Advertisement

ರಾವೂರ ಹೆದ್ದಾರಿಯಲ್ಲಿ ಬಿಸಿಲೇ ಬಸ್‌ ನಿಲ್ದಾಣ

01:15 PM May 26, 2018 | |

ವಾಡಿ: ಇಡೀ ಊರಿನ ಜನರು ಸೇರುವ ದೊಡ್ಡ ವೃತ್ತವಿದು. ಕಲಬುರಗಿ-ಯಾದಗಿರಿ ಜಿಲ್ಲೆಗಳಿಗೆ ಹಾಗೂ ಚಿತ್ತಾಪುರ, ಶಹಾಬಾದ, ಜೇವರ್ಗಿ, ಸೇಡಂ, ಶಹಾಪುರ ತಾಲೂಕು ಕೇಂದ್ರಗಳ ನಡುವೆ ಸಂಪರ್ಕ ಸೇತುವಾಗಿರುವ ಈ ಗ್ರಾಮದಲ್ಲಿ ನೂರು ಅಡಿ ಅಗಲದ ರಾಷ್ಟ್ರೀಯ ಹೆದ್ದಾರಿಯಿದ್ದು, ಬಸ್‌ಗಾಗಿ ಕಾಯುವ ಪ್ರಯಾಣಿಕರು ರಣಬಿಸಿಲಿನಲ್ಲಿ ನಿಂತು ಬಸವಳಿಯಬೇಕಾದ ದುಸ್ಥಿತಿ ಎದುರಾಗಿದೆ.

Advertisement

ಚಿತ್ತಾಪುರ ತಾಲೂಕಿನ ರಾವೂರ ಗ್ರಾಮವು ಜಿಪಂ, ತಾಪಂ ಹಾಗೂ ಗ್ರಾಪಂ ಕೇಂದ್ರ ಸ್ಥಾನ ಹೊಂದಿದ್ದು, ಬಹುತೇಕ ದೊಡ್ಡ ರೈತರು ಹಾಗೂ ಗಣಿ ಉದ್ಯಮಿಗಳು ವಾಸಿಸುವ ಊರಾಗಿದೆ. ಆಸ್ಪತ್ರೆ, ಶಾಲೆ, ಕಾಲೇಜು, ಐತಿಹಾಸಿಕ ತಾಣಗಳು, ದೇವಸ್ಥಾನ, ಚರ್ಚ್‌, ದರ್ಗಾಗಳು, ಎರಡು ಪೆಟ್ರೋಲ್‌ ಬಂಕ್‌, ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠ, ಕೃಷಿ ಮತ್ತು ಕೃಷ್ಣಾ ಗ್ರಾಮೀಣ ಬ್ಯಾಂಕ್‌, ಹತ್ತಾರು ಕಲ್ಲು ಗಣಿಗಳು ಹೀಗೆ ವಿವಿಧ ಸೌಲಭ್ಯಗಳಿಂದ ಆವರಿಸಿರುವ ರಾವೂರು ಗ್ರಾಮ ಪಟ್ಟಣ ಪ್ರದೇಶವಾಗಿ ಪ್ರಗತಿ ಹೊಂದುತ್ತಿದೆ. ಆದರೆ ಈ ಊರಿಗೊಂದು ಬಸ್‌ ನಿಲ್ದಾಣ ಒದಗಿಸಬೇಕೆಂಬ ಕನಿಷ್ಠ ಕಳಕಳಿ ಜನಪ್ರತಿನಿಧಿಗಳಿಗೆ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಮಕ್ಕಳು, ಮಹಿಳೆಯರು ಹಾಗೂ ವೃದ್ಧ ಪ್ರಯಾಣಿಕರು ರಸ್ತೆ ಮೇಲೆ ನಿಂತು ಶಿಕ್ಷೆ ಅನುಭವಿಸುವಂತೆ ಆಗಿದೆ.

ರಾಜಕೀಯ ಘಟಾನುಘಟಿ ನಾಯಕರಿರುವ ರಾವೂರ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದೆ. ಕುಡಿಯಲು ಶುದ್ಧ ನೀರು ಸಿಗುವುದಿಲ್ಲ. ಶೌಚಾಲಯ ಸಮಸ್ಯೆ ಗಂಭೀರವಾಗಿದ್ದು, ಬಹಿರ್ದೆಸೆ ಪದ್ಧತಿ ಜೀವಂತವಿದೆ.
 
ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಕಿರಿದಾದ ಬಸ್‌ ತಂಗುದಾಣವನ್ನು ರಸ್ತೆ ಅಗಲೀಕರಣದ ವೇಳೆ ಜೆಸಿಬಿ ಯಂತ್ರಗಳು ನೆಲಸಮ ಮಾಡಿವೆ. ಪುರುಷ ಪ್ರಯಾಣಿಕರು ಹೋಟೆಲ್‌ವು ಅಂಗಡಿಗಳಲ್ಲಿ ನಿಂತು ನೆರಳಿನ ಆಸರೆ ಪಡೆಯುತ್ತಾರೆ. ಆದರೆ ಮಹಿಳಾ ಪ್ರಯಾಣಿಕರು ರಣಬಿಸಿಲಿನಲ್ಲಿ ನೆತ್ತಿ ಸುಟ್ಟುಕೊಂಡು ವಾಹನಗಳಿಗಾಗಿ ಕಾಯುವ ಮೂಲಕ ಜನಪ್ರತಿನಿಧಿ ಗಳಿಗೆ ಮತ್ತು ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ. ಗುಣಮಟ್ಟದ ರಸ್ತೆ ನಿರ್ಮಿಸಿಕೊಟ್ಟಿರುವ ಸರಕಾರ, ಬಸ್‌ ನಿಲ್ದಾಣ ನಿರ್ಮಿಸುವುದನ್ನು ಮರೆತಿದೆ. ಇದು ಪ್ರಯಾಣಿಕರ ಗೋಳಾಟಕ್ಕೆ ಕಾರಣವಾಗಿದೆ. ಜನರು ಬೀದಿಗಿಳಿದು ಹೋರಾಟ ಕಟ್ಟುವ ಮುಂಚೆಯೇ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಬಸ್‌ ನಿಲ್ದಾಣ ಸೌಲಭ್ಯ ಒದಗಿಸುವವರೇ ಕಾಯ್ದು ನೋಡಬೇಕು.

ರಸ್ತೆ ದೊಡ್ಡದಾಗಿದೆ. ಎನ್‌ಇಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ಕ್ರೂಸರ್‌, ಜೀಪ್‌, ಮ್ಯಾಕ್ಷಿಕ್ಯಾಬ್‌ ಸೇರಿದಂತೆ ಇತರ ಖಾಸಗಿ ವಾಹನಗಳ ಸಂಚಾರ ಹೆಚ್ಚಿದೆ. ಆದರೆ ಬಸ್‌ ನಿಲ್ದಾಣ ಸೌಲಭ್ಯವಿಲ್ಲ. ವಿವಿಧ ತಾಲೂಕು ಕೇಂದ್ರಗಳಿಗೆ ಹೋಗುವ ಪ್ರಯಾಣಿಕರು ಬಿಸಿಲಿನಲ್ಲಿ ನಿಲ್ಲುತ್ತಾರೆ. ನೀರು ನೆರಳಿನ ಸಮಸ್ಯೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ನಿರ್ಲಕ್ಷಿಸಿದರೆ ಹೋರಾಟ ಮಾಡಲಾಗುವುದು.
ಜಗದೀಶ ಪೂಜಾರಿ, ರಾವೂರ ಗ್ರಾಮದ ಯುವ ಮುಖಂಡ

ರಾವೂರ ಮೂಲಕ ರಾಯಚೂರು ರಾಷ್ಟ್ರೀಯ ಹೆದ್ದಾರಿ-150 ಹಾಯ್ದು ಹೋಗಿದೆ. ಇದಕ್ಕೂ ಮುಂಚೆ ಇಲ್ಲಿ ಸಣ್ಣ ಬಸ್‌ ನಿಲ್ದಾಣವಿತ್ತು. ರಸ್ತೆ ಅಗಲೀಕರಣದಲ್ಲಿ ಅದು ತೆರವಾಗಿದೆ. ಪ್ರಯಾಣಿಕರು ತೊಂದರೆ ಅನುಭವಿಸು ತ್ತಿರುವುದು ನನ್ನ ಗಮನಕ್ಕಿದೆ.  ಬಸ್‌ ನಿಲ್ದಾಣ ನಿರ್ಮಿಸಲು ಜಾಗದ ಕೊರತೆಯಿದೆ. ಖಾಸಗಿಯವರು ಜಾಗ ಕೊಟ್ಟರೆ ಮಾತ್ರ ಬಸ್‌ ನಿಲ್ದಾಣ ನಿರ್ಮಿಸಲು ಸಾಧ್ಯವಾಗುತ್ತಿದೆ. ಜಾಗ ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಈ ಕುರಿತು ಸಾರಿಗೆ ಇಲಾಖೆ ಅಧಿ ಕಾರಿಗಳಿಗೆ ಪತ್ರ ಬರೆದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ.
ಅಶೋಕ ಸಗರ, ಜಿಪಂ ಸದಸ್ಯರು ರಾವೂರ

Advertisement

„ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next