Advertisement

2020ರೊಳಗೆ ಸರ್ವರಿಗೂ ಸೂರು

01:36 PM Nov 20, 2018 | |

ಮುದ್ದೇಬಿಹಾಳ: 2020ರೊಳಗೆ ಎಲ್ಲ ಬಡವರಿಗೆ ಮನೆ ಒದಗಿಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಇದನ್ನು ನನಸು ಮಾಡಲು ಪ್ರತಿಯೊಬ್ಬ ಪಿಡಿಒ ಜಾಗೃತೆ ವಹಿಸಬೇಕು. ನನ್ನ ಶಾಸಕತ್ವದ 5 ವರ್ಷ ಆಡಳಿತ ಮುಗಿಯುವುದರೊಳಗೆ ಈ ಮತಕ್ಷೇತ್ರದಲ್ಲಿ ಯಾವೊಬ್ಬ ಬಡವರೂ ಮನೆ ಇಲ್ಲ ಎಂದು ಹೇಳುವಂತಾಗಬಾರದು ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಕುಂಟೋಜಿ ಗ್ರಾಪಂ ವ್ಯಾಪ್ತಿಯ ಕುಂಟೋಜಿ ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ 2ನೇ ಹಂತದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರಿಗಳು ಸಭೆಯಲ್ಲಿ ಜನರಿಂದ ಬರುವ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಜನಸಂಪರ್ಕ ಸಭೆಗಳು ಕಾಟಾಚಾರಕ್ಕೆ ನಡೆಯಬಾರದು. ಇಲ್ಲಿ ಜನರ ಸಮಸ್ಯೆಗೆ ಪರಿಹಾರ ಸಿಗಬೇಕು. ಈ ಸಭೆಯಲ್ಲಿ ವ್ಯಕ್ತವಾದ ಸಮಸ್ಯೆಗಳು ಮುಂದಿನ ಸಭೆಯಲ್ಲಿ ಚರ್ಚೆಗೆ ಬರದಂತೆ ಅಧಿಕಾರಿಗಳು ಕ್ರಮ ಜರುಗಿಸುವ ಮೂಲಕ ಸೂಕ್ತ ಸ್ಪಂದನೆ ನೀಡಬೇಕು. ಪಿಡಿಒಗಳು ಯಾವುದೇ ಒತ್ತಡಕ್ಕೆ ಒಳಗಾಗಬಾರದು. ಸರ್ಕಾರದ ವಸತಿ ಯೋಜನೆ ಅಡಿ ಫಲಾನುಭವಿಗಳನ್ನು ಸರ್ಕಾರದ ನಿರ್ದೇಶನದಂತೆ ಲಾಟರಿ ಮೂಲಕವೇ ಆಯ್ಕೆ ಮಾಡಬೇಕು. ಇದರಲ್ಲಿ ಪ್ರಭಾವ ಬೀರಲು, ಭ್ರಷ್ಟಾಚಾರಕ್ಕೆ ಅವಕಾಶ ಇರೊಲ್ಲ. ಯಾರದೇ ವಸೂಲಿಗೂ ಒಳಗಾಗಬೇಡಿ ಎಂದರು.

ಕುಡಿವ ನೀರಿನ ಸಮಸ್ಯೆ ಕುರಿತು ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಯ ಎಇಇ ಜಿ.ಎನ್‌. ಪಾಟೀಲ ಮತ್ತು ಸೆಕ್ಷನ್‌ ಅಧಿಕಾರಿ ರಾಠೊಡ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ನಿಮಗೆ ಜನರ ಸಮಸ್ಯೆ ಬಗೆಹರಿಸೋದು ಆಗದಿದ್ದರೆ ಬೇರೆ ಕಡೆ ವರ್ಗ ಮಾಡಿಸಿಕೊಳ್ಳಿ ಎಂದು ಕಟುವಾಗಿ ಹೇಳಿದ ಶಾಸಕರು ಕುಂಟೋಜಿ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆಯನ್ನು 2-3 ದಿನದೊಳಗೆ ಬಗೆಹರಿಸುವಂತೆ ಸೂಚಿಸಿದರು. 

ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಕುಂಟೋಜಿ ಗ್ರಾಪಂ ನಾನು ಪ್ರತಿನಿಧಿಸುವ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಈ ಭಾಗದಲ್ಲಿ ಸಾಕಷ್ಟು ಸಮಸ್ಯೆ ಇವೆ. ಅಧಿಕಾರಿಗಳು ಮಾತ್ರ ಸಮಸ್ಯೆಗಳಿಗೆ ಸ್ಪಂದಿ ಸುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಜಿಪಂ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚಿಸಿ ಕ್ರಮಕ್ಕೆ ಯೋಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ದೇವಸ್ಥಾನ ನಿರ್ಮಾಣ, ರಸ್ತೆ, ಶೌಚಾಲಯ, ಕುಡಿವ ನೀರು, ಪಡಿತರ ಕಾರ್ಡ್‌, ಸಾಮಾಜಿಕ ಭದ್ರತಾ ಯೋಜನೆ ಅಡಿ ವಿವಿಧ ಮಾಸಾಶನ ಸೇರಿದಂತೆ ಹಲವು ಬೇಡಿಕೆಗಳ ಅಹವಾಲನ್ನು ಗ್ರಾಮಸ್ಥರು ಶಾಸಕರಿಗೆ ಸಲ್ಲಿಸಿದರು. ಎಲ್ಲ ಅಹವಾಲುಗಳನ್ನು ಶಾಸಕರು ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರಿಸಿ ಕ್ರಮಕ್ಕೆ ಸೂಚಿಸಿದರು. ಈ ವೇಳೆ 25 ಹೊಸ ಪಡಿತರ ಕಾರ್ಡ್‌
ಫಲಾನುಭವಿಗಳಿಗೆ ಕಾರ್ಡ್‌ ವಿತರಿಸಲಾಯಿತು. 

Advertisement

ತಾಪಂ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಗ್ರಾಪಂ ಅಧ್ಯಕ್ಷೆ ಮಹಾದೇವಿ ಗಡ್ಡಿ ಸೇರಿದಂತೆ ಗ್ರಾಪಂ ಸದಸ್ಯರು, ಕಾರ್ಯ ನಿರ್ವಾಹಕ ಅಧಿಕಾರಿ ಡಾ| ಸುರೇಶ ಭಜಂತ್ರಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಕುಂಟೋಜಿ ಗ್ರಾಪಂ ವ್ಯಾಪ್ತಿಯಡಿ ಬರುವ ಗ್ರಾಮಗಳ ಜನತೆ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next