ರಾಯಚೂರು: ಉಪ ಚುನಾವಣೆ ನಿಮಿತ್ತ ಮಸ್ಕಿಯ ಸರಕಾರಿ ಪಪೂ ಕಾಲೇಜಿನಲ್ಲಿ ಸ್ಥಾಪಿಸಿದ ಸಖಿ ಮತಗಟ್ಟೆಯಲ್ಲಿ ಮೊದಲು ಮತ ಚಲಾಯಿಸಿದ ಮಹಿಳೆಗೆ ಸಸಿ ನೀಡಿ ಅಭಿನಂದಿಸಲಾಯಿತು. ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಸಖಿ ಮತಗಟ್ಟೆ ಕೇಂದ್ರವನ್ನು ಶೃಂಗಾರ ಮಾಡಲಾಗಿದೆ.
ಪ್ರಥಮ ಬಾರಿಗೆ ಮತದಾನ ಮಾಡಿದ ಅಕ್ಷತಾ ಮಸ್ಕಿ ಅವರಿಗೆ ಸಹಾಯಕ ಆಯುಕ್ತ ರಾಜಶೇಖರ್ ಡಂಬಳ ಸಸಿ ನೀಡಿ ಅಭಿನಂದಿಸಿದರು. ಇನ್ನೂ ಪ್ರತಾಪ ಗೌಡ ಪಾಟೀಲ್ ಹೊರತಾಗಿಸಿ ಅವರ ಕುಟುಂಬ ಸದಸ್ಯರು ಮಸ್ಕಿಯಲ್ಲಿ ಹಕ್ಕು ಚಲಾಯಿಸಿದರು. ತುರವಿಹಾಳನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಮತ ಚಲಾಯಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಶನಿವಾರ ಬೆಳಿಗ್ಗೆ ತಮ್ಮ ಮತ ಚಲಾಯಿಸಿದರು. ಬೆಳಗಾವಿ ನಗರದ ಸದಾಶಿವನಗರದಲ್ಲಿ ಮತದಾನ ಕೇಂದ್ರದಲ್ಲಿ ತಮ್ಮ ಮಕ್ಕಳ ಜೊತೆಯಲ್ಲಿ ಬಂದ ಮಂಗಲಾ ಅಂಗಡಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.
ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತ ವಾಗಿ ಆರಂಭಗೊಂಡಿದೆ. ಜಿಲ್ಲಾ ಚುನಾವಣಾಧಿಕಾರಿ ಡಾ ಕೆ ಹರೀಶ್ ಕುಮಾರ್ ಅವರು ಬೆಳಿಗ್ಗೆ ವಿವಿಧ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.