Advertisement

ಸ್ಯಾನಿಟರಿ ನ್ಯಾಪ್‌ಕಿನ್‌ ಬೇರೆ ರಾಜ್ಯದಿಂದ ಖರೀದಿ!

10:25 AM Oct 21, 2017 | |

ಕಲಬುರಗಿ: ನೆರೆಯ ಮಹಾರಾಷ್ಟ್ರ ಸೇರಿ ಇತರೆ ರಾಜ್ಯಗಳಲ್ಲಿ ಮಹಿಳೆಯರಿಗೆ ಹಾಗೂ ಕಿಶೋರಿಯರಿಗೆ ಉಚಿತವಾಗಿ ವಿತರಿಸುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸ್ಥಳೀಯ ಸ್ತ್ರೀಶಕ್ತಿ ಸ್ವ ಸ್ವಹಾಯ ಸಂಘಗಳಿಂದ ಖರೀದಿಸುತ್ತಿದ್ದರೆ, ರಾಜ್ಯದಲ್ಲಿ ಮಾತ್ರ ಬೇರೆ ರಾಜ್ಯದ ಕಂಪನಿಯೊಂದರ ಮೂಲಕ ಖರೀದಿಸಲಾಗುತ್ತಿದೆ.

Advertisement

ಶುಚಿ ಯೋಜನೆ ಅಡಿ ಮಹಿಳೆಯರಿಗೆ ಹಾಗೂ ಕಿಶೋರಿಯರಿಗೆ ಉಚಿತವಾಗಿ ನೀಡುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ನೆರೆಯ ಆಂಧ್ರಪ್ರದೇಶ ಮೂಲದ ಕಂಪನಿಯೊಂದರ ಮೂಲಕ ಟೆಂಡರ್‌ ಇಲ್ಲದೆ 45 ಕೋಟಿ ರೂ. ವೆಚ್ಚದಲ್ಲಿ ಕಳೆದ 7 ವರ್ಷಗಳಿಂದ ಖರೀದಿಸುತ್ತ ಬಂದಿರುವುದು ಟೀಕೆಗೆ ಗುರಿಯಾಗಿದೆ. ಜಿಲ್ಲೆಯ ಅಫಜಲಪುರ ತಾಲೂಕಿನ ಅಮೋಘಸಿದ್ದ ಸ್ತ್ರೀಶಕ್ತಿ ಸ್ವ ಸಹಾಯ ಸಂಘ, ಬಾಗಲಕೋಟೆ, ಬೆಂಗಳೂರು ಹಾಗೂ ಗೌರಿ ಬಿದನೂರಿನ ಸ್ತ್ರೀಶಕ್ತಿ ಸಂಘಗಳು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ತಯಾರಿಸುವ
ಘಟಕಗಳನ್ನು ಹೊಂದಿವೆ. ರಾಜ್ಯಕ್ಕೆ ಅಗತ್ಯವಾಗಿ ಬೇಕಾಗುವ ನ್ಯಾಪ್‌ಕಿನ್‌ಗಳ ತಯಾರಿಕಾ ಶಕ್ತಿ ಹೊಂದಿವೆ. ಅಲ್ಲದೆ ಸಾವಿರಾರು ಮಹಿಳೆಯರಿಗೆ ಉದ್ಯೋಗ ಲಭಿಸುತ್ತದೆ. ಹೀಗಾಗಿ ಇಲ್ಲಿಯೇ ನ್ಯಾಪ್‌ಕಿನ್‌ಗಳನ್ನು ಖರೀದಿಸಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಅಧಿಕಾರಿಗಳು ಸ್ಯಾನಿಟರಿ ನ್ಯಾಪ್‌ಕಿನ್‌ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಖರೀದಿಸುವ ಭರವಸೆಯನ್ನೂ ನೀಡಿದ್ದರು. ಆದರೆ  ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಸ್ತಾವನೆಯನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ರಾಜ್ಯಮಟ್ಟದಲ್ಲಿ ಟೆಂಡರ್‌ ಕರೆಯದಿದ್ದರೂ ವಿಭಾಗಮಟ್ಟದಲ್ಲಾದರೂ ಟೆಂಡರ್‌ ಕರೆಯುವ, ಸ್ತ್ರೀಶಕ್ತಿ ಸಂಘಗಳ ಮೂಲಕ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಖರೀದಿಸುವ ಸಿದ್ಧತೆ ಮಾಡಿಕೊಂಡಿದ್ದರು. ಈ ಸಂಬಂಧ ಸಭೆ ನಡೆಸಿದ್ದರೂ ಕೊನೇ ಘಳಿಗೆಯಲ್ಲಿ ಅದೇ ಆಂಧ್ರದ ಮೂಲಕ ಎಚ್‌ಎಲ್‌ಎಲ್‌ ಲೈಫ್‌ ಕೇರ್‌ ಸಂಸ್ಥೆಗೆ ಮತ್ತೆ ಅವಕಾಶ ನೀಡಲಾಗಿದೆ.

ಸ್ತ್ರೀಶಕ್ತಿ ಸಂಘಗಳು 19.50 ರೂ.ಗೆ ಒಂದು ಕಿಟ್‌ ನೀಡುವುದಾಗಿ ನಮೂದಿಸಿದ್ದರೂ ಲೈಫ್‌ ಕೇರ್‌ ಸಂಸ್ಥೆಯಿಂದ 25 ರೂ.ನಂತೆ ಖರೀದಿ ಮಾಡಲಾಗಿದೆ. ಒಂದು ವೇಳೆ ಸ್ಥಳೀಯ ಸ್ತ್ರೀ ಸಂಘಗಳಿಂದ ಖರೀದಿಸಿದ್ದರೆ ಸರ್ಕಾರಕ್ಕೆ 14  ಕೋಟಿ ರೂ. ಉಳಿಯುತ್ತಿತ್ತು. ಹೀಗಾಗಿ ಸ್ತ್ರೀಶಕ್ತಿ ಸ್ವ ಸಹಾಯ ಸಂಘದ 400ಕ್ಕೂ ಹೆಚ್ಚು ಮಹಿಳಾ ಸದಸ್ಯರು ಅ. 30ರಿಂದ ಬೆಂಗಳೂರಿನ ಆನಂದರಾವ್‌ ವೃತ್ತದಲ್ಲಿರುವ ಆರೋಗ್ಯ ಮತ್ತು ಕುಟುಂಬ ಸೇವೆಗಳ ನಿರ್ದೇಶನಾಲಯ ಎದುರು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. 

ಆಂಧ್ರದ ಮೂಲದ ಎಚ್‌ಎಲ್‌ಎಲ್‌ ಲೈಫ್‌ ಕೇರ್‌ ಸಂಸ್ಥೆಯೂ ಸ್ವಂತ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ತಯಾರಿಸುವುದಿಲ್ಲ.
ಮಹಾರಾಷ್ಟ್ರದ ಸಹೇರಿ ಕಾರ್ಖಾನೆಯಿಂದ ತರಿಸಿಕೊಂಡು ರಾಜ್ಯಕ್ಕೆ ಪೂರೈಸುತ್ತದೆ. ಮುಖ್ಯವಾಗಿ ರಾಜ್ಯಕ್ಕೆ 2.35 ಕೋಟಿ ರೂ. ನ್ಯಾಪ್‌ಕಿನ್‌ಗಳನ್ನು ಪೂರೈಸಲಾಗುವುದು ಎಂದು ಹೇಳಲಾಗುತ್ತದೆ. ವಾಸ್ತವವಾಗಿ ಅರ್ಧದಷ್ಟಾದರೂ ಪೂರೈಸುವುದಿಲ್ಲ. ಒಬ್ಬ ಮಹಿಳೆ ಇಲ್ಲವೇ ಕಿಶೋರಿಗೆ 13 ನ್ಯಾಪ್‌ಕಿನ್‌ ಕಿಟ್‌ ಕೊಡಬೇಕು. ಆದರೆ 3-4 ಸಹ ನೀಡುತ್ತಿಲ್ಲ. ಒಟ್ಟಾರೆ ವ್ಯವಸ್ಥಿತವಾಗಿ ಸಂಬಂಧ ಪಟ್ಟ ಅಧಿಕಾರಿಗಳೆಲ್ಲ ಇದನ್ನು ನಿರ್ವಹಿಸುತ್ತಿದ್ದಾರೆ ಎಂದು ಅಫಜಲಪುರದ ಅಮೋಘಸಿದ್ಧ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಸುರೇಖಾ ಸುಧೀರ ಪದಕಿ ಆರೋಪಿಸಿದ್ದಾರೆ.

Advertisement

ಟೆಂಡರ್‌ ಇಲ್ಲದೇ 7 ವರ್ಷಗಳಿಂದ ಒಂದೇ ಸಂಸ್ಥೆಯಿಂದ ಸ್ಯಾನಿಟರಿ ನ್ಯಾಪ್‌ಕಿನ್‌ ಖರೀದಿಸುತ್ತಿರುವ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಟೆಂಡರ್‌ ನಿಯಮಾವಳಿ ಉಲ್ಲಂಘನೆಯಲ್ಲದೇ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಲಾಗಿದೆ. ಈ ಕುರಿತು ಆರೋಗ್ಯಾಧಿಕಾರಿಗಳನ್ನು ಕರೆಯಿಸಿ ವಿಚಾರಿಸುವುದಾಗಿ ಲೋಕಾಯುಕ್ತ ಅಧಿಕಾರಿಗಳು ಹೇಳಿದ್ದಾರೆ.
 ● ಸುರೇಖಾ ಸುಧೀರ ಪದಕಿ, ಅಧ್ಯಕ್ಷರು, ಅಮೋಘಸಿದ್ಧ ಸ್ತ್ರೀ ಶಕ್ತಿ ಸ್ವಸಹಾಯ ಸಂಘ, ಅಫಜಲಪುರ

 ●ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next