ರಮೇಶ್ ಅರವಿಂದ್ ನಿರ್ದೇಶನದ ಮತ್ತು ಪಾರುಲ್ ಯಾದವ್ ಅಭಿನಯದ “ಬಟರ್‌ಫ್ಲೈ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಬಾಲಿವುಡ್‌ನ ಹಿಟ್ ಚಿತ್ರವಾದ “ಕ್ವೀನ್’ನ ರೀಮೇಕ್ ಆಗಿರುವ “ಬಟರ್‌ಫ್ಲೈ’, ಎಲ್ಲಾ ಅಂದುಕೊಂಡಂತೆ ಆದರೆ, ಅಕ್ಟೋಬರ್‌ನಲ್ಲಿ ತೆರಗೆ ಬರಲಿದೆ.
“ಕ್ವೀನ್’ ಚಿತ್ರವು ಬರೀ ಕನ್ನಡದಲ್ಲಷ್ಟೇ ಅಲ್ಲ, ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ರೀಮೇಕ್ ಆಗಿರುವುದು ವಿಶೇಷ. ಕನ್ನಡದಲ್ಲಿ ಚಿತ್ರದ ಹೆಸರು “ಬಟರ್‌ಫ್ಲೈ’ ಆದರೆ, ಬೇರೆ ಭಾಷೆಗಳಲ್ಲಿ “ಪ್ಯಾರಿಸ್ ಪ್ಯಾರಿಸ್’, “ಜಾಮ್ ಜಾಮ್’ ಮತ್ತು “ದಟ್ ಈಸ್ ಮಹಾಲಕ್ಷ್ಮೀ’ ಎಂಬ ಹೆಸರಿನಲ್ಲಿ ರೀಮೇಕ್ ಆಗುತ್ತಿದೆ.
ಇನ್ನು ಕಂಗನಾ ರಣೌತ್ ಮಾಡಿದ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ಯಾದವ್ ಮಾಡಿದರೆ, ಬೇರೆ ಭಾಷೆಗಳಲ್ಲಿ ಕಾಜಲ್ ಅಗರ್‌ವಾಲ್, ತಮನ್ನಾ ಭಾಟಿಯಾ ಮತ್ತು ಮಂಜಿಮಾ ಮೋಹನ್ ಮಾಡಿದ್ದಾರೆ. ಕನ್ನಡ ಮತ್ತು ತಮಿಳಿನ ಚಿತ್ರಗಳನ್ನು ರಮೇಶ್ ಅರವಿಂದ್ ನಿರ್ದೇಶಿಸಿದರೆ, ತೆಲುಗಿನಲ್ಲಿ ಪ್ರಶಾಂತ್ ವರ್ಮ ಹಾಗೂ ಮಲಯಾಳಂನಲ್ಲಿ ನೀಲಕಂಠ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರಗಳಿಗೆ ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿದರೆ, ಬಾಸ್ಕೋ ಸೀಸರ್ ಮತ್ತು ಗಣೇಶ್ ಆಚಾರ್ಯ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದ ಎಲ್ಲಾ ಹಾಡುಗಳನ್ನು ಸಿಂಗಲ್ ಟೇಕ್‌ನಲ್ಲಿ ಚಿತ್ರೀಕರಿಸಲಾಗಿದೆಯಂತೆ. ಇನ್ನು ಕನ್ನಡದ “ಬಟರ್‌ಫ್ಲೈ’ ವಿಷಯಕ್ಕೆ ಬಂದರೆ, ಈ ಚಿತ್ರವನ್ನು ಮನು ಕುಮಾರನ್ ನಿರ್ಮಿಸುತ್ತಿದ್ದಾರೆ.
ಮಮತಾ ಸಾಗರ್ ಅವರು ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದರೆ, ಸತ್ಯ ಹೆಗಡೆ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸುಧಾ ಬೆಳವಾಡಿ, ಭಾರ್ಗವಿ ನಾರಾಯಣ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.