Advertisement
ನಿಮಗೆ ಒಂದು ದಿನ ಬೆಳಗ್ಗೆ ಐಸ್‌ಕ್ರೀಮ್ ತಿನ್ನುವ ಮನಸ್ಸಾಗುತ್ತದೆ. ಮನೆ ಬಳಿಯ ಐಸ್‌ಕ್ರೀಮ್ ಪಾರ್ಲರ್‌ಗೆ ಹೋಗುತ್ತೀರಿ. ಅಲ್ಲಿ ಹಲವು ಬಗೆಯ ಸ್ವಾದದ ಐಸ್‌ಕ್ರೀಮ್ ಆಯ್ಕೆಗಳಿರುತ್ತವೆ. ನೀವು ಸ್ಟ್ರಾಬೆರ್ರಿಯನ್ನು ಆರ್ಡರ್ ಮಾಡುತ್ತೀರಿ. ನೀವು, ಇದೀಗ ಐಸ್‌ಕ್ರೀಮ್ ಖರೀದಿಸಿದ್ದರ ಹಿಂದೆ ಅಸಂಖ್ಯ ಕಾಣದ ಕೈಗಳ ಪ್ರಭಾವ ಇದೆ ಎಂದರೆ ನಂಬುತ್ತೀರಾ? ನಂಬುವುದು ಕಷ್ಟ. ನಿಮಗೆ ಮನಸ್ಸಾಯಿತು ಎಂಬ ಕಾರಣಕ್ಕೆ ನಿಮ್ಮ ಇಚ್ಛೆಯಂತೆ, ನಿಮ್ಮಿಷ್ಟದ ಸ್ವಾದದ ಐಸ್‌ಕ್ರೀಮ್ ತಿಂದಿರಿ ಎಂದು ನೀವಂದುಕೊಳ್ಳುತ್ತೀರಿ. ಅದು ಪೂರ್ತಿ ನಿಜವಲ್ಲ ಎನ್ನುತ್ತದೆ “ಸ್ವಭಾವ ವಿಜ್ಞಾನ’ (ಬಿಹೇವಿಯರಲ್ ಸೈನ್ಸ್). ನಿಮ್ಮ ತಲೆಯಲ್ಲಿ ಸ್ಟ್ರಾಬೆರ್ರಿ ಐಸ್‌ಕ್ರೀಮ್ ಬೇಕು ಎನ್ನುವ ವಿಚಾರ ಮೂಡಲು ನಾನಾ ಕಾರಣಗಳು ಪ್ರಭಾವಿಸಿರುತ್ತವೆ. ಕೆಲ ದಿನಗಳ ಹಿಂದೆ ನೀವು ನೋಡಿದ ಜಾಹೀರಾತು ಇರಬಹುದು, ಪಕ್ಕದ ಮನೆಯಾತ ಅದೇ ಐಸ್‌ಕ್ರೀಮ್ ತಿನ್ನುವುದನ್ನು ನೀವೆಂದೋ ನೋಡಿದ್ದಿರಬಹುದು, ಹೀಗೆ ಇತ್ಯಾದಿ… ಅಂದರೆ, ನಮ್ಮೆಲ್ಲರ ಜೀವನದಲ್ಲಿ ನಾವು ಕೈಗೊಳ್ಳುವ ಪ್ರತಿಯೊಂದು ನಿರ್ಧಾರಗಳ ಹಿಂದೆಯೂ ಹೀಗೆ ಒಂದಲ್ಲಾ ಒಂದು ಪ್ರಭಾವಿ ಕಾರಣವಿರುತ್ತದೆ. ಒಬ್ಬ ವ್ಯಕ್ತಿ ದಿನಕ್ಕೆ 35,000 ನಿರ್ಧಾರಗಳನ್ನು ಕೈಗೊಳ್ಳುತ್ತಾನೆ ಎಂಬ ಮಾಹಿತಿ ಸಂಶೋಧನೆಯೊಂದರಿಂದ ತಿಳಿದುಬಂದಿತ್ತು. ಇವುಗಳಲ್ಲಿ ಬಹುತೇಕ ನಿರ್ಧಾರಗಳು ಸುಪ್ತ ಮನಸ್ಸಿನಲ್ಲಾಗುತ್ತವೆ ಎನ್ನುವುದು ಸಮಾಧಾನದ ವಿಷಯ. ಏಕೆಂದರೆ ಅಷ್ಟೂ ನಿರ್ಧಾರಗಳನ್ನು ಜಾಗೃತ ಮನಸ್ಸು ಕೈಗೊಳ್ಳುವಂತಾಗಿದ್ದರೆ ಹುಚ್ಚು ಹಿಡಿಯುವುದು ಖಂಡಿತ.
ಮಾರುಕಟ್ಟೆಯಲ್ಲಿನ ಸಂಸ್ಥೆಗಳು, ಜನರು ತಮ್ಮ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಖರೀದಿಸುವಂತೆ ಮಾಡಲು ಬಿಹೇವಿಯರಲ್ ಸೈನ್ಸ್ ಮೊರೆ ಹೋಗಿವೆ. ಉತ್ಪನ್ನದ ಮೇಲಿನ ಚಿಕ್ಕ ಪುಟ್ಟ ಬದಲಾವಣೆಗಳೂ, ಮಾರುಕಟ್ಟೆಯಲ್ಲಿ ಅಗಾಧ ಪ್ರಭಾವವನ್ನು ಉಂಟುಮಾಡಬಲ್ಲವು. ಮನುಷ್ಯರನ್ನು ಮ್ಯಾನಿಪ್ಯುಲೇಟ್(ಪ್ರಭಾವಿಸುವುದು) ಮಾಡುವುದು ತುಂಬಾ ಸುಲಭ ಎನ್ನುತ್ತಾರೆ ಬಿಹೇವಿಯರಲ್ ವಿಜ್ಞಾನಿಗಳು. ಉದಾಹರಣೆಗೆ, ಸೂಪರ್ ಮಾರ್ಕೆಟ್‌ಗಳಲ್ಲಿ ಎದುರಿಗೆ ಯಾವ ವಸ್ತುವನ್ನು ಇಟ್ಟಿರುತ್ತಾರೋ ಅವೇ ಹೆಚ್ಚು ಬಿಕರಿಯಾಗುವುದು. ತಮಗೆ ಬೇಕಾದುದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಖರೀದಿದಾರರಿಗೆ ಇರುತ್ತದೆ. ಆದರೆ, ಅದು ಅವರ ಸುತ್ತಲಿನ ಪ್ರಪಂಚವನ್ನು ಅವಲಂಬಿಸಿರುತ್ತದೆ. ಯಾವ ರೀತಿ, ಯಾವ ಆರ್ಡರ್‌ನಲ್ಲಿ ವಸ್ತುಗಳನ್ನು ಜೋಡಿಸಿರುತ್ತಾರೆ ಎನ್ನುವುದೂ ಮುಖ್ಯವಾಗುತ್ತದೆ. ಹೇಳಬೇಕೆಂದರೆ, ಒಂದಿಡೀ ಸೂಪರ್ ಮಾರ್ಕೆಟ್, ಮನೋಶಾಸ್ತ್ರವನ್ನು ಆಧರಿಸಿಯೇ ರೂಪಿತವಾಗಿರುತ್ತದೆ. ಯಾವುದೇ ವಸ್ತು ನಿರ್ದಿಷ್ಟ ಜಾಗದಲ್ಲಿ ಇರುವುದಕ್ಕೆ ಕಾರಣವಿರುತ್ತದೆ. ಸುಖಾಸುಮ್ಮನೆ ಅಥವಾ ಚೆಂದಗಾಣಿಸಲು ಮಾತ್ರವೇ ಇಟ್ಟಿರುವುದಿಲ್ಲ. ಇವೆಲ್ಲ ಕಸರತ್ತುಗಳ ಮುಖ್ಯ ಉದ್ದೇಶ, ಜನರು ಹೆಚ್ಚು ಹೆಚ್ಚು ವಸ್ತುಗಳನ್ನು ಖರೀದಿಸುವಂತೆ ಪ್ರಚೋದಿಸುವುದೇ ಆಗಿದೆ. ಉಪಯೋಗಗಳು ಅಸಂಖ್ಯ
ಜನರ ಅಭಿಪ್ರಾಯವನ್ನು ಬದಲಿಸುವ, ಅವರ ನಿರ್ಧಾರಗಳನ್ನು ಪ್ರಭಾವಿಸುವ ಕಲೆಯೇ “ನಡಿjಂಗ್’. ಇದನ್ನು ಪ್ರಚುರ ಪಡಿಸಿದವರಲ್ಲಿ ಪ್ರಮುಖರು ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ ಲೇಖಕ- ಸಂಶೋಧಕ ವಿಲಿಯಂ ಥೇಲರ್. ಈ ಕಲೆಯನ್ನು ಮಾರುಕಟ್ಟೆಯಲ್ಲಿ ವಸ್ತುಗಳನ್ನು ಬಿಕರಿ ಮಾಡಲಷ್ಟೇ ಅಲ್ಲ, ಇತರೆ ಸದುದ್ದೇಶಗಳಿಗೂ ಬಳಸಬಹುದು. ಉದಾಹರಣೆಗೆ, ಯುರೋಪ್‌ನ ದೇಶವೊಂದರಲ್ಲಿ ಸಾರ್ವಜನಿಕ ಶೌಚಾಲಯವೊಂದರಲ್ಲಿ ಸಮಸ್ಯೆಯಿತ್ತು. ಅಲ್ಲಿ, ಪುರುಷರು ಮೂತ್ರಿಸುವಾಗ ಅಶಿಸ್ತನ್ನು ಪ್ರದರ್ಶಿಸುತ್ತಿದ್ದರು. ಅದರಿಂದಾಗಿ ನೆಲದ ಮೇಲೆಲ್ಲಾ ಚೆಲ್ಲುವಂತಾಗಿ ಗಬ್ಬು ನಾತ ಬೀರುತ್ತಿತ್ತು. ಇದಕ್ಕೆ ಪರಿಹಾರ ದೊರಕಿಸಲು “ನಡ್ಜಿಂಗ್’ಗೆ ಮೊರೆ ಹೋಗಲಾಯಿತು. ಶೌಚಾಲಯ ಬಳಸುವವರು ಗುರಿ ತಪ್ಪದಂತೆ ಮಾಡಲು ಒಂದು ಉಪಾಯ ಹೂಡಿದರು. ಮೂತ್ರಿಸುವ ಜಾಗದ ನಡುವಿನಲ್ಲಿ ಬಿಲ್ವಿದ್ಯೆಯ ಪಂದ್ಯಾವಳಿಗಳಲ್ಲಿ ಇರುವಂಥ ಗುರಿಯ (ಬುಲ್ಸ್ ಐ) ಸ್ಟಿಕ್ಕರ್‌ಗಳನ್ನು ಅಂಟಿಸಲಾಯಿತು. ಮುಂದೆಂದೂ ಅಶಿಸ್ತಿನ ಸಮಸ್ಯೆ ತೋರಲಿಲ್ಲ. ಜನರು ಸರಿಯಾದ ಜಾಗದಲ್ಲಿ ಮೂತ್ರಿಸತೊಡಗಿದರು. ಇಲ್ಲಾಗಿದ್ದು ಇಷ್ಟೇ. ಜನರು ನಿಯಮ ಪಾಲಿಸುವಂತೆ ಸುಪ್ತವಾಗಿ ಪ್ರಚೋದಿಸಿದ್ದು. ಹೀಗೆ ಅಸಂಖ್ಯ ಜಾಗಗಳಲ್ಲಿ ನಡ್ಜಿಂಗ್ ಅನ್ನು ಬಳಸಿ ಅದರ ಸದುಪಯೋಗ ಪಡೆದುಕೊಳ್ಳಬಹುದು.
Related Articles
ಇಂದಿನ ಡಿಜಿಟಲ್ ಯುಗದಲ್ಲಿ ಬಹಳಷ್ಟು ಪೇಮೆಂಟ್ ಆಯ್ಕೆಗಳು ಇರುವುದರಿಂದ, ಖರ್ಚು ಮಾಡುವುದು ಇನ್ನಷ್ಟು ಸುಲಭವಾಗಿಬಿಟ್ಟಿದೆ. ದೇಶ- ವಿದೇಶದ ಜನರನ್ನು ಅಧ್ಯಯನಕ್ಕೊಳಪಡಿಸಿದ ತಜ್ಞರ ತಂಡವೊಂದು, ಖರ್ಚು ಮಾಡುವವರ ಸ್ವಭಾವವನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿದೆ.
Advertisement
1. ತಕ್ಷಣವೇ ಬೇಕುಈ ವಿಭಾಗಕ್ಕೆ ಸೇರುವ ಮಂದಿ ಬಹಳ ಬೇಗ ಪ್ರಚೋದನೆಗೆ ಒಳಗಾಗುತ್ತಾರೆ. ಇವರು ಹಿಂದೆಮುಂದೆ ಪರಾಮರ್ಶಿಸದೆ ಕೊಳ್ಳುವವರು. ಬಹುತೇಕ ಸಲ ಯಾವುದೋ ಗುಂಗಿನಲ್ಲಿ ಕೊಂಡುಕೊಂಡು, ನಂತರ “ಬೇಡವಾಗಿತ್ತೇನೋ’ ಎಂದು ಪಶ್ಚಾತ್ತಾಪ ಪಡುತ್ತಾರೆ. ಕ್ರೆಡಿಟ್ ಕಾರ್ಡ್, ಇ.ಎಂ.ಐ.ಗಳು ನಡೆಯುತ್ತಿರುವುದೇ ಇವರಿಂದ. ಇವರಿಗೊಂದು ಹಿತವಚನ- ಯಾವುದೇ ವಸ್ತು ತಮಗೆ ಬೇಕು ಎಂದು ಅನ್ನಿಸಿದ ತಕ್ಷಣವೇ ಖರೀದಿಸದೆ, ತಡ ಮಾಡಿ ಖರೀದಿಸುವ ಪಾಲಿಸಿ ಇಟ್ಟುಕೊಳ್ಳುವುದು ಒಳ್ಳೆಯದು. ಆಗ ಆ ವಸ್ತು ನಿಜಕ್ಕೂ ನಿಮಗೆ ಅಗತ್ಯವಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗುತ್ತದೆ. 2. ಚೌಕಾಸಿ ವೀರರು
ಇವರು ಚೌಕಾಸಿ ಮಾಡುವುದರಲ್ಲಿ ಎತ್ತಿದ ಕೈ. ಯಾವ ಯಾವ ಮಳಿಗೆಗಳಲ್ಲಿ ಎಷ್ಟೆಷ್ಟು ಆಫರ್‌ಗಳನ್ನು ಬಿಟ್ಟಿದ್ದಾರೆ. ಯಾವ ಯಾವ ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಯಾವ ಯಾವ ಆಫರ್‌ಗಳಿವೆ ಎಂಬಿತ್ಯಾದಿ ಮಾಹಿತಿ ಇವರ ಬಳಿ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ ಆ ಆಫರ್ ನಿಜವೋ, ಇಲ್ಲಾ ಟೋಪಿಯೋ ಎಂಬುದೂ ಅವರಿಗೆ ತಿಳಿದುಬಿಡುತ್ತದೆ. ಆದರೆ, ಆಫರ್ ಇದೆ ಎಂದಮಾತ್ರಕ್ಕೆ ಅಗತ್ಯವಿಲ್ಲದಿದ್ದರೂ ಕೊಳ್ಳುವುದು ಸರಿಯಲ್ಲ. ಹೀಗಾಗಿ ಈ ವರ್ಗಕ್ಕೆ ಸೇರಿದವರು ಆಫರ್ ಮತ್ತು ಬೇಕುಬೇಡಗಳ ನಡುವೆ ಬ್ಯಾಲೆನ್ಸ್ ಕಾಪಾಡಿಕೊಳ್ಳಬೇಕು. 3. ಆನ್‌ಲೈನ್ ಪಂಟರ್
ಈ ಪೈಕಿಯ ಖರೀದಿದಾರರು ಆನ್‌ಲೈನ್ ಮಾರುಕಟ್ಟೆ ಬೆಳೆಯುವ ಮುಂಚೆ ಒಂದಿನವೂ ಅಂಗಡಿ ಮಳಿಗೆಗಳಿಗೆ ತೆರಳಿ ಶಾಪಿಂಗ್ ಮಾಡದೇ ಇದ್ದವರು. ಈಗ ಎಲ್ಲ ವಸ್ತುಗಳೂ ಆನ್‌ಲೈನ್‌ನಲ್ಲಿ ಲಭ್ಯವಿರುವುದರಿಂದ ಕೂತಲ್ಲೇ ಖರೀದಿಸಿ ಶಾಪಿಂಗ್ ಗೀಳನ್ನು ಹತ್ತಿಸಿಕೊಂಡವರು. ಈ ವಿಭಾಗಕ್ಕೆ ಸೇರಿದವರು ತಮಗೆ ಅಗತ್ಯವಿಲ್ಲದಿದ್ದರೂ ಖರೀದಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಇವರು ಒಂದು ಬಜೆಟ್ ಮಿತಿ ಇಟ್ಟುಕೊಂಡು ಶಾಪಿಂಗ್ ಮಾಡುವುದು ಉತ್ತಮ. 4. ಲೆಕ್ಕಾಚಾರದ ವ್ಯಕ್ತಿಗಳು
ಇವರು ಹಳೆತಲೆಮಾರಿನ ಜನರನ್ನು ನೆನಪಿಸುತ್ತಾರೆ. ಇವರು ಖರ್ಚು ಮಾಡುವುದರಲ್ಲಿ ತುಂಬಾ ಲೆಕ್ಕಾಚಾರ ಮಾಡುವವರು. ಅಗತ್ಯವಿದ್ದರೆ ಮಾತ್ರ ಹಣ ಖರ್ಚು ಮಾಡುತ್ತಾರೆ. ಹಣವನ್ನು ಉಳಿತಾಯ ಮಾಡುವ ಮನೋಭಾವ ಇವರದು. ಹೀಗಾಗಿ, ಅವರ ಆರ್ಥಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ. ಇವರು ಒಂದು ವಿಚಾರದಲ್ಲಿ ಎಚ್ಚರ ವಹಿಸಬೇಕು. ಇವರ ಲೆಕ್ಕಾಚಾರದಿಂದಾಗಿ ಬದುಕಿನಲ್ಲಿ ಹಲವು ಅನುಕೂಲಗಳಿಂದ, ಖುಷಿಗಳಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. – ಹರ್ಷವರ್ಧನ್ ಸುಳ್ಯ