ಮುದ್ದೇಬಿಹಾಳ: ಆಹಾರ ಇಲಾಖೆಯಿಂದಲೇ ಬೆಂಬಲ ಬೆಲೆಯಲ್ಲಿ ಜೋಳ ಖರೀದಿಸಿ ಬಡಜನರಿಗೆ ಹಂಚಿಕೆ ಮಾಡುವ ಕುರಿತು ಆಹಾರ ಇಲಾಖೆ ಸಚಿವ ಗೋಪಾಲಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಶೀಘ್ರ ಕೈಗೊಳ್ಳುತ್ತೇನೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದ್ದಾರೆ.
ಶನಿವಾರ ನಿಗಮದ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಮಾತನಾಡಿದ ಅವರು, ದಕ್ಷಿಣ ಕರ್ನಾಟಕ ಜನರ ಪ್ರಮುಖ ಆಹಾರವಾಗಿರುವ ರಾಗಿಯನ್ನೂ ಸಹಿತ ಬೆಂಬಲ ಬೆಲೆಯಲ್ಲಿ ಖರೀದಿಸಿ ಬಡಜನರಿಗೆ ಹಂಚಿಕೆ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 80 ಕೋಟಿ ಜನರಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂದು ಉಚಿತವಾಗಿ ಆಹಾರಧಾನ್ಯ ನೀಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲೇ ನಮ್ಮ ಸರ್ಕಾರದಲ್ಲೂ 3.80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯವನ್ನು ಪ್ರತಿನಿತ್ಯ ಬಡವರ ಮನೆಗೆ ಮುಟ್ಟಿಸುವುದು ನಮಗೆ ದೊರೆತ ಸೌಭಾಗ್ಯ ಎಂದರು.
ಯಾರೂ ಹಸಿವಿನಿಂದ ಬಳಲಬಾರದು ಎಂಬ ಪ್ರಧಾನಿ ಹಾಗೂ ಮುಖ್ಯಮಂತ್ರಿ ಕನಸು ನನಸಾಗಿಸಲು ಸೈನಿಕರಂತೆ ಕೆಲಸ ಮಾಡುತ್ತೇವೆ. ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬ ಬಡವನ ಮನೆಗೂ ರೇಷನ್ ತಲುಪಿಸಲು ಇಲಾಖೆ ಸಚಿವ ಗೋಪಾಲಯ್ಯ ಅವರ ಮಾರ್ಗದರ್ಶನದಲ್ಲಿ ಸಂಕಲ್ಪ ಮಾಡುತ್ತೇವೆ ಎಂದರು. ಈ ವೇಳೆ ನಿಗಮದ ಅಧಿ ಕಾರಿಗಳು, ನಿಗಮದ ಕಚೇರಿ ಸಿಬ್ಬಂದಿ ವರ್ಗ, ಶಾಸಕರ ಬೆಂಗಳೂರು ಕಚೇರಿ ಆಪ್ತ ಸಹಾಯಕ ಬಾಬುರಾವ್ ಕುಲಕರ್ಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಧ್ವಜಾರೋಹಣಕ್ಕೂ ಮುನ್ನ ಗಾಂಧಿಧೀಜಿ ಹಾಗೂ ಡಾ| ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು.