Advertisement

ಶಸ್ತ್ರಾಸ್ತ್ರ ಖರೀದಿ ಶ್ಲಾಘನೀಯ ಸುಧಾರಣಾ ಕ್ರಮ

06:15 AM Oct 31, 2017 | |

ಸೇನಾ ಪಡೆಗಳನ್ನು ಆಧುನೀಕರಣಗೊಳಿಸುವ ಪ್ರಕ್ರಿಯೆಗೆ ಕಡೆಗೂ ಚಾಲನೆ ಸಿಕ್ಕಿದೆ.ಸೈನಿಕರ ಕೈಯಲ್ಲಿರುವ ಹಳೆ ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಲ್ಲಿಸಿ ಅವರಿಗೆ ಹೊಸ ಮತ್ತು ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡಲು ಸರಕಾರ ನಿರ್ಧರಿಸಿದ್ದು, ಭಾರೀ ಪ್ರಮಾಣದ ಖರೀದಿಗೆ ಮುಂದಾಗಿದೆ. 

Advertisement

7 ಲಕ್ಷ ರೈಫ‌ಲ್‌ಗ‌ಳು, 44 ಸಾವಿರ ಲಘು ಮೆಶಿನ್‌ ಗನ್‌ಗಳು, 44,600 ಕಾರ್ಬೈನ್‌ಗಳು ಸೇರಿದಂತೆ ಸೇನೆಗೆ ತುರ್ತಾಗಿ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಖರೀದಿಸುವ ನಿರ್ಧಾರ ಅಂತಿಮಗೊಂಡಿದ್ದು, ಇದಕ್ಕಾಗಿ 44,000 ಕೋ. ರೂ. ಅಂದಾಜಿಸಲಾಗಿದೆ. ಭಾರತೀಯ ಸೇನಾ ಇತಿಹಾಸ ದಲ್ಲೇ ಈ ಪ್ರಮಾಣದ ಶಸ್ತ್ರಾಸ್ತ್ರಗಳು ಖರೀದಿಯಾಗುತ್ತಿರುವುದು ಇದೇ ಮೊದಲು. 

ಪಕ್ಕದಲ್ಲೇ ಎರಡು ಪ್ರಬಲ ಶತ್ರು ರಾಷ್ಟ್ರಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸದಾ ಯುದ್ಧಸನ್ನದ್ಧ ಸ್ಥಿತಿಯಲ್ಲಿರುವಾಗ ನಮ್ಮ ಸೈನಿಕರು ಈಗಲೂ ಓಬೀರಾಯನ ಕಾಲದ ಬಂದೂಕುಗಳನ್ನು ಹಿಡಿದು ಕೊಂಡು ಇರುವುದು ನಾಚಿಕೆಗೇಡಿನ ಸಂಗತಿ. ಆಗಾಗ ಸೇನೆಯ ಕುಂದುಕೊರತೆಗಳು ಬಹಿರಂಗವಾಗುತ್ತಿದ್ದು, ಇದರಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕೊರತೆಯ ಕುರಿತು ಬೆಳಕು ಚೆಲ್ಲಲಾಗುತ್ತಿತ್ತು. ಇಂತಹ ವರದಿಗಳು ಬಂದಾಗಲೆಲ್ಲ ಯೋಧರಿಗೆ ಮಾತ್ರವಲ್ಲದೆ ಜನ ಸಾಮಾನ್ಯರಿಗೂ ಕೂಡ ಆತಂಕವಾಗುತ್ತಿದ್ದುದು ಸುಳ್ಳಲ್ಲ. ಕನಿಷ್ಠ ಸಮರ್ಪಕ ಬಂದೂಕುಗಳೇ ಇಲ್ಲದೆ ಯುದ್ಧ ಮಾಡುವುದಾದರೂ ಹೇಗೆ ಎಂಬ ಚಿಂತೆ ಕಾಡುತ್ತಿತ್ತು. ಇದೀಗ ಈ ಚಿಂತೆಯನ್ನು ದೂರಮಾಡುವ ನಿಟ್ಟಿನಲ್ಲಿ ಸರಕಾರ ಸಮರೋಪಾದಿಯಲ್ಲಿ ಕಾರ್ಯನಿರತವಾಗಿದೆ. 

ದೇಶದ ಮೊದಲ ಮಹಿಳಾ ರಕ್ಷಣಾ ಸಚಿವರು ಸೇನೆಯನ್ನು ಸುಸಜ್ಜಿತಗೊಳಿಸಲು ನಡೆಸುತ್ತಿರುವ ಪ್ರಯತ್ನಗಳು ಸಕಾಲಿಕವಾಗಿವೆ. ಕೆಲ ಸಮಯದ ಹಿಂದೆಯಷ್ಟೆ ಸೇನೆಗೆ 40,000 ಕೋ. ರೂ.ಗಳಷ್ಟು ಮೊತ್ತದ ಖರೀದಿಯನ್ನು ನೇರವಾಗಿ ಮಾಡಲು ಅನುಮತಿ ನೀಡಲಾಗಿತ್ತು. ಕಿರು ಮತ್ತು ತೀವ್ರವಾದ ಯುದ್ಧಕ್ಕೆ ಸೇನೆಯನ್ನು ಸಜ್ಜಾಗಿಡುವ ನಿಟ್ಟಿನಲ್ಲಿ ಸರಕಾರದ ಈ ನಿರ್ಧಾರ ಕೈಗೊಂಡಿದೆ. ಶಸ್ತ್ರಾಸ್ತ್ರ ಖರೀದಿಯಲ್ಲಿ ದಲ್ಲಾಳಿಗಳ ಮತ್ತು ಕೆಂಪುಪಟ್ಟಿಯ ಹಾವಳಿಯನ್ನು ನಿವಾರಿಸಲು ಈ ಕ್ರಮ ಸಹಕಾರಿ. ಸೇನಾ ಮುಖ್ಯಸ್ಥರೇ ಈ ಖರೀದಿಗಳನ್ನು ಮಾಡ ಬಹುದು ಎನ್ನುವುದು ಗಮನಾರ್ಹ ಅಂಶ. ಸದ್ಯದಲ್ಲೇ ನೌಕಾಪಡೆ ಮತ್ತು ವಾಯುಪಡೆಗೆ ಈ ಅಧಿಕಾರವನ್ನು ನೀಡಲು ಸರಕಾರ ಚಿಂತನೆ ನಡೆಸಿದೆ. ಇನ್ನು ಸೇನೆ ಶಸ್ತ್ರಾಸ್ತ್ರ ಖರೀದಿಗೆ ಸೇನೆ ರಕ್ಷಣಾ ಖರೀದಿ ಮಂಡಳಿ ಅಥವ ಸಂಪುಟ ಸಮಿತಿಯ ಮರ್ಜಿಗೆ ಕಾಯುವ ಸುತ್ತುಬಳಸಿನ ದಾರಿಯನ್ನು ಅನುಸರಿಸುವ ಅಗತ್ಯವಿಲ್ಲ. ತಕ್ಷಣಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರ, ಮದ್ದುಗುಂಡು ಹಾಗೂ ಇನ್ನಿತರ ರಕ್ಷಣಾ ಸಾಮಾಗ್ರಿಗಳನ್ನು ದಂಡನಾಯಕರೇ ಖರೀದಿಸುವ ನಿರ್ಧಾರ ಕೈಗೊಳ್ಳಬಹುದು. 

ಸೇನೆಯಲ್ಲಿ ಪ್ರಸ್ತುತ 46 ತರಹದ ಮದ್ದುಗುಂಡುಗಳು, ಕೆಲವು ಬಿಡಿಭಾಗಗಳು ಮತ್ತು 10 ತರಹದ ಶಸ್ತ್ರಾಸ್ತ್ರಗಳ ತೀವ್ರ ಕೊರತೆಯಿದೆ ಎಂದು ಗುರುತಿಸಲಾಗಿದ್ದು, ನೇರ ಖರೀದಿಯಿಂದ ಕ್ಷಿಪ್ರವಾಗಿ ಈ ಕೊರತೆಯನ್ನು ನಿವಾರಿಸಿಕೊಳ್ಳಬಹುದು. ಉರಿ ದಾಳಿ ಮತ್ತು ಅದಕ್ಕೆ ಪ್ರತೀಕಾರವಾಗಿ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಬಳಿಕ ಸೇನೆಯ ಶಸ್ತ್ರ ಭಂಡಾರವನ್ನು ಪರಿಶೋಧನೆಗೊಳಪಡಿಸಿದಾಗ ಆಘಾತಕಾರಿಯಾದ ಮಾಹಿತಿಗಳು ಬಹಿರಂಗವಾಗಿದ್ದವು. 

Advertisement

ಸೇನೆಯ ಬಳಿಯಿರುವುದು ಬರೀ 15 ದಿನಗಳ ಯುದ್ಧಕ್ಕಾಗುವಷ್ಟು ಶಸ್ತ್ರ ಸಾಮಗ್ರಿ ಎಂಬ ಅಂಶ ಬಹಿರಂಗವಾದ ಬಳಿಕ ವ್ಯಾಪಕ ಕಳವಳ ವ್ಯಕ್ತವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಪೂರ್ಣ ಪ್ರಮಾಣದ ಯುದ್ಧ ನಡೆಯುವ ಸ್ಥಿತಿ ಇಲ್ಲ. ಭವಿಷ್ಯದ ಯುದ್ಧಗಳೇನಿದ್ದರೂ ಕೆಲವೇ ದಿನಗಳಲ್ಲಿ ಮುಗಿಯುವ ಕಿರು ಹೋರಾಟಗಳು. ಆದರೆ ಭಾರೀ ಸಾಮರ್ಥ್ಯದ ಆಧುನಿಕ ಶಸ್ತ್ರಾಸ್ತ್ರಗಳ ಆವಿಷ್ಕಾರವಾಗಿರುವುದರಿಂದ ಕಿರು ಯುದ್ಧಗಳ ತೀವ್ರತೆ ಕಡಿಮೆಯಿರಬಹುದು ಎಂದು ಭಾವಿಸುವಂತಿಲ್ಲ. ಆದರೆ ಇಂತಹ ಯುದ್ಧಗಳನ್ನು ಎದುರಿಸುವಷ್ಟು ಶಸ್ತ್ರಾಸ್ತ್ರಗಳು ನಮ್ಮ ಸಂಗ್ರಹದಲ್ಲಿ ಇಲ್ಲ ಎನ್ನುವುದು ಚಿಂತೆಗೀಡುಮಾಡುವ ವಿಚಾರ. ಈಗಲೂ ದೇಶ ಆಧುನಿಕ ಶಸ್ತ್ರಾಸ್ತ್ರ ಮತ್ತು ಯುದೊœàಪಕರಣಗಳಿಗಾಗಿ ವಿದೇಶಗಳನ್ನೇ ಅವಲಂಬಿಸಿದೆ. ಜಗತ್ತಿನ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತವೂ ಒಂದು. 

ರಶ್ಯಾ ನಮಗೆ ಶಸ್ತ್ರಾಸ್ತ್ರಗಳನ್ನು ಮಾರುತ್ತಿರುವ ಪ್ರಮುಖ ದೇಶ. ಆದರೆ ಕಳೆದ ಕೆಲವು ದಶಕಗಳಿಂದ ಯಾವ ಶಸ್ತ್ರಾಸ್ತ್ರ ಖರೀದಿಯೂ ವಿವಾದಗಳಿಂದ ಹೊರತಾಗಿಲ್ಲ. ಬೋಫೋರ್ನಿಂದ ಹಿಡಿದು ಆಗಸ್ಟಾ ವೆಸ್ಟ್‌ ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ತನಕ ಎಲ್ಲವೂ ವಿವಾದಕ್ಕೊಳಗಾಗಿದೆ. ಶಸ್ತ್ರಾಸ್ತ್ರ ಖರೀದಿ ಎನ್ನುವುದು ಅತ್ಯಂತ ಜಟಿಲವಾದ ಪ್ರಕ್ರಿಯೆ. 

ಹೀಗಾಗಿಯೇ ಇದರಲ್ಲಿ ದಲ್ಲಾಳಿಗಳ ಹಸ್ತಕ್ಷೇಪ ಹೆಚ್ಚು ಇರುತ್ತದೆ. ದಲ್ಲಾಳಿಗಳ ಇದ್ದೆಡೆ ಅಕ್ರಮಗಳು ಇದ್ದೇ ಇರುತ್ತವೆ. ಸಹಸ್ರಾರು ಕೋಟಿ ವ್ಯವಹಾರದಲ್ಲಿ ತಿನ್ನುವವರಿಗೇನೂ ಕೊರತೆಯಿರುವುದಿಲ್ಲ. ಇದರಿಂದಾಗಿಯೇ ನಮ್ಮ ಶಸ್ತ್ರ ಭಂಡಾರ ಇನ್ನೂ ಪರಿಪೂರ್ಣವಾಗಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಸರಕಾರ ಸೇನಾ ಖರೀದಿಯಲ್ಲಿ ಪಾರದರ್ಶಕತೆಯನ್ನು ತರಲು ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನೀಯ ನಡೆ.

Advertisement

Udayavani is now on Telegram. Click here to join our channel and stay updated with the latest news.

Next