್ಟು ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡಲಿ ಎಂದು ಹೇಳಿದರು.