ಮದುವೆಯಾದ ಬಳಿಕ ನಾಯಕ ನಟಿಯರು ಸಾಮಾನ್ಯವಾಗಿ ನೇಪಥ್ಯಕ್ಕೆ ಸರಿದಿರುವ ಉದಾಹರಣೆಗಳು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಾಕಷ್ಟು ಸಿಗುತ್ತವೆ. ಆದರೆ ಕೆಲವೊಬ್ಬ ನಾಯಕ ನಟಿಯರು ಮದುವೆಯ ಬಳಿಕವೂ ತಮ್ಮದೇಯಾದ ಬೇಡಿಕೆ ಉಳಿಸಿಕೊಂಡು, ಚಿತ್ರರಂಗದಲ್ಲಿ ಸಕ್ರಿಯವಾಗಿರುತ್ತಾರೆ.ಇಂತಹ ನಾಯಕ ನಟಿಯರ ಸಾಲಿಗೆ ಇತ್ತೀಚೆಗೆ ಸೇರ್ಪಡೆಯಾಗುತ್ತಿರುವ ಹೊಸ ಹೆಸರು ಮೇಘನಾ ರಾಜ್. ಹೌದು, ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಅಡಿಯಿಟ್ಟ ತಾರಾ ಜೋಡಿ. ಒಂದರ್ಥದಲ್ಲಿ ಹೇಳುವುದಾದರೆ, ಮೇಘನಾ ಮತ್ತು ಚಿರು ಇಬ್ಬರಿಗೂ ಮದುವೆಯ ಬಳಿಕ ಚಿತ್ರರಂಗದಲ್ಲಿ ಅದೃಷ್ಟ ಖುಲಾಯಿಸಿದಂತಿದೆ. ಮದುವೆಗೂ ಮುನ್ನ ವರ್ಷಕ್ಕೆ ಒಂದು-ಎರಡು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಮದುವೆಯ ಬಳಿಕ
ಹಿಂದೆಂದಿಗಿಂತಲೂ ಹೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದಾರೆ, ಚಿತ್ರರಂಗದಲ್ಲಿ ಹೆಚ್ಚು ಬ್ಯುಸಿಯಾಗುತ್ತಿದ್ದಾರೆ. ಒಂದೆಡೆ ಚಿರಂಜೀವಿ ಸರ್ಜಾ ಸಿಂಗ, ಕ್ಷತ್ರಿಯ, ಸೇರಿದಂತೆ ಇನ್ನೂ ಹೆಸರಿಡದ ಮೂರ್‍ನಾಲ್ಕು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರೆ, ಮೇಘನಾ ಕೂಡ ಒಂದರ ಹಿಂದೊಂದು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.
ಮೇಘನಾ ಮದುವೆಗೂ ಮುನ್ನ ಅಭಿನಯಿಸಿದ್ದ ಇರುವುದೆಲ್ಲವ ಬಿಟ್ಟು ಚಿತ್ರ ಅವರ ಮದುವೆಯ ಬಳಿಕ ತೆರೆಕಂಡಿತ್ತು. ಆ ಚಿತ್ರ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವ ಗೆಲುವು ತಂದುಕೊಡದಿದ್ದರೂ, ಚಿತ್ರದ ಬಗ್ಗೆ ಮತ್ತು ಮೇಘನಾ ಪಾತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅದಾದ ಬಳಿಕ ನಿಧಾನವಾಗಿ ಒಂದೊಂದೆ ಚಿತ್ರಗಳ ಆಫರ್ ಮೇಘನಾ ಅವರನ್ನು ಹುಡುಕಿಕೊಂಡು ಬರಲು ಶುರುವಾಯಿತು. ಸದ್ಯ ಮೇಘನಾ ರಾಜ್ ಸೃಜನ್ ಲೋಕೇಶ್ ಅಭಿನಯದ ಚಿತ್ರ ಸೇರಿದಂತೆ ಎರಡು-ಮೂರು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದರ ನಡುವೆಯೇ ಮೇಘನಾ ಅಭಿನಯಿಸಿರುವ ಹೊಸಚಿತ್ರ “ಒಂಟಿ’ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದ ಕೆಲಸಗಳಲ್ಲಿ ನಿರತವಾಗಿರುವ “ಒಂಟಿ’ ಚಿತ್ರ ಇತ್ತೀಚೆಗೆ ತನ್ನ ಆಡಿಯೋ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ. ಇನ್ನು ಈ ಚಿತ್ರದಲ್ಲಿ ಮೇಘನಾ ರಾಜ್, ಆರ್ಯಗೆ ನಾಯಕಿಯಾಗಿ ಜೋಡಿಯಾಗಿದ್ದಾರೆ. ಲವ್ ಕಂ ಆ್ಯಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಶ್ರೀ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. “ಒಂಟಿ’ ಚಿತ್ರದಲ್ಲಿ ಮೇಘನಾ ಅವರದ್ದು ಮಧ್ಯಮ ವರ್ಗದ ಕುಟುಂಬದ ಹುಡುಗಿಯ ಪಾತ್ರವಂತೆ. “ಚಿತ್ರದ ಪಾತ್ರ ನನಗೆ ಇಷ್ಟವಾಗಿದೆ. ಪ್ರೇಕ್ಷಕರಿಗೂ ಕೂಡ ನನ್ನ ಪಾತ್ರ ಇಷ್ಟವಾಗುವುದೆಂಬ ನಂಬಿಕೆ ಇದೆ. ಚಿತ್ರದಲ್ಲಿ ಮತ್ತು ನನ್ನ ಪಾತ್ರದಲ್ಲಿ ಹಲವು ತಿರುವುಗಳು, ಶೇಡ್‌ಗಳು ಇದೆ. ಅದು ಏನು ಅನ್ನೋದನ್ನ ತೆರೆಮೇಲೆ ನೋಡಬೇಕು’ ಎನ್ನುತ್ತಾರೆ ಮೇಘನಾ.
ಜಿ. ಎಸ್. ಕಾರ್ತಿಕ್