ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬಹುತೇಕ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಖಚಿತವಾಗಿದ್ದು, ಕಾಂಗ್ರೆಸ್ ಕೇವಲ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಭಾರೀ ಮುಖಭಂಗಕ್ಕೊಳಗಾಗಿದೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಉಪಚುನಾವಣೆಯಲ್ಲಿ 9 ಸ್ಥಾನಗಳನ್ನು ಕಳೆದುಕೊಂಡು, ಅನರ್ಹ ಶಾಸಕರು ಗೆಲುವಿನ ನಗು ಬೀರಿದ್ದಾರೆ. ಅಲ್ಲದೇ ಕಳೆದ ಬಾರಿ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಎಸ್ ಕೂಡಾ ಉಪಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಕಳೆದುಕೊಂಡು ಮುಖಭಂಗಕ್ಕೊಳಗಾಗಿದೆ.
ಉಪಚುನಾವಣೆಯ ನಡೆದ ಶಿವಾಜಿನಗರದಲ್ಲಿ ಕಾಂಗ್ರೆಸ್ ನ ರಿಜ್ವಾನ್ ಹಾಗೂ ಹುಣಸೂರಿನಲ್ಲಿ ಎಚ್.ಬಿ.ಮಂಜುನಾಥ್ ಮುನ್ನಡೆ ಸಾಧಿಸಿದ್ದಾರೆ. ಯಶವಂತಪುರದಲ್ಲಿ ಜೆಡಿಎಸ್ ನೇರಾನೇರ ಹಣಾಹಣಿ ನಡೆಸಿದ್ದರೂ, ಕೊನೆಯ ಹಂತದಲ್ಲಿ ಬಿಜೆಪಿಯ ಎಸ್ ಟಿ ಸೋಮಶೇಖರ್ ಮುನ್ನಡೆ ಸಾಧಿಸಿದ್ದಾರೆ. ಇದರೊಂದಿಗೆ ಜೆಡಿಎಸ್ ಎಲ್ಲಾ ಮೂರು ಸ್ಥಾನಗಳನ್ನು ಕಳೆದುಕೊಂಡಂತಾಗಿದೆ.
ಹದಿನೈದು ಕ್ಷೇತ್ರಗಳು ಯಾವುದು?
1)ಕಾಂಗ್ರೆಸ್ ನ ಬೈರತಿ ಬಸವರಾಜ(ಕೆಆರ್ ಪುರ), 2)ಎಸ್ ಟಿ ಸೋಮಶೇಖರ್(ಕಾಂಗ್ರೆಸ್-ಯಶವಂತಪುರ), 3)ರೋಷನ್ ಬೇಗ್ (ಕಾಂಗ್ರೆಸ್-ಶಿವಾಜಿನಗರ), 4)ಎಂಟಿಬಿ ನಾಗರಾಜ್ (ಕಾಂಗ್ರೆಸ್-ಹೊಸಕೋಟೆ), 5)ಡಾ.ಸುಧಾಕರ್(ಕಾಂಗ್ರೆಸ್-ಚಿಕ್ಕಬಳ್ಳಾಪುರ), 6)ರಮೇಶ್ ಜಾರಕಿಹೊಳಿ(ಕಾಂಗ್ರೆಸ್-ಗೋಕಾಕ್), 7)ಮಹೇಶ್ ಕುಮಟಳ್ಳಿ(ಅಥಣಿ), 8)ಶ್ರೀಮಂತ ಪಾಟೀಲ್ (ಕಾಂಗ್ರೆಸ್-ಕಾಗವಾಡ), 9)ಬಿಸಿ ಪಾಟೀಲ್(ಕಾಂಗ್ರೆಸ್-ಹಿರೇಕೆರೂರು), 10)ಶಿವರಾಮ್ ಹೆಬ್ಬಾರ್ (ಕಾಂಗ್ರೆಸ್-ಯಲ್ಲಾಪುರ), 11)ಆನಂದ್ ಸಿಂಗ್ (ಕಾಂಗ್ರೆಸ್-ವಿಜಯನಗರ), 12)ಆರ್ ಶಂಕರ್ (ಕೆಪಿಜೆಪಿ-ರಾಣೆಬೆನ್ನೂರು), 13)ಎಚ್. ವಿಶ್ವನಾಥ್(ಜೆಡಿಎಸ್-ಹುಣಸೂರು), 14)ಕೆ.ಗೋಪಾಲಯ್ಯ(ಜೆಡಿಎಸ್-ಮಹಾಲಕ್ಷ್ಮಿ ಲೇಔಟ್), 15)ನಾರಾಯಣಗೌಡ(ಜೆಡಿಎಸ್-ಕೆಆರ್ ಪೇಟೆ).