ಸಕಲೇಶಪುರ: ಆನೆ ಕಾರಿಡಾರ್ ಯೋಜನೆಗಾಗಿ ರೈತರು ಸ್ವಯಂ ಪ್ರೇರಣೆಯಿಂದ ಅರಣ್ಯ ಇಲಾಖೆಗೆ ನೀಡಲು ಮುಂದಾಗಿರುವ ಹೆತ್ತೂರು ಹೋಬಳಿಯ 8 ಗ್ರಾಮಗಳ ಭೂಮಿಯನ್ನು ರಾಜ್ಯ ಸರ್ಕಾರದಿಂದಲೇ ಖರೀದಿಸುವ ಪ್ರಯತ್ನ ನಡೆಸಲಾಗುವುದು ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ತಾಲೂಕಿನ ಹೆತ್ತೂರು ಹೋಬಳಿಯ ಅತ್ತಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ಗ್ರಾಮಸ್ಥರೊಂದಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ಅರಣ್ಯ ಇಲಾಖೆಗೆ ಭೂಮಿ ನೀಡಲು ಸಿದ್ಧ: ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ಹೆತ್ತೂರು ಹೋಬಳಿ ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿದೆ. ಕಾಡಾನೆಗಳು ಹಾಗೂ ಕಾಡುಪ್ರಾಣಿಗಳ ಹಾವಳಿ ಸಹ ವ್ಯಾಪಕವಾಗಿರುವುದರಿಂದ ನಾವೆಲ್ಲಾ ಉತ್ತಮ ಪರಿಹಾರ ಕೊಟ್ಟಲ್ಲಿ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ಸಿದ್ಧರಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಗ್ರಾಮಸ್ಥರು ಆತಂಕ ಪಡುವುದು ಬೇಡ, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಹೆತ್ತೂರು ಹೋಬಳಿಯ ವನಗೂರು ಹಾಗೂ ಹೊಂಗಡಹಳ್ಳ ಗ್ರಾಪಂ ವ್ಯಾಪ್ತಿಯ 8 ಗ್ರಾಮಗಳ 450 ಕುಟುಂಬದ ಸುಮಾರು 2,200 ಎಕರೆ ಭೂಮಿಯನ್ನು ರಾಜ್ಯ ಸರ್ಕಾರವೇ ಈ ಗ್ರಾಮಗಳ ಭೂಮಿ ಖರೀದಿಸುವ ಬಗ್ಗೆ ಚಿಂತನೆ ನಡೆಸಿದ್ದು ಇದ್ಕಕಾಗಿ 450 ಕೋಟಿ ಹೊರೆ ರಾಜ್ಯ ಸರ್ಕಾರಕ್ಕೆ ಬೀಳಲಿದೆ ಎಂದರು.
ಶಾಸಕ ಎಚ್.ಕೆ ಕುಮಾರಸ್ವಾಮಿ, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್,ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ. ಸಿಂಹ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ಸಕಲೇಶಪುರ ವಲಯ ಅರಣ್ಯಾಧಿಕಾರಿ ರವೀಂದ್ರ ಮುಂತಾದವರು ಉಪಸ್ಥಿತರಿದ್ದರು.
ಶಾಸಕರ ವಿರುದ್ಧ ಆಕ್ರೋಶ: ಅರಣ್ಯ ಸಚಿವರು ಹೋಬಳಿಗೆ ಬಂದರು ಮಾಹಿತಿ ನೀಡಲು ನಿಮಗೇನ್ರಿ ತೊಂದರೆ, ಎಂದು ಹೆತ್ತೂರು ಗ್ರಾಮದ ಜನರು ಶಾಸಕ ಎಚ್.ಕೆ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡರು. ಚಿಕ್ಕಮಗಳೂರಿನಿಂದ ಆಗಮಿಸಿದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ತಾಲೂಕಿನ ಆನೇಮಹಲ್ ಗ್ರಾಮದಲ್ಲಿ ಸ್ವಾಗತಿಸಿದ ಶಾಸಕರು ಹೆತ್ತೂರು ಗ್ರಾಮದ ಮೂಲಕ ಅತ್ತಿಹಳ್ಳಿ ಗ್ರಾಮಕ್ಕೆ ಕರೆದೊಯ್ದದರು.
ಅರಣ್ಯ ಸಚಿವರು ಬರುವ ವಿಷಯ ತಿಳಿದ ಹೆತ್ತೂರು ಗ್ರಾಮಸ್ಥರು ಗ್ರಾಮದ ರಸ್ತೆಯಲ್ಲಿ ಸೇರಿದ್ದರೂ ಸಚಿವರು ಕಾರು ನಿಲ್ಲಿಸದೇ ತೆರಳಿದ್ದರು. ಇದಕ್ಕೆ ಶಾಸಕರೇ ಕಾರಣ ಎಂದು ಆರೋಪಿಸಿದ ಗ್ರಾಮಸ್ಥರು, ಅತ್ತಿಹಳ್ಳಿ ಗ್ರಾಮದಲ್ಲಿ ಸಭೆ ನಂತರ ಸಚಿವರನ್ನು ವಾಪಸ್ ಗ್ರಾಮಕ್ಕೆ ಕರೆಸುವಲ್ಲಿ ಯಶಸ್ವಿಯಾದರು.
ಸಭೆಯಲ್ಲಿ ಮಾತನಾಡಿದ ಕೆಲವರು, ಏಲಕ್ಕಿ ಬೆಳೆ ನಾಶವಾಗಿರುವುದರಿಂದ ಈ ಪ್ರದೇಶದಲ್ಲಿ ಪರ್ಯಾಯ ಬೆಳೆ ಬೆಳೆಯಲು ಮರ ಕಡಿಯಲು ಅಮುಮತಿ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಸಚಿವರು ಈ ಬಗ್ಗೆ ಶೀಘ್ರದಲ್ಲೆ ಸಕರಾತ್ಮಕ ನಿಲುವು ತೆಳೆಯುವುದಾಗಿ ತಿಳಿಸಿದರು.