Advertisement

ಮೈಸೂರಿನಲ್ಲಿ ಬಟರ್‌ಫ್ಲೈ

11:18 AM Jun 06, 2018 | |

ಕೆಲವು ವರ್ಷದ ಹಿಂದೆ ಬಾಲಿವುಡ್‌ ಅಂಗಳದಲ್ಲಿ ಭಾರೀ ಸದ್ದು ಮಾಡಿದ್ದ “ಕ್ವೀನ್‌’ ಚಿತ್ರದ ಕನ್ನಡ ಅವತರಣಿಕೆಯಾದ “ಬಟರ್‌ ಫ್ಲೈ’ ಚಿತ್ರದ ಚಿತ್ರೀಕರಣ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಏಕಕಾಲದಲ್ಲೇ ಕನ್ನಡ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ತಯಾರಾಗುತ್ತಿರುವ “ಕ್ವೀನ್‌’ ಚಿತ್ರದ ಕನ್ನಡ ಅವತರಣಿಕೆ “ಬಟರ್‌ ಫ್ಲೈ’ ಹಾಗೂ ತಮಿಳು ಅವತರಣಿಕೆಯ “ಪ್ಯಾರಿಸ್‌ ಪ್ಯಾರಿಸ್‌’ ಚಿತ್ರಗಳಿಗೆ ನಟ ಆಕ್ಷನ್‌-ಕಟ್‌ ಹೇಳಿದ್ದಾರೆ.

Advertisement

ಕನ್ನಡ, ತಮಿಳಿನ ಜತೆಗೆ ತೆಲುಗಿನಲ್ಲೂ ಈ ಚಿತ್ರ ತಯಾರಾಗುತ್ತಿದ್ದು, “ಕ್ವೀನ್‌ ಒನ್ಸ್‌ ಅಗೇನ್‌’ ಹೆಸರಿನಲ್ಲಿ ರೀಮೇಕ್‌ ಆಗುತ್ತಿರುವ ಚಿತ್ರದಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಾಲ್ಕೂ ಭಾಷೆಗಳ ರೀಮೇಕ್‌ ಚಿತ್ರಗಳನ್ನು ಮನು ಕುಮಾರನ್‌ ನಿರ್ಮಿಸುತ್ತಿದ್ದು, ಮೂರು ಭಾಷೆಯ ಚಿತ್ರಗಳಿಗೆ ಅಮಿತ್‌ ತ್ರಿವೇದಿ ಸಂಗೀತವಿದೆ. ಕನ್ನಡ ಮತ್ತು ತಮಿಳಿನ ಚಿತ್ರಕ್ಕೆ ಸತ್ಯಹೆಗಡೆ ಅವರ ಛಾಯಾಗ್ರಹಣವಿದೆ. 

ಕನ್ನಡ ಅವತರಣಿಕೆಯ “ಬಟರ್‌ ಫ್ಲೈ’ ಚಿತ್ರದ ಚಿತ್ರೀಕರಣ ಈಗಾಗಲೇ ಶೇ.90 ಭಾಗ ಮುಕ್ತಾಯಗೊಂಡಿದ್ದು, ತಮಿಳು ಹಾಗೂ ತೆಲುಗು ಭಾಷೆಯ ಚಿತ್ರೀಕರಣ ನಡೆಯುತ್ತಿದೆ. ನಗರದಲ್ಲಿ  ಈಗಾಗಲೇ ಸದ್ದಿಲ್ಲದೆ ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ, ಮಂಡಕಳ್ಳಿ ವಿಮಾನ ನಿಲ್ದಾಣ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಚಿತ್ರೀಕರಣವನ್ನು ಯಶಸ್ವಿಯಾಗಿ ನಡೆಸಿದೆ.

ಅಂತೆಯೇ ನಗರದ ಲಲಿತಮಹಲ್‌ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ, ಚಿತ್ರದ ತಯಾರಿ ಕುರಿತಾದ ಕೆಲವೊಂದು ವಿಷಯಗಳನ್ನು ಮಂಗಳವಾರ ನಡೆದ ಸುದಿಗೋಷ್ಠಿಯಲ್ಲಿ ಹಂಚಿಕೊಂಡಿತು. “ಈ ಹಿಂದೆ ನಾಲ್ಕು ಭಾಷೆಗಳಲ್ಲಿ ಒಂದೇ ಚಿತ್ರವನ್ನು ಮಾಡಲಾಗಿದೆ. ಆದರೆ, ಈ ಚಿತ್ರದಲ್ಲಿ ಒಂದೇ ಪಾತ್ರವನ್ನು ಬೇರೆ ಬೇರೆ ನಾಯಕಿಯರು ಅಭಿನಯಿಸಿದ್ದಾರೆ.

ಹೀಗಾಗಿ ನಾಲ್ಕು ಭಾಷೆಯ ಚಿತ್ರಗಳು ಬೇರೆ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ ಎಂಬ ಅನುಭವವಿದ್ದು, ಒಂದೇ ವಿಷಯ ಬೇರೆ ತಲೆಗಳಿಂದ ಬಂದಾಗ ವಿಭಿನ್ನವಾಗಿರಲಿದ್ದು, ಚಿತ್ರೀಕರಣದಲ್ಲಿ ಇದು ಕಂಡುಬಂದಿದೆ. ನಟಿಯರಾದ ಪರೂಲ್‌ ಹಾಗೂ ಕಾಜಲ್‌ ಅಗರ್‌ವಾಲ್‌ ಅವರು ಉತ್ತಮವಾಗಿ ಅಭಿನಯಿಸಿದ್ದಾರೆ. ಇದೊಂದು ಅತ್ಯುತ್ತಮ ಚಿತ್ರವಾಗಲಿದ್ದು, ಭಾರತೀಯ ಸಿನಿಮಾದಲ್ಲಿ ಇದೊಂದು ಐತಿಹಾಸಿಕ ಚಿತ್ರವಾಗಲಿದೆ.

Advertisement

ಕನ್ನಡ ಅವತರಣಿಕೆಯ ಚಿತ್ರೀಕರಣ ಶೇ.90ರಷ್ಟು ಮುಗಿದಿದ್ದು, ಸಂಕಲನ ಕೆಲಸ ನಡೆಯುತ್ತಿದೆ. ಮುಂದಿನ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ ವೇಳೆಗೆ ಚಿತ್ರ ಬಿಡುಗಡೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಮೇಶ್‌ ಅರವಿಂದ್‌. ನಟಿ ಕಾಜಲ್‌ ಅಗರ್‌ವಾಲ್‌ ಮಾತನಾಡಿ, “ತಮಿಳು ಅವತರಣಿಕೆಯ “ಪ್ಯಾರಿಸ್‌ ಪ್ಯಾರಿಸ್‌’ ಚಿತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ. ಈ ಚಿತ್ರವನ್ನು ಎಲ್ಲಾ ಮಹಿಳೆಯರಿಗೂ ಅರ್ಪಿಸಲು ಇಚ್ಛಿಸುತ್ತೇನೆ.

ಚಿತ್ರದ ಅಭಿನಯ ಒಳ್ಳೆಯ ಅನುಭವ ನೀಡುತ್ತಿದ್ದು, ನಿರ್ದೇಶಕರು ಸೇರಿದಂತೆ ಎಲ್ಲರೂ ಒಳ್ಳೆಯ ಸಹಕಾರ ಲಭಿಸುತ್ತಿದೆ. ಇತ್ತೀಚಿಗೆ ಭಾರತೀಯ ಚಿತ್ರರಂಗದ ಟ್ರೆಂಡ್‌ ಬದಲಾಗುತ್ತಿದ್ದು, ಇತರೆ ಚಿತ್ರಗಳ ಜತೆಗೆ ಮಹಿಳಾ ಪ್ರಧಾನ ಚಿತ್ರಗಳು ಪ್ರಧಾನ ಚಿತ್ರಗಳು ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿರುವುದು ಸಂತಸ ಉಂಟುಮಾಡಿದ್ದು, ಇಲ್ಲಿನ ವಾತಾವರಣವೂ ಉತ್ತಮವಾಗಿದೆ.

ಚಿತ್ರೀಕರಣದ ಬಳಿಕ ಐನಾಕ್ಸ್‌ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿದೆ, ಜತೆಗೆ ಮೈಲಾರಿ ಹೋಟೆಲ್‌ನ ದೋಸೆ ತಿಂದಿದ್ದು ಖುಷಿಕೊಟ್ಟಿದೆ’ ಎಂದರು. ಉಳಿದಂತೆ ಮಾತನಾಡಿದ ನಟಿಯರಾದ ಪರೂಲ್‌ ಯಾದವ್‌, ತಮನ್ನಾ ಭಾಟಿಯಾ ಚಿತ್ರದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಈ ವೇಳೆ ನಿರ್ಮಾಪಕ ಮನು ಕುಮಾರನ್‌, ಛಾಯಾಗ್ರಾಹಕ ಸತ್ಯ ಹೆಗಡೆ ಇದ್ದರು.

ಪಾರುಲ್‌ ಹುಟ್ಟುಹಬ್ಬ
ಇನ್ನು ಇದೇ ಸಂದರ್ಭದಲ್ಲಿ ಪಾರುಲ್‌ ಯಾದವ್‌ ಮಂಗಳವಾರ “ಬಟರ್‌ ಫ್ಲೈ’ ಚಿತ್ರತಂಡದೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಒಂದು ವರ್ಷದ ಹಿಂದೆ “ಬಟರ್‌ ಫ್ಲೈ’ ಚಿತ್ರದ ಮುಹೂರ್ತದ ದಿನದಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದ ನಟಿ ಪರೂಲ್‌ ಯಾದವ್‌ ಈ ವರ್ಷವೂ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷ. 

“ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಾಯಕರಿಗೆ ಸಿಗುವಷ್ಟು ಪ್ರಾಮುಖ್ಯತೆ ನಾಯಕಿಯರಿಗೆ ದೊರೆಯುವುದಿಲ್ಲ. ಇದೇ ಕಾರಣದಿಂದ ಬಹುತೇಕ ಸಿನಿಮಾಗಳ ಬಿಡುಗಡೆ, ಆಡಿಯೋ ರಿಲೀಸ್‌ ಎಲ್ಲವನ್ನೂ ನಾಯಕರ ಬರ್ತಡೇ ದಿನದಂದೇ ಮಾಡಲಾಗುತ್ತದೆ. ಆದರೆ, ಈ ಸಿನಿಮಾದಲ್ಲಿ ನಾಯಕಿಗೆ ಆದ್ಯತೆ ನೀಡಿದ್ದು, ಆ ಮೂಲಕ ನಾಯಕಿಯ ಹುಟ್ಟಿದಹಬ್ಬದ ದಿನ ಸಿನಿಮಾ ಆರಂಭಿಸಿದ್ದು ಸಂತಸದ ಸಂಗತಿ’ ಎಂದು ತಮ್ಮ ಸಂತೋಷ ಹಂಚಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next