Advertisement
ಅಂದು ಸೋಮವಾರ. ಮಾಜೈದ್ ಮೇಷ್ಟ್ರಿಗೆ ಮಜ್ಜಿಗೆ ತರಬೇಕಿತ್ತು. ಆ ಸರ್ಕಾರಿ ಶಾಲೆಯಲ್ಲಿ, ನನ್ನನ್ನೂ ಸೇರಿಸಿ ಒಂದೈದಾರು ಮಕ್ಕಳು ಮಾತ್ರವೇ, ಮಧ್ಯಾಹ್ನ ಊಟಕ್ಕೆ ಮನೆಗೆ ಹೋಗಿ ಬರುವವರಿದ್ದೆವು. ಮೂವರ ಮನೆಗಳಲ್ಲಿ ಮಾತ್ರ ದನ-ಕರುಗಳಿದ್ದರಿಂದ ಹಾಲು- ಮೊಸರು- ಮಜ್ಜಿಗೆ ಯಥೇತ್ಛವಾಗಿರುತ್ತಿತ್ತು. ಇಂದಿನಂತೆ ಆ ದಿನಗಳಲ್ಲಿ ಬಿಸಿಯೂಟದ ವ್ಯವಸ್ಥೆ ಇರಲಿಲ್ಲವಾದ್ದರಿಂದ, ದೂರದ ಊರಿಂದ ಬರುವ ಮಕ್ಕಳು ಹಾಗೂ ಶಿಕ್ಷಕರು ಬುತ್ತಿ ತರಬೇಕಿತ್ತು. ನಮ್ಮ ಶಾಲೆಯಲ್ಲಿದ್ದ ಮಾಜೈದ್ ಮೇಷ್ಟ್ರಿಗೆ, ಮಧ್ಯಾಹ್ನ ಊಟಕ್ಕೆ ಮನೆಗೆ ಹೋಗಿ ಬರುವಯಾರಾದರೊಬ್ಬರು ಮಜ್ಜಿಗೆ ತಂದುಕೊಡುವ ಪರಿಪಾಠವಿತ್ತು. ನಮಗೆ ಶಿಕ್ಷಕರೆಂದರೆ ಅತೀವ ಗೌರವ- ಭಯ- ಪ್ರೀತಿ. ಅವರು ಹೇಳಿದ ಯಾವುದೇ ಕೆಲಸವನ್ನೂ ಮರುಮಾತಿಲ್ಲದೆ ಮಾಡುತ್ತಿದ್ದೆವು.
ಬಂದವಳ ಮುಖದಲ್ಲಿ, ಒಂದು ಬಗೆಯ ಜಂಭವಿತ್ತು. ಮಾಜೈದ್ ಮೇಷ್ಟ್ರು ಮಜ್ಜಿಗೆಯ ಸವಿಯುಂಡು ಕ್ಲಾಸಿಗೆ ಬರುವ ಹೊತ್ತಿಗೆ ಒಂದು ಆಘಾತಕಾರಿ ವಿಷಯ ಗೊತ್ತಾಯಿತು. ಅವರು ಹಿಂದಿನ ದಿನ ಕೊಟ್ಟ ಮನೆಗೆಲಸವನ್ನು ತರಗತಿಯ ಬಹಳಷ್ಟು ಮಂದಿ ಮಾಡಿಯೇ ಇರಲಿಲ್ಲ. ಹಾಗೆ ಮರೆತವರ ಪಟ್ಟಿಯಲ್ಲಿ ನಾನೂ ಇದ್ದೆ! ಆಗ ಪಕ್ಕನೆ ನೆನಪಿಗೆ ಬಂದದ್ದು ಮಜ್ಜಿಗೆ. ನೆಲಕ್ಕೆ ಬಿದ್ರೂ ಮೂಗು ಮೇಲೆ ಎಂಬಂತೆ, ನಾನು ಸ್ನೇಹಿತರಲ್ಲಿ “ಮಾಜೈದ್ ಮೇಷ್ಟ್ರು ನಂಗೇನು ಶಿಕ್ಷೆ ಕೊಡಲ್ಲ. ಯಾಕಂದ್ರೆ, ಎಷ್ಟೆಲ್ಲ ದಿನ ಮಜ್ಜಿಗೆ ತಂದು ಕೊಟ್ಟಿದೇನೆ, ಗೊತ್ತಾ?’ ಎಂದುಬಿಟ್ಟೆ. ನನ್ನ ತರಗತಿಯಲ್ಲಿ, ಅವರಿಗೆ ಮಜ್ಜಿಗೆ ತರುತ್ತಿದ್ದುದು ನಾನು ಮಾತ್ರ. ಅದೇ ನಂಬಿಕೆಯಲ್ಲಿ ನನಗೆ ಖಂಡಿತ ಶಿಕ್ಷೆಯಲ್ಲಿ ರಿಯಾಯಿತಿ ಎಂದು ಲೆಕ್ಕ ಹಾಕಿದ್ದೆ. ಮಧ್ಯಾಹ್ನ ಮೊದಲ ಪೀರಿಯಡ್ ಮಾಜೈದ್ ಮೇಷ್ಟ್ರದ್ದೇ. ಅವರು, ಬಂದವರೇ ಕೇಳಿಯೇ ಬಿಟ್ಟರು- “ಏಯ್, ಯಾರೆಲ್ಲ ಹೋಮ್
ವರ್ಕ್ ಮಾಡಿಲ್ರೋ ?’ ಎಂದು.
Related Articles
ನೋಡಿದ್ದೇ, ಮೇಷ್ಟ್ರಿಗೆ ರೇಗಿತು. ಕೈಲಿದ್ದ ಬೆತ್ತದಿಂದ ಒಂದು ಕಡೆಯಿಂದ ಕಜ್ಜಾಯ ಕೊಡುತ್ತಾ ಬಂದರು. ನನ್ನ ಬೆಂಚಿನ ಬಳಿ ಬಂದಂತೆಲ್ಲ ಎದೆಯ ಬಡಿತ ಹೆಚ್ಚಾಗತೊಡಗಿತ್ತು. ಮನಸ್ಸಿನಲ್ಲಿಯೇ ದೇವ್ರೇ ದೇವ್ರೇ, ಇದೊಂದು ದಿನ ಕಾಪಾಡು…. ಇದೊಂದು ದಿನ ಕಾಪಾಡು… ಎಂದುಕೊಂಡೆ. ಮನಸ್ಸಿನಲ್ಲಿ, “ಮಜ್ಜಿಗೆ’ ನನ್ನನ್ನು ಕಾಪಾಡೀತು ಎಂಬ ಭರವಸೆ ಜೀವಂತವಾಗಿತ್ತು. ನನ್ನ ಪಕ್ಕದವಳಿಗೆ ಕಜ್ಜಾಯ ಕೊಟ್ಟು ನನ್ನ ಬಳಿ ಬಂದರು. ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡೆ. ಒಂದು ಕ್ಷಣ ನನ್ನನ್ನ ನೋಡಿ ಸುಮ್ಮನಾದರು.
Advertisement
ಅಬ್ಟಾ, ಬಚಾವಾದೆ ಎಂದುಕೊಳ್ಳುತ್ತಿರುವಾಗಲೇ, ನನ್ನ ಕೈ ಮೇಲೂ ಬಿದ್ದೇ ಬಿಟ್ಟಿತು ಬಿಸಿ ಬಿಸಿ ಕಜ್ಜಾಯ! ಈ ಪೆಟ್ಟಿನಿಂದಾದ ನೋವಿಗಿಂತ, ನಮ್ಮ ಮನೆಯ ಮಜ್ಜಿಗೆ ನನ್ನನ್ನು ಕಾಪಾಡಲಿಲ್ಲ ಎಂಬ ನೋವೇ ಹೆಚ್ಚಾಗಿತ್ತು. ಮೇಷ್ಟ್ರನ್ನು ಮನಸ್ಸಿನಲ್ಲಿಯೇ ಬೈದುಕೊಂಡೆ. ಇನ್ಯಾವತ್ತೂ ಇವರಿಗೆ ಮಜ್ಜಿಗೆ ತಂದುಕೊಡಬಾರದು ಎಂದು ನಿರ್ಧರಿಸಿದೆ. ಮಜ್ಜಿಗೆ ಕೊಟ್ಟಿರುವ ಕಾರಣಕ್ಕೆ ನನಗೆ ಮೇಷ್ಟ್ರು ಹೊಡೆಯಲ್ಲ ಎಂಬ ನನ್ನ ನಂಬಿಕೆ ಮತ್ತು ಅಹಂ ಅವತ್ತು ತೊಳೆದುಕೊಂಡು ಹೋಗಿತ್ತು. ಸಂಜೆಯವರೆಗೂ ಸುಮ್ಮನೆ ಮುಖ ಊದಿಸಿಕೊಂಡು ಕೂತಿದ್ದೆ. ಇದೆಲ್ಲಾ ಒಂದು ದಿನವಷ್ಟೇ. ಮರುದಿನ ಮಧ್ಯಾಹ್ನ, ಮತ್ತದೇ ಸಂಭ್ರಮದಲ್ಲಿ ಮಾಜೈದ್ ಮೇಷ್ಟ್ರಿಗೆ ಮಜ್ಜಿಗೆ ತಗೊಂಡು ಹೋಗಿದ್ದೆ
ಪ್ರಭಾ ಭಟ್ ಹೊಸ್ಮನೆ