ಅಫಜಲಪುರ: ಬೆಳೆಗೆ ಬೆಂಬಲ ಬೆಲೆ ನೀಡಿ ರೈತರಿಗೆ ಅನೂಕುಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ತೊಗರಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಆದರೆ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ಮತ್ತು ದಲ್ಲಾಳಿಗಳ ಕಮಿಷನ್ ಧಂದೆ ಮಿತಿ ಮೀರಿದ್ದು ಅವ್ಯವಹಾರ ನಡೆದಿದೆ ಎಂದು ತಾಲೂಕು ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಆರೋಪಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ತೊಗರಿ ಖರೀದಿ ಕೇಂದ್ರಕ್ಕೆ ರೈತರೊಂದಿಗೆ ಮುತ್ತಿಗೆ ಹಾಕಿ ಮಾತನಾಡಿ, ಅಧಿಧಿಕಾರಿಗಳು ಮತ್ತು ದಲ್ಲಾಳಿಗಳು ಸೇರಿಕೊಂಡು ಬೇರೆ ಕಡೆಯಿಂದ 4000ರೂ.ದಿಂದ 4500ರೂ.ದಂತೆ ತಾವೇ ತೊಗರಿ ಖರೀದಿಸಿ, ಸರ್ಕಾರಿ ಖರೀದಿ ಕೇಂದ್ರಕ್ಕೆ ತಂದು ಯಾರಾದರೂ ರೈತರ ಹೆಸರಿನಲ್ಲಿ ಸರ್ಕಾರದ ಬೆಂಬಲ ಬೆಲೆ ಸೇರಿಸಿ ಅನ್ಯಾಯ ಮಾಡುತ್ತಿದ್ದಾರೆ.
ಇದರಿಂದಾಗಿ ನಿಜವಾದ ಬಡ ರೈತರಿಗೆ ಭಾರಿ ಅನ್ಯಾಯವಾಗುತ್ತಿದೆ. ಅಲ್ಲದೆ ವಾರಗಟ್ಟಲೇ ರೈತರು ತಮ್ಮ ತೊಗರಿ ಇಟ್ಟುಕೊಂಡು ಖರೀದಿ ಕೇಂದ್ರದ ಎದುರು ಕಾಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಆದೇಶದ ಪ್ರಕಾರ ರೈತರಿಂದ ಎಕರೆಗೆ ಐದು ಚೀಲ ಖರೀದಿಸಬೇಕು ಎಂದಿದೆ.
ಆದರೆ ಇಲ್ಲಿ ಸರ್ಕಾರಿ ಆದೇಶವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಒಬ್ಬ ರೈತನ ಹೆಸರಿನ ಮೇಲೆ ನೂರಾರು ಚೀಲ ತೊಗರಿಯನ್ನು ಖರೀದಿಸಲಾಗಿದೆ. ಅಲ್ಲದೆ ಖರೀದಿ ಕೇಂದ್ರ ಆರಂಭಕ್ಕೂ ಮೊದಲು ರೈತರ ಸರ್ವೇ ನಂಬರ್, ಎಷ್ಟು ಎಕರೆ ಇದೆ, ಮೊಬೈಲ್ ಸಂಖ್ಯೆ ಪಡೆಯಲಾಗಿತ್ತು. ಆದರೆ ಈಗ ರಿಜಿಸ್ಟರ್ ಪ್ರಕಾರ ನಡೆದುಕೊಳ್ಳದೆ ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳುತ್ತಿದ್ದಾರೆ.
ಇದರ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸುತ್ತಿಲ್ಲ. ಹೀಗಾಗಿ ರೈತರು ರೋಸಿ ಹೋಗಿದ್ದಾರೆ. ಒಟ್ಟಿನಲ್ಲಿ ತೊಗರಿ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದ್ದು ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ ಶಶಿಕಲಾ ಪಾದಗಟ್ಟಿ , ಗ್ರೇಡ್ 2 ತಹಶೀಲ್ದಾರ ಪಿ.ಜಿ ಪವಾರ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಮಾತನಾಡಿ, ತೊಗರಿ ಖರೀದಿ ಕೇಂದ್ರದ ಮುಖ್ಯಸ್ಥ ಎ.ಜಿ ಮುರಾಳಕರ್, ಟಿಎಪಿಸಿಎಂಎಸ್ ವ್ಯವಸ್ಥಾಪಕ ಎ.ಎಸ್.ಎಸ್ ಕಲಶೆಟ್ಟಿ ಅವರಿಗೆ ರಜಿಸ್ಟರ್ ಪ್ರಕಾರ ತೊಗರಿ ಖರೀದಿಸುವಂತೆ ತಾಕೀತು ಮಾಡಿದರು.
ಸಿದ್ದಪ್ಪ ಸಿನ್ನೂರ, ಸಾಯಬಣ್ಣ ಮ್ಯಾಕೇರಿ, ಸಿದ್ರಾಮ ಖೇಡಗಿಕರ್, ಸದಾಶಿವ ಪಾಟೀಲ, ತುಕಾರಾಮ ಸಲಗರ, ವಿಶ್ವನಾಥ ಸುತಾರ, ಸಾಯಬಣ್ಣ ಅರಳಗುಂಡಗಿ, ರಿಯಾಜುದ್ದಿನ್ ಚೌಧರಿ, ಮನೋಹರ ರಾಠೊಡ, ಶರಣಪ್ಪ ಕಲ್ಲೂರ ಸೇರಿದಂತೆ ಇತರರು ಇದ್ದರು.