Advertisement
ಈಗೇನಿದ್ದರೂ ಹಬ್ಬಗಳ ಸಮಯ. ವರ ಮಹಾಲಕ್ಷ್ಮೀ ಹಬ್ಬ ಕಳೆದು, ಶ್ರೀಕೃಷ್ಣ ಜನ್ಮಾಷ್ಟಮಿ, ಚೌತಿ…ಹೀಗೆ ಸಾಲು ಸಾಲು ಹಬ್ಬಗಳು ಬಂಗಾರಪ್ರಿಯರ ಮನಸ್ಸಿಗೂ ಕನ್ನ ಹಾಕಿದೆ. ಹಿಂದೂ ಧಾರ್ಮಿಕತೆಯ ಪ್ರಕಾರ ಹಬ್ಬ ಹರಿದಿನಗಳಂದು ಚಿನ್ನ ಕೊಂಡರೆ ಮನೆಗೆ, ವ್ಯಕ್ತಿಗೆ ಶುಭವಾಗುತ್ತದೆ ಎಂಬ ನಂಬಿಕ ತಲೆತಲಾಂತರಗಳಿಂದ ಚಾಲ್ತಿಯಲ್ಲಿದೆ. ಅದಕ್ಕಾಗಿಯೇ ಆಭರಣ ಅಂಗಡಿಗಳಲ್ಲಿ ಜನ ಸಾಲು ಗಟ್ಟಿದ್ದಾರೆ.
ಚಿನ್ನದ ಮೇಲೆ ಇರುವ ಅತಿಯಾದ ವ್ಯಾಮೋಹ ಅದನ್ನು ಕೊಳ್ಳದೇ ಇರಲಾಗುವುದಿಲ್ಲ ಎಂಬಷ್ಟರ ಮಟ್ಟಿಗೆ ಬೆಳೆದಿದೆ. ಆದರೆ, ಕಳೆದ ಐದಾರು ತಿಂಗಳಿನಿಂದ ನಿರಂತರವಾಗಿ ಏರುತ್ತಿರುವ ಚಿನ್ನದ ಬೆಲೆಯಿಂದಾಗಿ ಹೆಂಗಳೆಯರ ಚಿನ್ನ ಕೊಳ್ಳುವ ವ್ಯಾಮೋಹಕ್ಕೆ ಬಿಸಿ ಮುಟ್ಟಿಸಿದೆ. ಬಡ ಮತ್ತು ಮಧ್ಯಮ ವರ್ಗದ ಮಂದಿಗೆ ಚಿನ್ನಕೊಳ್ಳುವಿಕೆ ದೂರದ ಮಾತಾದರೆ, ಆರ್ಥಿಕವಾಗಿ ಸದೃಢರಾಗಿರುವವರು ಮಾತ್ರ ಬೆಲೆ ಏರಿಕೆಯನ್ನು ಲೆಕ್ಕಿಸದೆ, ಚಿನ್ನ ಖರೀದಿಯಲ್ಲಿ ತೊಡಗಿದ್ದಾರೆ.
Related Articles
ಗಣೇಶನ ಹಬ್ಬದಂದು ಪುಟಾಣಿ ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಅಂದು ಮಕ್ಕಳ ಕಿವಿ ಚುಚ್ಚಿದರೆ ಒಳಿತು ಮತ್ತು ಶುಭಕಾರಕ ಎಂಬ ಗಾಢ ನಂಬಿಕೆ. ಅದಕ್ಕಾಗಿಯೇ ಮಕ್ಕಳ ಕಿವಿ ಚುಚ್ಚಲು ಟಿಕ್ಕಿಗಳನ್ನು ಈಗಾಗಲೇ ಖರೀದಿಸಲು ಹೆತ್ತವರು ಆಭರಣ ಅಂಗಡಿಗಳತ್ತ ಲಗ್ಗೆ ಇಡುತ್ತಿದ್ದಾರೆ. ಹೆಣ್ಮಕ್ಕಳ ಮೂಗಿಗೆ ಮೂಗುತಿ ಬೊಟ್ಟುಗಳನ್ನೂ ಚೌತಿಯಂದೇ ಹಾಕುವುದು ಹಲವಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯವಾಗಿದೆ.
Advertisement
ಕಡಿಮೆ ವ್ಯಾಪಾರಬಂಗಾರ ಕೊಳ್ಳಲು ಜನರು ಆಭರಣ ಅಂಗಡಿಗಳಿಗೆ ಬರುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಮಂದಿ ಖರೀದಿಯಿಂದ ಹಿಂದೆ ಬಿದ್ದಿದ್ದು, ಅಷ್ಟೇ ವ್ಯಾಪಾರ ಕಡಿಮೆಯಾಗಿದೆ. ಬೆಲೆ ಏರಿಕೆ ಅಥವಾ ಇತರ ಕಾರಣಗಳಿಂದಲೂ ಜನ ಚಿನ್ನ ಕೊಳ್ಳಲು ಹಿಂದೇಟು ಹಾಕುತ್ತಿರಬಹುದು.
– ಪ್ರಶಾಂತ್ ಶೇಟ್ ಕಾರ್ಯದರ್ಶಿ ದ.ಕ. ಜಿಲ್ಲಾ ಸ್ವರ್ಣ ವ್ಯಾಪಾರಿಗಳ ಸಂಘ ತಯಾರಕರಿಗೆ ಬೇಡಿಕೆ
ರೆಡಿಮೇಡ್ ಆಭರಣಗಳಿಗಿಂತಲೂ ಹೆಚ್ಚಾಗಿ ಇರುವ ಚಿನ್ನವನ್ನೇ ಬೇರೆ ವಿನ್ಯಾಸದೊಂದಿಗೆ ಹೊಸದಾಗಿ ಮಾಡಿಸುತ್ತಿರುವ ಟ್ರೆಂಡ್ ಈ ಹಬ್ಬಗಳ ವೇಳೆ ಹೆಚ್ಚುತ್ತಿದೆ. ಆನ್‌ಲೈನ್ ತಾಣಗಳಲ್ಲಿ ಕಾಣುವ ಡಿಸೈನ್‌ಗೆ ಅನುಸಾರವಾಗಿ ಹೊಸ ಮಾದರಿಯ ಡಿಸೈನ್‌ಗಳನ್ನು ಮಾಡಿಕೊಡಬೇಕೆಂದು ಚಿನ್ನ ತಯಾರಕರಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಚಿನ್ನವನ್ನೇ ಇನ್ನೊಂದು ಮಾದರಿಯ ಆಭರಣವನ್ನಾಗಿ ರೂಪಾಂತರಗೊಳಿಸುವುದರಿಂದ ಅಷ್ಟೇನು ಹಣವೂ ಬೇಕಾಗಿಲ್ಲ ಎಂಬ ಆಶಯವೂ ಇದರ ಹಿಂದಿದೆ ಎನ್ನುತ್ತಾರೆ ಆಭರಣ ತಯಾರಕರು.