ಬೆಂಗಳೂರು: “ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನಗೆ ಒತ್ತಡ ಹೆಚ್ಚಿದೆ. ಆದರೆ, ಎಐಸಿಸಿ ಅಧ್ಯಕ್ಷರು ಹಾಗೂ ವರಿಷ್ಠರ ತೀರ್ಮಾನಕ್ಕೆ ಬದ್ಧ’ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಸದಾಶಿವನಗರ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಪಕ್ಷವು ಎರಡೂ¾ರು ದಿನಗಳಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧ. ಚನ್ನಪಟ್ಟಣ ತಾಲೂಕು ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲೂ ಪಕ್ಷದ ತೀರ್ಮಾನಕ್ಕೆ ಬದ್ಧ ಎನ್ನುವ ಮಾತು ಕೇಳಿಬಂದಿದೆ’ ಎಂದರು.
“ಚುನಾವಣೆಗೆ ನಮ್ಮ ಕಾರ್ಯಕರ್ತರಂತೂ ಸಜ್ಜಾಗಿದ್ದಾರೆ. ಶುಕ್ರವಾರ (ಅ.25)ವರೆಗೆ ಸಮಯವಿದೆ. ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಿಸಿದ್ದು, ಚನ್ನಪಟ್ಟಣಕ್ಕೆ ಮಾತ್ರ ಇನ್ನೂ ಘೋಷಿಸಿಲ್ಲ. ಅದರಂತೆ ಬಿಜೆಪಿಯವರು ಒಂದು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.ಯಾರು ಸ್ಪರ್ಧಿಸುತ್ತಾರೆ ಎನ್ನುವುದು ಆಯಾ ಪಕ್ಷದ ತೀರ್ಮಾನಕ್ಕೆ ಬಿಟ್ಟದ್ದು ಎಂದರು.
ಜೆಡಿಎಸ್ ಚಿಹ್ನೆ ಅಡಿ ಯೋಗೇಶ್ವರ್ ಸ್ಪರ್ಧಿಸಲು ಒಪ್ಪುತ್ತಿಲ್ಲ ಎಂದು ಗಮನ ಸೆಳೆದಾಗ, “ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅವರನ್ನೇ ಕೇಳಬೇಕು. ಇದು ಅವರ ಆಂತರಿಕ ವಿಚಾರ. ಮೈತ್ರಿ ಧರ್ಮದ ಪ್ರಕಾರ ಚನ್ನಪಟ್ಟಣವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರಬಹುದು ಎನ್ನುವುದು ನನ್ನ ಅನಿಸಿಕೆ. ಅಂತಿಮ ತೀರ್ಮಾನ ಅವರಿಗೆ ಸಂಬಂಧಪಟ್ಟಿದ್ದೇ ಹೊರತು ನಮಗಲ್ಲ’ ಎಂದರು.
ಕಾಂಗ್ರೆಸ್ ಹೈಕಮಾಂಡ್ ನಿಮ್ಮನ್ನು ಅಭ್ಯರ್ಥಿ ಎಂದು ಸೂಚಿಸಿದರೆ ಎಂದು ಕೇಳಿದಾಗ, “ನಾನು ಪಕ್ಷದ ಶಿಸ್ತಿನ ಸಿಪಾಯಿ. ನನ್ನ ಆಚಾರ-ವಿಚಾರಗಳನ್ನು ಪಕ್ಷದ ಮುಖಂಡರ ಗಮನಕ್ಕೆ ತರುತ್ತೇನೆ. ನಾನು ಅಧಿಕಾರಕ್ಕೋಸ್ಕರ ಚುನಾವಣೆಗೆ ನಿಲ್ಲಬೇಕು ಎನ್ನುವ ಉದ್ದೇಶ ಹೊಂದಿರುವವನಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅಥವಾ ಎಐಸಿಸಿ ಅಧ್ಯಕ್ಷರು ಸಿಕ್ಕರೆ ಭೇಟಿ ಮಾಡಿ ಚರ್ಚಿಸುತ್ತೇನೆ’ ಎಂದು ಹೇಳಿದರು.
ಮನರಂಜನೆ ಮಾತುಗಳು:
ನಿಖಿಲ್ ಅವರನ್ನು ಕಣಕ್ಕಿಳಿಸಲು ಕುಮಾರಸ್ವಾಮಿ ಹಿಂದೇಟು ಹಾಕಿದ್ದಾರೆಯೇ ಎಂದಾಗ, “ಅವರ ಪಕ್ಷದ ತೀರ್ಮಾನವನ್ನು ಅವರಿಗೆ ಕೇಳಬೇಕು. ಕುಮಾರಸ್ವಾಮಿಯವರು ಬೆಳಗ್ಗೆ ಒಂದು, ಸಂಜೆ ಒಂದು ಮಾತನಾಡುತ್ತಿರುತ್ತಾರೆ. ಇವರ ಮಾತುಗಳನ್ನು ಜನರು ಮನರಂಜನೆ ಅಂತ ತಿಳಿದುಕೊಂಡಿದ್ದಾರೆ. ಕುಮಾರಸ್ವಾಮಿ ಮಾತುಗಳು ಎಂದೂ ಗಂಭೀರವಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ಬೈಯ್ಯುವಾಗ ಮಾತ್ರ ಗಂಭೀರವಾಗಿರುತ್ತಾರೆ’ ಎಂದು ತೀಕ್ಷ್ಣವಾಗಿ ಹೇಳಿದರು.