Advertisement

Butterfly Park: ಬೆಳಗಾವಿಯ ಹಿಡಕಲ್‌ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್‌

11:14 AM Jan 02, 2025 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಮೈಸೂರು ಬೃಂದಾವನ ಉದ್ಯಾನವನದ ಮಾದರಿಯಲ್ಲಿ ಅಭಿವೃದ್ಧಿ ಕಾಣಲಿರುವ ಜಿಲ್ಲೆಯ ಹಿಡಕಲ್‌ ಜಲಾಶಯದ
ಆವರಣ ಇದೇ ಹಾದಿಯಲ್ಲಿ ಪಾತರಗಿತ್ತಿ ವನದ ಮೂಲಕ ಒಂದು ಹೆಜ್ಜೆ ಮುಂದಿಟ್ಟಿದೆ. ಇದು ರಾಜ್ಯದ ಅತಿ ದೊಡ್ಡ ತೆರೆದ ಚಿಟ್ಟೆ ಉದ್ಯಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

Advertisement

ಹುಕ್ಕೇರಿ ಶಾಸಕರಾಗಿದ್ದ ದಿ. ಉಮೇಶ ಕತ್ತಿ ಇಲ್ಲಿ ಅತ್ಯಾಕರ್ಷಕ ಉದ್ಯಾನವನ ಮಾಡಲೇಬೇಕು ಎಂದು ಗಟ್ಟಿ ನಿರ್ಧಾರ ಮಾಡಿದ್ದರು. ಹಿಂದಿನ ಸರ್ಕಾರದ ಮೇಲೆ ಒತ್ತಡ ಹಾಕಿ ಸಂಪುಟದಲ್ಲಿ ಅನುಮೋದನೆ ಸಿಗುವಂತೆ ಮಾಡಿದ್ದರು. ಅದರ ಫಲವಾಗಿ ಆಗ ಬಜೆಟ್‌ನಲ್ಲಿ ಚಿಟ್ಟೆಗಳ ಉದ್ಯಾನ ವನ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿತ್ತು.

ಈಗ ಹಿಡಕಲ್‌ ಜಲಾಶಯದ ಬಳಿ ಮಾಜಿ ಸಚಿವ ಹಾಗೂ ಪಕ್ಷಿಗಳ ಪ್ರೇಮಿ ದಿ. ಉಮೇಶ್‌ ವಿಶ್ವನಾಥ ಕತ್ತಿ ಅವರ ಪ್ರೀತಿಯ ಚಿಟ್ಟೆ ಉದ್ಯಾನ ಮತ್ತು ಪರಿಸರ ಪ್ರೇಮಿ ಪದ್ಮಶ್ರೀ ತುಳಸಿಗೌಡ ಉದ್ಯಾನವನಕ್ಕೆ ಕಳೆದ ಕೆಲ ದಿನಗಳ ಹಿಂದಷ್ಟೇ ಅರಣ್ಯ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದ್ದಾರೆ. ಹಿಡಕಲ್‌ ಜಲಾಶಯದ ಬಳಿ ಸುಮಾರು 500 ಎಕರೆ ಪ್ರದೇಶದಲ್ಲಿ ವಿವಿಧ ಉದ್ಯಾನಗಳ ನಿರ್ಮಾಣವಾಗುತ್ತಿದ್ದು, ಇಲ್ಲಿ ಮೊಸಳೆ ಪಾರ್ಕ್‌, ಬಿದಿರು ಉದ್ಯಾನ ಮತ್ತು ಪಕ್ಷಿಧಾಮ ನಿರ್ಮಿಸುವ ಯೋಜನೆಯಿದೆ.

ನಿರ್ಮಾಣ ಹಂತದ ಉದ್ಯಾನವನದ ಭಾಗ ವಾಗಿ ಸುಮಾರು 9 ಎಕರೆ ಪ್ರದೇಶದಲ್ಲಿ ಈ ಚಿಟ್ಟೆ ವನ ನಿರ್ಮಾಣವಾಗಿದ್ದು ಇದಕ್ಕಾಗಿ 2 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಚಿಟ್ಟೆ ವನ ಬೆಂಗಳೂರಿನ ಬನ್ನೇರುಘಟ್ಟದ ನಂತರ ರಾಜ್ಯದ ಅತಿ ದೊಡ್ಡ ತೆರೆದ ಪಾರ್ಕ್‌ ಎಂಬ ಹೆಗ್ಗಳಿಕೆ ಪಡೆದಿದೆ. ಈ ಚಿಟ್ಟೆವನದಲ್ಲಿ ಪಕ್ಷಿಗಳ ಕಲರವ ನಿರಂತರವಾಗಿ ಕೇಳಿಬರಲು 150 ವಿವಿಧ ಜಾತಿಯ 25 ಸಾವಿರ ಮರಗಳನ್ನು ನೆಡಲಾಗಿದೆ. ಈಗಾಗಲೇ 25 ಜಾತಿಯ ವಿವಿಧ ಚಿಟ್ಟೆಗಳು ಈ ವನದಲ್ಲಿ ತಮ್ಮ ಸ್ವಚ್ಛಂದ ಹಾರಾಟ ನಡೆಸಿವೆ. ಚಿಟ್ಟೆಗಳ ಸಂತಾನೋತ್ಪತ್ತಿ ಕೇಂದ್ರ, ವಿಹಾರಿಗಳ ವಿಶ್ರಾಂತಿಗಾಗಿ 3 ತೆರೆದ ಮನೆಗಳು, ಎರಡು ಕಿರು ತೂಗು ಸೇತುವೆ  ನಿರ್ಮಿಸಲಾಗಿದೆ.

ಮಕ್ಕಳನ್ನು ಆಕರ್ಷಿಸಲು ಚಿಟ್ಟೆ ವನದಲ್ಲಿ ವಾಟರ್‌ ಪಾರ್ಕ್‌, ಚಿಮ್ಮುವ ಕಾರಂಜಿ ಮಾಡಲಾಗಿದೆ. ಗೊಡಚಿನ ಮಲ್ಕಿ ಜಲಾಶಯದ ದೃಶ್ಯ ಸೃಷ್ಟಿಸಲಾಗಿದೆ. ತುಂತುರು ಹನಿ ನೀರಾವರಿ, ಸೋಲಾರ್‌ ವಿದ್ಯುತ್‌ ಸಹ ಅಳವಡಿಸಲಾಗಿದೆ. ಈ ಪಾರ್ಕ್‌ ನಿರ್ವ ಹಣೆಗೆ ಈಗ ಇಬ್ಬರನ್ನು ನೇಮಿಸಲಾಗಿದೆ. ಸದ್ಯ ಪ್ರವಾಸಿಗರಿಗೆ ಉಚಿತ ಪ್ರವೇಶವಿದೆ. ಮುಂದಿನ ದಿನಗಳಲ್ಲಿ ಇದರ ನಿರ್ವಹಣೆ ಮಾಡುವುದಕ್ಕಾಗಿ ಪ್ರವೇಶ ಶುಲ್ಕ ವಿಧಿಸಲು ಉದ್ದೇಶಿಸಲಾಗಿದೆ.

Advertisement

ದಿ.ಉಮೇಶ ಕತ್ತಿ ಹೆಸರು
ಚಿಟ್ಟೆ ವನ ಮಾಜಿ ಸಚಿವ ದಿ|ಉಮೇಶ ಕತ್ತಿ ಕನಸಿನ ಯೋಜನೆ ಯಲ್ಲಿ ಪ್ರಮುಖವಾದದ್ದು. ಇದೆ ಕಾರಣದಿಂದ ಇದಕ್ಕೆ ಉಮೇಶ ಕತ್ತಿ ಪಾರ್ಕ್‌ ಎಂದು ಹೆಸರಿಡಲಾಗಿದೆ. ಪ್ರವೇಶ ದ್ವಾರದ ಬಳಿ ಉಮೇಶ ಕತ್ತಿ ಅವರ ಕಂಚಿನ ಪ್ರತಿಮೆ ಸ್ಥಾಪಿಸಲಾಗಿದೆ.

ಚಿಟ್ಟೆ ವನಕ್ಕೆ ಬರುವ ಶಾಲಾ ಮಕ್ಕಳಿಗೆ ಚಿಟ್ಟೆಗಳ, ಪಾತರಗಿತ್ತಿಗಳ ಮಹತ್ವ ಮತ್ತು ವಿವಿಧ ಜಾತಿಗಳ ಸಸ್ಯ, ಔಷಧೀಯ ಸಸ್ಯಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ. ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
●ರಾಜಶೇಖರ ಪಾಟೀಲ, ಸಹಾಯಕ ನಿರ್ದೇಶಕರು, ನೀರಾವರಿ ಇಲಾಖೆ, ಬೆಳಗಾವಿ

■ ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next