Advertisement
ಕಾಂಗ್ರೆಸ್-ಜೆಡಿಎಸ್‌ನ ಅನೇಕ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಹೋಗಲಿದ್ದಾರೆ ಎಂಬ ಸುದ್ದಿ ಇದೀಗ ಅಧಿಕೃತ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಹೊಸಪೇಟೆ ಶಾಸಕ ಆನಂದಸಿಂಗ್ ರಾಜೀನಾಮೆ ನೀಡಿದ್ದು, ಶನಿವಾರ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 11 ಶಾಸಕರು ರಾಜೀನಾಮೆ ನೀಡಿದ್ದಾರೆ. ಸೋಮವಾರ ಆರ್.ಶಂಕರ್, ನಾಗೇಶ ನೀಡಿದ್ದಾರೆ. ಇದರಲ್ಲಿ ಉತ್ತರ ಕರ್ನಾಟಕಕ್ಕೆ ಸೇರಿದವರು 6 ಶಾಸಕರಿದ್ದಾರೆ. ಸ್ಪೀಕರ್ ರಮೇಶಕುಮಾರ ಶಾಸಕರ ರಾಜೀನಾಮೆ ಅಂಗೀಕಾರ ಮಾಡಿದರೆ ಉತ್ತರ ಕರ್ನಾಟಕದಲ್ಲಿ ಒಟ್ಟು ಆರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಪೈಕಿ ಮುಂಬೈ ಕರ್ನಾಟಕದಲ್ಲಿ ನಾಲ್ಕು ಹಾಗೂ ಹೈದರಾಬಾದ ಕರ್ನಾಟಕದಲ್ಲಿ ಎರಡು ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಆರು ಶಾಸಕರು ಕಾಂಗ್ರೆಸ್‌ನಿಂದಲೇ ಗೆದ್ದವರಾಗಿದ್ದಾರೆ.
Related Articles
Advertisement
ರಾಜೀನಾಮೆ ನೀಡಿದ ಶಾಸಕರ ಬಿಜೆಪಿ ಸೇರ್ಪಡೆಗೆ ಸ್ಥಳೀಯವಾಗಿ ಕೆಲವೊಂದು ವಿರೋಧಗಳು, ಈಗಾಗಲೇ ಅವರಿಂದಲೇ ಸೋಲು ಕಂಡ ಬಿಜೆಪಿ ಮಾಜಿ ಶಾಸಕರು ಸುಲಭವಾಗಿ ಒಪ್ಪಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಒಂದೆರಡು ಕ್ಷೇತ್ರಗಳಲ್ಲಿ ರಾಜೀನಾಮೆ ನೀಡಿದ ಶಾಸಕರು ಸ್ಪರ್ಧೆಗಿಳಿಯದೆ, ಬೇರೆ ರೀತಿಯ ಸೌಲಭ್ಯ ಪಡೆಯಲಿದ್ದಾರೆ.
ಗೋಕಾಕ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಬಿಜೆಪಿ ಸೇರಿದರೆ ಅಲ್ಲಿ ಅವರ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸಾಧ್ಯವಾದರೆ ಸಹೋದರರ ಮಧ್ಯ ಸವಾಲ್ ನಡೆಯಲಿದೆ. ಅಥಣಿ ಕ್ಷೇತ್ರದ ಶಾಸಕ ಮಹೇಶ ಕಮಟಳ್ಳಿ ಅವರು ಬಿಜೆಪಿ ಸೇರಿದರೆ ಅಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿರುವ ಮಾಜಿ ಸಚಿವ ಲಕ್ಷ್ಮಣ ಸವದಿ ಅವರ ಸ್ಥಾನ ಏನು ಎಂಬ ಪ್ರಶ್ನೆ ಉದ್ಭವಾಗುತ್ತದೆ. ಮೂಲಗಳ ಪ್ರಕಾರ ಮಹೇಶ ಕುಮಟಳ್ಳಿ ಬಿಜೆಪಿಯಿಂದ ಸ್ಪರ್ಧಿಸಿದರೆ ಲಕ್ಷ್ಮಣ ಸವದಿ ಅವರಿಗೆ ವಿಧಾನ ಪರಿಷತ್ತು ಸ್ಥಾನದ ಭರವಸೆ ಸಾಧ್ಯತೆ ಇದೆ. ಆದರೆ, ಕೆಲ ಮೂಲಗಳ ಪ್ರಕಾರ ಮಹೇಶ ಕುಮಟಳ್ಳಿಗೆ ನಿಗಮ-ಮಂಡಳಿ ಇಲ್ಲವೇ ಬೇರೆ ಅವಕಾಶ ನೀಡಿ, ಸವದಿ ಅವರನ್ನೇ ಸ್ಪರ್ಧೆಗಿಳಿಸಲಾಗುತ್ತಿದೆ ಎನ್ನಲಾಗಿದೆ.
ಕಾಗವಾಡ ಶಾಸಕ ಶ್ರೀಮಂತಗೌಡ ಪಾಟೀಲ ರಾಜೀನಾಮೆ ನೀಡಿದರೆ ಅಲ್ಲಿನ ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಅವರ ನಡೆ ಏನು ಎಂಬ ಪ್ರಶ್ನೆ ಬರುತ್ತದೆ. ಅಗತ್ಯ ಬಿದ್ದರೆ ಕೆಲವೊಂದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅದಲು-ಬದಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಿರೇಕೆರೂರುನಲ್ಲಿ ಬಿ.ಸಿ.ಪಾಟೀಲ ಬಿಜೆಪಿಗೆ ಬಂದರೆ ಮಾಜಿ ಶಾಸಕ ಯು.ಬಿ.ಬಣಕಾರ ಸ್ಥಾನವೇನು ಎಂಬ ಪ್ರಶ್ನೆಗೆ, ಕೆಲ ಮೂಲಗಳ ಪ್ರಕಾರ ಅವರಿಗೆ ವಿಧಾನ ಪರಿಷತ್ತು ಸ್ಥಾನ ನೀಡುವುದು, ಮುಂದಿನ ಚುನಾವಣೆಯಲ್ಲಿ ಬಿ.ಸಿ.ಪಾಟೀಲರನ್ನು ರಾಣೆಬೆನ್ನೂರು ಅಭ್ಯರ್ಥಿಯಾಗಿಸುವ ಸಂಧಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರತಾಪಗೌಡ ಪಾಟೀಲ ಈ ಹಿಂದೆ ಬಿಜೆಪಿಯಿಂದ ಶಾಸಕರಾಗಿ ಗೆದ್ದು ನಂತರ ಕಾಂಗ್ರೆಸ್ ಸೇರಿ ಶಾಸಕರಾಗಿದ್ದರು. ಇದೀಗ ಮತ್ತೆ ಬಿಜೆಪಿ ಹೋದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ ಸುಮಾರು 200 ಮತಗಳ ಅಂತರದಿಂದ ಸೋಲು ಕಂಡಿರುವ ಬಿಜೆಪಿಯ ಬಸನಗೌಡ ತುರವಿಹಾಳ ಕಾಂಗ್ರೆಸ್ ಕಡೆ ಮುಖ ಮಾಡಬಹುದೆ ಎಂಬ ಚರ್ಚೆಗಳು ಶುರುವಾಗಿವೆ. ಬಸನಗೌಡ ಅವರು ಕಾಂಗ್ರೆಸ್‌ನ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರ ಬೆಂಬಲಿಗರಾದವರು ಎಂಬುದು ಗಮನಾರ್ಹ.
ಹೊಸಪೇಟೆಯಲ್ಲಿ ಶಾಸಕ ಆನಂದಸಿಂಗ್ ಸಹ ಬಿಜೆಪಿಯಿಂದ ಶಾಸಕರಾದವರು, ಅವರ ರಾಜೀನಾಮೆ ಅಂಗೀಕಾರವಾಗಿ ಬಿಜೆಪಿಗೆ ಮರಳಿದರೆ ಇವರ ವಿರುದ್ಧ ಸೋತ ಗವಿಯಪ್ಪ ಅವರ ನಡೆ ಏನಾಗಬಹುದು ಎಂಬ ಕುತೂಹಲ ಹೆಚ್ಚಿದೆ. ಅದೇ ರೀತಿ ಯಲ್ಲಾಪುರದ ಶಾಸಕ ಶಿವರಾಮ ಹೆಬ್ಟಾರ ಅವರು ಬಿಜೆಪಿಗೆ ಹೋದರೆ, ಬಿಜೆಪಿಯ ವಿ.ಎಸ್.ಪಾಟೀಲ ನಡೆ ಏನಾಗುತ್ತದೆ ಎಂದು ನೋಡಬೇಕಾಗಿದೆ.
•ಅಮರೇಗೌಡ ಗೋನವಾರ