ಹುಣಸೂರು: ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹುಣಸೂರು ತಾಲೂಕಿನಲ್ಲಿ ಈವರೆಗೆ ಸುಮಾರು ಎರಡು ಸಾವಿರ ಕ್ವಿಂಟಾಲ್‌ನಷ್ಟು ರಾಗಿ ಖರೀದಿಸಿದೆ. ಈ ಬಾರಿ ಹಿಂಗಾರು ಮಳೆ ಉತ್ತಮವಾಗಿದ್ದರಿಂದ ರೈತರು ಎರಡನೇ ಬೆಳೆಯಾಗಿ ರಾಗಿಯನ್ನು ಸಾಕಷ್ಟು ಬೆಳೆದಿದ್ದಾರೆ.
ಇದೀಗ ಸರ್ಕಾರದ ಆದೇಶದಂತೆ ನಗರದ ಎಪಿಎಂಸಿಯಲ್ಲಿರುವ ಉಗ್ರಾಣ ಕಚೇರಿವತಿಯಿಂದ ಜ.29 ರಿಂದ ಖರೀದಿಸಲಾಗುತ್ತಿದ್ದು, ಇಲ್ಲಿಯವರೆಗೆ 548 ಮಂದಿ ರೈತರು ನೋಂದಾಯಿಸಿಕೊಂಡಿದ್ದಾರೆ. ಎಲ್ಲ ವ್ಯವಹಾರವು ಪಾರದರ್ಶಕತೆಯಿಂದ ಕೂಡಿದ್ದು, ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾವಣೆಯಾಗಲಿದೆ.
ಒಬ್ಬ ರೈತನಿಂದ 75 ಕ್ವಿ ಖರೀದಿ: ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 1900 ರೂ. ಹಾಗೂ ಬೆಂಬಲ ಬೆಲೆ 400ರೂ. ಸೇರಿ ಒಟ್ಟು 2300ರೂ.ಗೆ ಖರೀದಿ ಮಾಡಲಾಗುತ್ತಿದೆ. ಪ್ರತಿ ರೈತರು ಎಕರೆಗೆ ತರಿ 10 ಕ್ವಿ, ನೀರಾವರಿ 15 ಕ್ವಿ, ರಾಗಿಯನ್ನು ಮಾರಾಟ ಮಾಡಬಹುದು, ಒಬ್ಬ ರೈತರಿಂದ ಅತೀ ಹೆಚ್ಚು ಎಂದರೆ 75 ಕ್ವಿ.ರಾಗಿಯನ್ನು ಮಾತ್ರ ಖರೀದಿಸಲಾಗುವುದು.
ರಾಗಿ ಮಾರಾಟ ಮಾಡಲು ಕಂದಾಯ ಇಲಾಖೆಯಿಂದ ಬೆಳೆ ಧೃಡೀಕರಣಪತ್ರ, ಪ್ರಸ್ತುತ ಸಾಲಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ನಂಬರ್, ಪಾಸ್ ಪೋರ್ಟ್ ಭಾವಚಿತ್ರದೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕಿದೆ. ನಿಗದಿಗೊಳಿಸಿದ ದಿನಾಂಕದಂದು 50 ಕೆ.ಜಿ. ಚೀಲದಲ್ಲಿ ತುಂಬಿ ಉಗ್ರಾಣಕ್ಕೆ ತರಬೇಕು. ಪ್ರತಿಖಾಲಿ ಚೀಲಕ್ಕೆ 12 ರೂ ಪಾವತಿಸಲಾಗುವುದು. ರಾಗಿಯ ಗುಣಮಟ್ಟವನ್ನು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ ನಂತರವೇ ಖರೀದಿಸಲಾಗುತ್ತಿದೆ.
540 ನೋಂದಣಿ: ಫೆ.18 ರ ವರೆಗೆ 540 ಮಂದಿ ನೋಂದಾಯಿಸಿಕೊಂಡಿದ್ದು, ರೈತರು ಟ್ರಾಕ್ಟರ್‌ಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಖರೀದಿ ಕೇಂದ್ರದ ಉಗ್ರಾಣಕ್ಕೆ ರಾಗಿ ಮೂಟೆ ತರುತ್ತಿದ್ದು, ಈಗಾಗಲೇ 300ಕ್ಕೂ ಹೆಚ್ಚು ರೈತರು ಮಾರಾಟ ಮಾಡಿದ್ದಾರೆ.
ಫೆ.28ರವರೆಗೆ ನೋಂದಣಿಗೆ ವಿಸ್ತರಣೆ: ರಾಗಿ ಖರೀದಿ ವ್ಯವಸ್ಥೆಯನ್ನು ಸರ್ಕಾರದ ನಿರ್ದೇಶನದಂತೆ ಫೆ.28 ರವರೆಗೆ ವಿಸ್ತರಿಸಲಾಗಿದ್ದು, ರೈತರು ಸೂಕ್ತ ದಾಖಲಾತಿಯೊಂದಿಗೆ ಎಪಿಎಂಸಿ ಯಾರ್ಡ್ ನಲ್ಲಿರುವ ಉಗ್ರಾಣ ಕಚೇರಿಯಲ್ಲಿ ನೋಂದಾಯಿಸಿಕೊಂಡು ನಿಗದಿತ ದಿನಾಂಕದಂದು ತರುವಂತೆ ಉಗ್ರಾಣದ ಉಪ ವ್ಯವಸ್ಥಾಪಕಿ ಗೌರಮ್ಮ ಮನವಿ ಮಾಡಿದ್ದಾರೆ.
ಬಯೋಮೆಟ್ರಿಕ್‌ಗಾಗಿ ಹೆಬ್ಬೆಟ್ಟು ಮಾದರಿ ಅಪ್‌ಲೋಡ್ ಆಗದೆ ತೊಂದರೆಯಾಗುತ್ತಿದೆ.ಇದಕ್ಕಾಗಿ ಜಿಲ್ಲಾಧಿಕಾರಿಗಳು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕಲ್ಲದೆ ಇನ್ನೂ ಸಾಕಷ್ಟು ರೈತರ ಬಳಿ ರಾಗಿ ಇದ್ದು, ಮಾರ್ಚ್ ಅಂತ್ಯದ ವರೆಗೆ ನೋಂದಣಿಗೆ ಅವಕಾಶ ಕಲ್ಪಿಸಬೇಕು.
-ಅಸ್ವಾಳು ಶಂಕರೇಗೌಡ, ರೈತ ಸಂಘದ ಕಾರ್ಯದರ್ಶಿ
* ಸಂಪತ್ ಕುಮಾರ್ ಹುಣಸೂರು