ಕಲಬುರಗಿ: ನಾಲ್ಕೈದು ದಿನದೊಳಗೆ ಎರಡನೇ ಹಂತದ (ಬೆಂಬಲ ಬೆಲೆ) ತೊಗರಿ ಖರೀದಿ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನೋಂದಣಿ ಮಾಡಿರುವ 1.13 ಲಕ್ಷ ರೈತರ ಪೈಕಿ ಮೊದಲ ಹಂತದಲ್ಲಿ ಜಿಲ್ಲೆಯ 40 ಸಾವಿರ(ಶೇ. 33ರಷ್ಟು) ರೈತರಿಂದ 6.69 ಲಕ್ಷ ಕ್ವಿಂಟಲ್ ಖರೀದಿಸಲಾಗಿದೆ. ಉಳಿದ ರೈತರ ತೊಗರಿ ಖರೀದಿಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಸಕಾರಾತ್ಮವಾಗಿ ಪ್ರತಿಕ್ರಿಯೆ ನೀಡಿದೆ. ಹೀಗಾಗಿ ನಾಲ್ಕೈದು ದಿನದೊಗೆ ಮತ್ತೆ ತೊಗರಿ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯಕ್ಕೆ ಕೇಂದ್ರ ಸರ್ಕಾರ 16.57 ಲಕ್ಷ ಕ್ವಿಂಟಾಲ್ ಖರೀದಿಗೆ ಮೊದಲ ಹಂತದಲ್ಲಿ ನಿಗದಿ ಮಾಡಿ ಅನುಮತಿ ನೀಡಿತ್ತು. ಅದರಲ್ಲಿ ಜಿಲ್ಲೆಯಲ್ಲಿ 114 ಖರೀದಿ ಕೇಂದ್ರಗಳ ಮೂಲಕ ಅಂದಾಜು 400 ಕೋಟಿ ರೂ. ಮೊತ್ತದ 6.69 ಲಕ್ಷ ಕ್ವಿಂಟಲ್ ಖರೀದಿಸಲಾಗಿದೆ. ಈಗ ಉಳಿದಿರುವ ರೈತರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಎರಡನೇ ಹಂತದ ಖರೀದಿ ಪ್ರಕ್ರಿಯೇ ನಡೆಯುವುದು ನಿಶ್ಚಿತ. ಒಂದು ವೇಳೆ ರೈತರು ಮತ್ತೆ ಉಳಿದಲ್ಲಿ ಸರ್ಕಾರದ ಅನುಮತಿ ಮೇರೆಗೆ ಮುಂದಿನ ಹೆಜ್ಜೆ ಇಡಲಾಗುವುದು. ಉಳಿದಿರುವ ರೈತರ ಹೆಸರನ್ನು ನೋಂದಣಿ ಮಾಡಿಕೊಳ್ಳುವ ಪ್ರಸ್ತಾವನೆ ಜಿಲ್ಲಾಡಳಿತದ ಮುಂದಿಲ್ಲ. ಒಂದು ವೇಳೆ ಉಳಿದ ರೈತರ ಹೆಸರನ್ನು ನೋಂದಣಿ ಮಾಡಿಕೊಳ್ಳಿ ಎಂದಾಗ ಮಾತ್ರ ಕ್ರಮ ತೆಗೆದುಕೊಳ್ಳಲಾಗುವುದು. ಒಟ್ಟಾರೆ ಈಗ ನೋಂದಣಿ ಆಗಿರುವ 1.13 ಲಕ್ಷ ರೈತರ ತೊಗರಿ ಖರೀದಿಗೆ ಆದ್ಯತೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
34 ಕೇಂದ್ರಗಳಲ್ಲಿ ಕಡಲೆ ಖರೀದಿ: ಹೋಬಳಿಗೊಂದರಂತೆ ಜಿಲ್ಲೆಯಲ್ಲಿ 34 ಕಡಲೆ ಖರೀದಿ ಕೇಂದ್ರ ಆರಂಭಿಸಲಾಗುವುದು.
ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡೂಮೂರು ದಿನದೊಳಗೆ ರೈತರ ನೊಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಕಡಲೆಗೆ ಕೇಂದ್ರ ಸರ್ಕಾರ ರಾಜ್ಯದಲ್ಲಿ 20 ಲಕ್ಷ ಕ್ವಿಂಟಲ್‌ಗೆ ಅನುಮತಿ ನೀಡಿದೆ ಎಂದು ತಿಳಿಸಿದರು.
10 ಕ್ವಿಂಟಲ್‌ಗೆ ಅನುಮತಿ ಕೇಂದ್ರ ಸರ್ಕಾರ ಎರಡನೇ ಹಂತದ ತೊಗರಿ ಖರೀದಿಗೆ 10 ಲಕ್ಷ ಕ್ವಿಂಟಲ್‌ಗೆ ಅನುಮತಿ ನೀಡಿದೆ ಎನ್ನಲಾಗಿದೆ. ರಾಜ್ಯ ಸರ್ಕಾರ 35 ಲಕ್ಷ ಕ್ವಿಂಟಲ್ ಖರೀದಿಗೆ ಈಗ ಅನುಮತಿ ನೀಡುವಂತೆ ಕಳೆದ ಜನವರಿ 10ರಂದೇ ಕೇಂದ್ರಕ್ಕೆ ಬರೆದಿತ್ತು. ಈ ಪತ್ರಕ್ಕೆ ಅನುಗುಣವಾಗಿ 10 ಲಕ್ಷ ಕ್ವಿಂಟಲ್ ಗೆ ಅನುಮತಿ ನೀಡಿದೆ ಎಂದು ಗೊತ್ತಾಗಿದೆ. ಈ ಮೊದಲು 16.57 ಲಕ್ಷ ಕ್ವಿಂಟಲ್‌ಗೆ ಅನುಮತಿ ನೀಡಿದ್ದ ಕೇಂದ್ರ ಸರ್ಕಾರ ಈಗ 10 ಲಕ್ಷ ಕ್ವಿಂಟಲ್ ಅನುಮತಿ ನೀಡಿರುವುದು ಸೇರಿದಂತೆ ಒಟ್ಟಾರೆ 26.57 ಲಕ್ಷ ಕ್ವಿಂಟಲ್‌ಗೆ ಅನುಮತಿ ನೀಡಿದಂತಾಗುತ್ತದೆ.