ಬೆಂಗಳೂರು: ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಒಂದೆರಡು ತಿಂಗಳಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ ಅಧ್ಯಕ್ಷ ಎನ್.ಎ. ಹ್ಯಾರಿಸ್ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 80 ಎಲೆಕ್ಟ್ರಿಕ್ ಬಸ್‌ಗಳಿಗೆ ಕೇಂದ್ರ ಸರ್ಕಾರವು ಶೇ. 50 ಸಬ್ಸಿಡಿ ನೀಡುತ್ತಿದೆ.
ಆದರೆ, ಈ ಬಸ್‌ಗಳ ಖರೀದಿ ಅಥವಾ ಗುತ್ತಿಗೆ ಇವೆರಡರಲ್ಲಿ ಯಾವುದು ಸೂಕ್ತ ಎಂಬುದರ ಬಗ್ಗೆ ಇನ್ನೂ ಗೊಂದಲವಿದೆ. ಅದರಲ್ಲೂ ಈಗಾಗಲೇ ಇದು ಸಚಿವ ಸಂಪುಟದಿಂದ ವಾಪಸ್ ಬಂದಿರುವುದರಿಂದ ತುಂಬಾ ಸೂಕ್ಷ್ಮ ವಿಚಾರವಾಗಿದೆ. ಹಾಗಾಗಿ, ಮತ್ತೂಮ್ಮೆ ಸಾಧಕ-ಬಾಧಕಗಳ ಅಧ್ಯಯನ ನಡೆಸಲಾಗುವುದು ಎಂದು ಹೇಳಿದರು.
ಎಲೆಕ್ಟ್ರಿಕ್ ಬಸ್‌ಗಳ ಚಾರ್ಜಿಂಗ್ ಸ್ಟೇಷನ್ ಎಲ್ಲಿ ಮಾಡಬೇಕು? ಚಾಲಕರು ಮತ್ತು ನಿರ್ವಾಹಕರು ಯಾರು ಇರಬೇಕು? ನಿಲುಗಡೆ ಎಲ್ಲಿ? ಇಂತಹ ಹಲವು ಅಂಶಗಳ ಕುರಿತು ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ. ಆದಷ್ಟು ಬೇಗ ತೀರ್ಮಾನ ಕೈಗೊಳ್ಳಲಾಗುವುದು. ಒಂದೆರಡು ತಿಂಗಳಲ್ಲಿ ಈ ಗೊಂದಲಕ್ಕೆ ತೆರೆಬೀಳಲಿದೆ ಎಂದರು.
ನಿತ್ಯ ದರ ಪರಿಷ್ಕರಣೆ ಅವಶ್ಯವೇ?: ಪ್ರಯಾಣ ದರ ಇಳಿಕೆ ಮಾಡುವ ಬಗ್ಗೆ ಪ್ರಶ್ನಿಸಿದಾಗ, ಡೀಸೆಲ್ ದರ ನಿತ್ಯ ಏರಿಕೆ ಆಗುತ್ತಲೇ ಇದೆ. ಹಾಗಂತ, ಪ್ರತಿ ದಿನ ಪ್ರಯಾಣ ದರ ಹೆಚ್ಚಳ ಮಾಡಲು ಆಗುತ್ತದೆಯೇ? ಬೇಕಿದ್ದರೆ ನಾನು ಉಚಿತವಾಗಿಯೇ ಬಸ್ ಸೇವೆ ನೀಡಲು ಸಿದ್ಧ. ಆದರೆ, ಬಸ್‌ಗಳಿಗೆ ಡೀಸೆಲ್ ತುಂಬಿಸುವವರು ಯಾರು? ಸಿಬ್ಬಂದಿಗೆ ವೇತನ ನೀಡುವುದು ಹೇಗೆ ಎಂದು ಹ್ಯಾರಿಸ್ ಖಾರವಾಗಿ ಪ್ರಶ್ನಿಸಿದರು.
ಬಿಎಂಟಿಸಿಯು ಕೇವಲ ಕಾರ್ಯಾಚರಣೆಯಿಂದ ಬರುವ ಆದಾಯದಿಂದ ನಡೆಯುವ ಸಂಸ್ಥೆಯಾಗಿದೆ. ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಡೀಸೆಲ್ ಅಥವಾ ಸಹಾಯಧನ ಸಿಗುವುದಿಲ್ಲ. ಬರೀ ಬಸ್ ಖರೀದಿಗೆ ಮಾತ್ರ ಸಹಾಯಧನ ದೊರೆಯುತ್ತದೆ. ಅದೇನೇ ಇರಲಿ, ಸಂಸ್ಥೆ ಖರೀದಿಸುವ ಡೀಸೆಲ್‌ಗೆ ತೆರಿಗೆ ವಿನಾಯ್ತಿ ನೀಡುವಂತೆ ಸರ್ಕಾರಕ್ಕೆ ಕೇಳಬೇಕಾಗುತ್ತದೆ. ಆದರೆ, ಇದಕ್ಕೂ ಮುನ್ನ ಸರ್ಕಾರದ ಪರಿಸ್ಥಿತಿಯನ್ನೂ ನೋಡಬೇಕು ಎಂದರು.
ಇನ್ನು ಪ್ರಯಾಣ ದರ ಏರಿಕೆ ಪ್ರಸ್ತಾವನೆ ಈ ಮೊದಲೇ ಸರ್ಕಾರಕ್ಕೆ ಕಳುಹಿಸಿದ್ದು, ಅಂತಿಮ ನಿರ್ಧಾರ ಸರ್ಕಾರ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ವಿ. ಪ್ರಸಾದ್ ಇತರರಿದ್ದರು.
ನಲಪಾಡ್ ಪ್ರತ್ಯಕ್ಷ: ಬಿಎಂಟಿಸಿ ಅಧ್ಯಕ್ಷ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡರು. ಶುಕ್ರವಾರ ತಂದೆಯ ಅಧಿಕಾರ ಸ್ವೀಕಾರದ ವೇಳೆಯೂ ನಲಪಾಡ್ ಭಾಗವಹಿಸಿದ್ದರು. ಶನಿವಾರ ಸುದ್ದಿಗೋಷ್ಠಿಯಲ್ಲೂ ಪ್ರತ್ಯಕ್ಷರಾದರು. ಈ ವೇಳೆ ಸುದ್ದಿವಾಹಿನಿಗಳು ಅವರತ್ತ ಕ್ಯಾಮೆರಾ ತಿರುಗಿಸಿದಾಗ, “ನಾನೇನೂ ಹೀರೋ ಅಲ್ಲ. ನನ್ನ ಚಿತ್ರ ಯಾಕೆ ಸೆರೆ ಹಿಡಿಯುತ್ತಿದ್ದೀರಿ’ ಎಂದು ಕೇಳಿದರು.