Advertisement

ನಡೆದಾಡುವವರ ನಡುಗಿಸೋ ಹೆದ್ದಾರಿಗಳು!

10:40 AM Jan 06, 2020 | Suhan S |

ನೆರೆಯ ಊರುಗಳನ್ನು ಅತಿ ಕಡಿಮೆ ಅವಧಿಯಲ್ಲಿ ತಲುಪಲು ನಗರದ ಹೆಬ್ಟಾಗಿಲುಗಳನ್ನು ಕೂಡುವಂತೆ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಲಕ ಲಕ ಹೊಳೆಯುವ ಈ ಹೆದ್ದಾರಿಗಳಿಂದ ಸರಕು-ಸಾಗಣೆ, ಪ್ರಯಾಣಿಕರನ್ನು ಹೊತ್ತೂಯ್ಯುವ ವಾಹನಗಳು ವೇಗವಾಗಿ ಸಂಚರಿಸಲು ಅನುಕೂಲವೂ ಆಗಿದೆ. ಇದರ ಬೆನ್ನಲ್ಲೇ ಸ್ಥಳೀಯ ನಿವಾಸಿಗಳ ಪಾಲಿಗೆ ಯಮಲೋಕಕ್ಕೆ ಕೊಂಡೊಯ್ಯುವ “ರಹದಾರಿ’ಗಳಾಗಿಯೂ ಮಾರ್ಪಡುತ್ತಿವೆ. ಸ್ವತಃ ಸಂಚಾರ ಪೊಲೀಸ್‌ ಇಲಾಖೆ ನೀಡಿದ ಮಾಹಿತಿ ಪ್ರಕಾರ ಮೂರು ವರ್ಷಗಳಲ್ಲಿ ನಗರದಲ್ಲಿ 1,949 ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 2,026 ಜನ ಮೃತಪಟ್ಟಿದ್ದಾರೆ. ಈ ಪೈಕಿ 800ಕ್ಕೂ ಅಧಿಕ ಪಾದಚಾರಿಗಳಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಈ ಹೆದ್ದಾರಿಗಳು ರಸ್ತೆ ಅಪಘಾತಗಳಲ್ಲಿ 153 ಜನರನ್ನು ಬಲಿ ತೆಗೆದುಕೊಂಡಿವೆ. ಇದಕ್ಕೆ ಹೊಂದಿಕೊಂಡಿರುವ ರಾಜ್ಯ ಹೆದ್ದಾರಿಗಳಲ್ಲಿ 37 ಜನ ಸಾವನ್ನಪ್ಪಿದ್ದಾರೆ. ಅಂದರೆ, ಹೆಚ್ಚು-ಕಡಿಮೆ ಪ್ರತಿ ಎರಡು ದಿನಕ್ಕೊಂದು ಬಲಿ ಆಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಮೂಲಸೌಕರ್ಯಗಳ ಕೊರತೆ ಎನ್ನಲಾಗಿದೆ.

Advertisement

ಆದರೆ, ಪ್ರಾಧಿಕಾರಕ್ಕೆ ಮಾತ್ರ ಫಾಸ್ಟ್‌ಟ್ಯಾಗ್‌ ಅಳವಡಿಸಿಕೊಳ್ಳದ ವಾಹನಗಳಿಂದ ದುಪ್ಪಟ್ಟು ಟೋಲ್‌ ವಸೂಲು ಮಾಡುವುದರಲ್ಲಿ ಹಾಗೂ ಟೋಲ್‌ಪ್ಲಾಜಾಗಳನ್ನು ಹೈಟೆಕ್‌ ಮಾಡುವಲ್ಲಿ ಇರುವ ಉತ್ಸಾಹ, ಪ್ರಾಣಕ್ಕೆ ಎರವಾಗುತ್ತಿರುವ ಮೂಲಸೌಕರ್ಯಗಳ ಕೊರತೆಯನ್ನು ನೀಗಿಸುವಲ್ಲಿ ಕಾಣುತ್ತಿಲ್ಲ. ಹಲವು ವರ್ಷಗಳಿಂದ ಕೆಲವು ಕಡೆಗಳಲ್ಲಿ ಇನ್ನೂ ಸ್ಕೈವಾಕ್‌ಗಳನ್ನು ನಿರ್ಮಿಸಿಲ್ಲ. ಹಲವೆಡೆ ಅಂಡರ್‌ಪಾಸ್‌ಗಳ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಸರಿಯಾದ ಸೂಚನಾ ಫ‌ಲಕಗಳೂ ಇಲ್ಲ. ಈ ಹಿನ್ನೆಲೆಯಲ್ಲಿ ನಗರದ ಸಂಪರ್ಕ ಸೇತುವೆಗಳಾದ ಈ ಹೆದ್ದಾರಿಗಳಲ್ಲಿನ ಪಯಣ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…

ಬೆಂಗಳೂರಿಗೆ ಹೊಂದಿಕೊಂಡಂತೆ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳಿವೆ. ಬೆಂಗಳೂರು- ಕೋಲಾರ (ಎನ್‌ಎಚ್‌ 75), ಬೆಂಗಳೂರು- ಹೈದರಾಬಾದ್‌ (ಎನ್‌ಎಚ್‌ 44), ಬೆಂಗಳೂರು- ತುಮಕೂರು (ಎನ್‌ಎಚ್‌ 48), ಬೆಂಗಳೂರು- ಮೈಸೂರು (ಎನ್‌ ಎಚ್‌ 275) ರಸ್ತೆಗಳಿವೆ. ಇದರ ಜತೆಗೆ ಕನಕಪುರ, ಮಾಗಡಿ, ಬನ್ನೇರುಘಟ್ಟ ರಸ್ತೆಗಳು ರಾಜ್ಯ ಹೆದ್ದಾರಿಗಳೂ ಇವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ವು ಮಾರ್ಗದುದ್ದಕ್ಕೂ ಸೂಕ್ತ ಸೌಲಭ್ಯಗಳನ್ನು ಒದಗಿಸದಿರುವುದು ಮೇಲ್ನೋಟಕ್ಕೆ ಎದ್ದುಕಾಣುತ್ತದೆ. ಅಗತ್ಯಕ್ಕೆ ತಕ್ಕಂತೆ ಮೇಲ್ಸೇತುವೆ ನಿರ್ಮಿಸದಿರುವುದು. ಪಾದಚಾರಿ ರಸ್ತೆ ಇಲ್ಲದಿರುವುದು. ರಸ್ತೆ ದಾಟಲು ಬೆಳಕಿನ ವ್ಯವಸ್ಥೆ, ಬ್ಲಾಕ್‌ ಸ್ಪಾಟ್‌, ಸೂಚನಾ ಫ‌ಲಕಗಳ ಕೊರತೆ, ಸ್ಕೈವಾಕ್‌ ಇದ್ದರೂ ಜನ ರಸ್ತೆಯಲ್ಲಿಯೇ ದಾಟುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದರ ಜತೆಗೆ ಸಾರ್ವಜನಿಕರೂ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವುದು ಹಾಗೂ ಮತ್ತೂಂದೆಡೆ ಅತಿ ವೇಗವಾಗಿ ಬರುವ ವಾಹನಗಳು ರಸ್ತೆ ದಾಟುವವರ ಪ್ರಾಣಕ್ಕೆ ಎರವಾಗುತ್ತಿದೆ ಎಂಬ ಅಭಿಪ್ರಾಯವೂ ಸ್ಥಳೀಯರು ಹಾಗೂ ಪೊಲೀಸರಿಂದ ವ್ಯಕ್ತವಾಗುತ್ತದೆ.

ಎಲ್ಲೆಲ್ಲಿ ಬೇಕಿದೆ ಸ್ಕೈವಾಕ್‌? ;  ಹೆಬ್ಟಾಳ ಮೇಲ್ಸೇತುವೆ ಕೆಳಗೆ (ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿ) ಸಿಗ್ನಲ್‌ ಇದ್ದು, ರಸ್ತೆ ದಾಟಲು ಸಾರ್ವಜನಿಕರು ಪ್ರಯಾಸಪಡಬೇಕಾಗಿದೆ. ಹಾಗೆಯೇ ರಸ್ತೆಗೆ ಹಾಕಲಾಗಿರುವ ಬಿಳಿ ಪಟ್ಟಿಯೂ ಕಿತ್ತುಹೋಗಿದ್ದು, ಪಾದಚಾರಿಗಳು ಮತ್ತು ಸವಾರರ ನಡುವೆ ಗೊಂದಲ ಉಂಟಾಗಿದೆ. ಮೈಸೂರು ರಸ್ತೆ ಸ್ಯಾಟಲೈಟ್‌ ಬಳಿ, ಕೆಂಗೇರಿ, ವಂಡರ್‌ ಲಾಗೆ ಹೋಗುವ ಮಾರ್ಗದಲ್ಲಿ ಹೆಚ್ಚಿನ ವಾಹನಗಳು ವೇಗದಲ್ಲಿ ಸಾಗುತ್ತಿದ್ದು, ರಸ್ತೆ ದಾಟಲು ತೊಂದರೆ ಅನುಭವಿಸುತ್ತಿದ್ದಾರೆ. ಗೊರಗುಂಟೆಪಾಳ್ಯ, 8ನೇ ಮೈಲಿ, ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿಯೂ ವಾಹನಗಳ ದಟ್ಟಣೆ ನಡುವೆ ಜನ ರಸ್ತೆ ದಾಟುತ್ತಿದ್ದು, ಇಲ್ಲಿ ಸ್ಕೈವಾಕ್‌ಗಳ ಅವಶ್ಯಕತೆ ಇದೆ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ಅಪಘಾತಕ್ಕೆ ಕಾರಣ? :  ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಂಪ್‌ ಳನ್ನು ನಿರ್ಮಿಸುವಂತಿಲ್ಲ. ಆದರೆ, ಪ್ರಾಧಿಕಾರ ಅವೈಜ್ಞಾನಿಕವಾಗಿ ಹಂಪ್‌ಗ್ಳನ್ನು ನಿರ್ಮಿಸಿದೆ. ಇದರಿಂದ ಮೈಸೂರು ರಸ್ತೆಯ ಅರ್ಚಕರ ಹಳ್ಳಿಯಲ್ಲಿ 2019ರ ಅ. 27ರಂದು ಶಶಾಂಕ್‌ (24), ಸಂತೋಷ (21) ಮೃತಪಟ್ಟಿದ್ದರು. ರಾಷ್ಟ್ರೀಯ ಹೆದ್ದಾರಿಯಾಗಿರುವ ದೇವನಹಳ್ಳಿ ರಸ್ತೆ, ತುಮಕೂರು ರಸ್ತೆ ಸೇರಿದಂತೆ ಹಲವು ಕಡೆ ಅವೈಜ್ಞಾನಿಕ ಹಂಪ್‌ಗಳು ಸಹ ಅಪಘಾತ ಗಳಿಗೆ ಕಾರಣವಾಗುತ್ತಿವೆ ಎನ್ನಲಾಗಿದೆ.

Advertisement

ಕಡಿವಾಣ ಯಾವಾಗ? :  ಹೆದ್ದಾರಿಗಳಲ್ಲಿ ಪಾನಮತ್ತ ಚಾಲಕ ರಿಂದ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ದೇಶಾದ್ಯಂತ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿರುವ ಎಲ್ಲ ಮದ್ಯದಂಗಡಿ ಗಳನ್ನು ತೆರವುಗೊಳಿಸುವಂತೆ 2017ರಲ್ಲಿ ಆದೇಶ ನೀಡಿತ್ತು. ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನವನ್ನೂ ನೀಡಿತ್ತು. ಆದರೆ, ಹೊರವಲಯದ ಹೆದ್ದಾರಿಗಳಲ್ಲಿ ಮದ್ಯದಂಗಡಿಗಳು ರಾರಾಜಿಸುತ್ತಿದ್ದು, ನಿರೀಕ್ಷಿತ ಮಟ್ಟದಲ್ಲಿ ಕಡಿವಾಣ ಬಿದ್ದಿಲ

ಸ್ಕೈವಾಕ್‌ಗೆ ಒಂದು ಕೋಟಿ ರೂ.! :  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ರಸ್ತೆ ಸುರಕ್ಷತಾ ವಿಭಾಗವಿದ್ದು, ಮಾನದಂಡಗಳಂತೆಯೇ ರಸ್ತೆ ನಿರ್ಮಿಸಲಾಗಿದೆಯೇ? ಸುಗಮ ಸಂಚಾರದ ಬಗ್ಗೆ ಜಾಗೃತಿ, ಫ‌ಲಕಗಳ ಅಳವಡಿಕೆ ಬಗ್ಗೆ ಗಮನಹರಿಸುವುದು, ಹೆದ್ದಾರಿ ಪಕ್ಕದಲ್ಲಿರುವ ಹಳ್ಳಿಗಳ ಜನರಿಗೆ ಅವಶ್ಯಕತೆ ಇದ್ದರೆ ಮೇಲ್ಸೇತುವೆ ನಿರ್ಮಾಣ ಹೀಗೆ ಹಲವಾರು ಕಾರ್ಯಗಳನ್ನು ಕೈಗೊಳ್ಳುವುದು ಇದರ ಕೆಲಸ. ವಿಭಾಗವು ರಸ್ತೆ ಸುರಕ್ಷತಾ ಸಮಿತಿಗೆ ಶಿಫಾರಸು ಮಾಡಲಿದ್ದು, ಸಮಿತಿಯೇ ಅನುಮೋದನೆ ನೀಡಲಿದೆ. ಆದರೆ, ಈ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇನ್ನು ಒಂದು ಸ್ಕೈವಾಕ್‌ ನಿರ್ಮಾಣಕ್ಕೆ ಒಂದು ಕೋಟಿ ರೂ. ವೆಚ್ಚವಾಗಲಿದೆ ಎನ್ನುತ್ತಾರೆ ಪ್ರಾಧಿಕಾರದ ಅಧಿಕಾರಿಗಳು.

54 ಬ್ಲಾಕ್ ಸ್ಪಾಟ್ ಗಳು : ನಗರದಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುವ ರಸ್ತೆಗಳನ್ನು ಬ್ಲಾಕ್‌ಸ್ಪಾಟ್‌ ಎಂದು ಗುರುತಿಸಲಾಗುವುದು. ಹೊಸೂರು ಮುಖ್ಯರಸ್ತೆ, ನೈಸ್‌ ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ ಟೋಲ್‌, ಏರ್‌ಪೋರ್ಟ್‌ ಸಮೀಪದ ಹೊರವರ್ತುಲ ರಸ್ತೆ ಸೇರಿದಂತೆ 54 ಬ್ಲಾಕ್‌ಸ್ಪಾಟ್‌ಗಳನ್ನು ಸಂಚಾರ ಪೊಲೀಸರು ಗುರುತಿಸಿದ್ದಾರೆ.

15 ನಿರ್ಮಾಣ, 22 ಸ್ಕೈವಾಕ್‌ ನನೆಗುದಿಗೆ :  ಪ್ರಾಧಿಕಾರ ಬೆಂಗಳೂರು ಹೊರವಲಯದ ಹೆದ್ದಾರಿಗಳಲ್ಲಿ 37 ಪಾದಚಾರಿ ಮೇಲುಸೇತುವೆ (ಸ್ಕೈವಾಕ್‌) ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಈವರೆಗೆ 15 ಮಾತ್ರ ಮುಕ್ತಾಯವಾಗಿವೆ. 12 ಸ್ಕೈವಾಕ್‌ಗಳು ನಿರ್ಮಾಣ ಹಂತದಲ್ಲಿದ್ದು, ನೆಲಮಂಗಲದಲ್ಲಿ ಸಾರ್ವಜನಿಕರ ವಿರೋಧವಿದೆ. ಭಾರತೀನಗರದಲ್ಲಿ ಭದ್ರತೆ ದೃಷ್ಟಿಯಿಂದ ಕಾಮಗಾರಿ ನಿಲ್ಲಿಸಲಾಗಿದೆ. ಪಾಲನಹಳ್ಳಿ ಗೇಟ್‌ ಬಳಿ ನಿರ್ಮಾಣ ಹಂತದ ಸ್ಕೈವಾಕ್‌ಗೆ ಕೋರ್ಟ್‌ ತಡೆ ನೀಡಿದೆ. ಕೋಡಿಗನಹಳ್ಳಿ, ವಿಐಟಿ ಕ್ರಾಸ್‌ನಲ್ಲಿ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ವೆಂಕಟಗಿರಿಕೋಟೆಯಲ್ಲಿ ಸ್ಕೈವಾಕ್‌ ನಿರ್ಮಾಣಕ್ಕೆ ಬಿಡ್ಡಿಂಗ್‌ ಆಗಬೇಕಿದೆ.

 

ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next