Advertisement

ನೀರಿನ ಅನುದಾನ ವಾಪಸ್‌ ವಿಚಾರದಲ್ಲಿ ಗದ್ದಲ

11:07 PM Feb 25, 2021 | Team Udayavani |

ಕಾರ್ಕಳ: ಬಂಗ್ಲೆಗುಡ್ಡೆ ವಾರ್ಡ್‌ನ 30 ಲಕ್ಷ ರೂ. ಕುಡಿಯುವ ನೀರಿನ ಅನುದಾನ ವಾಪಸ್‌ ಹೋದ ವಿಚಾರ ಈ ಬಾರಿಯೂ ಮತ್ತೆ ಗದ್ದಲಕ್ಕೆ ಕಾರಣವಾಯಿತು. ಆಡಳಿತ ಪಕ್ಷದವರು ಒಟ್ಟಾಗಿ ವಿಪಕ್ಷ ಸದಸ್ಯೆಯನ್ನು ತರಾಟೆಗೂ ತೆಗೆದುಕೊಂಡರು. ಹಠ ಬಿಟ್ಟು ಅಭಿವೃದ್ಧಿಗೆ ಸಹಕರಿಸಿ ಎಂದು ಅಧ್ಯಕ್ಷರು ಮನವಿ ಮಾಡಿದರು.

Advertisement

ಅಧ್ಯಕ್ಷೆ ಸುಮಾಕೇಶವ್‌ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಪುರಸಭೆ ಸಾಮಾನ್ಯ ಸಭೆ ನಡೆದಿದ್ದು, ಗದ್ದಲ, ಆರೋಪಗಳಿಗೆ ವೇದಿಕೆಯಾಯಿತು.

ಪರಿಹಾರಕ್ಕೆ ಆಗ್ರಹ
ವಿಪಕ್ಷ ಸದಸ್ಯೆ ಪ್ರತಿಮಾ ರಾಣೆ ತನ್ನ ವಾರ್ಡ್‌ನ 30 ಲಕ್ಷ ರೂ ವೆಚ್ಚದ ನೀರಿನ ಅನುದಾನ ವಾಪಸ್‌ ವಿಚಾರ ಪ್ರಸ್ತಾವಿಸಿ ಹಣ ಹೋಗಿದ್ದಕ್ಕೆ ಉತ್ತರ, ಪರಿಹಾರ ಸಿಗಬೇಕು. ಅಲ್ಲಿ ತನಕ ಸಭೆ ನಡೆಸಲು ಬಿಡುವುದಿಲ್ಲ ಎಂದು ಹೇಳಿದರು. ಇದಕ್ಕೆ ಅಧ್ಯಕ್ಷೆ ಸುಮಾ ಕೇಶವ್‌ ಅವರು ಉತ್ತರಿಸಿ, ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಉತ್ತರ ನೀಡುವ ಪ್ರಯತ್ನ ನಡೆದಿತ್ತು. ಮುಖ್ಯಾಧಿಕಾರಿ, ಅಧಿಕಾರಿ ಜತೆ ಕೂತು ಬಗೆಹರಿಸಿಕೊಳ್ಳುವ ಸಲಹೆ ನೀಡಿದರು. ಪ್ರತಿ ಬಾರಿ ಇದೊಂದೇ ವಿಚಾರವನ್ನು ಎತ್ತಿಕೊಂಡು ಸಭೆಯಲ್ಲಿ ಗದ್ದಲ ಎಬ್ಬಿಸುವುದು ಬೇಡ. ಅಭಿವೃದ್ಧಿ ಪರ ಮಾತನಾಡಿ, ಅಭಿವೃದ್ಧಿ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರೆಲ್ಲರೂ ಎದ್ದು ನಿಂತು ಸದಸ್ಯೆಯವರನ್ನು ತರಾಟೆಗೆ ತೆಗೆದುಕೊಂಡರು. ವಿಪಕ್ಷ ಸದಸ್ಯ ವಿನ್ನಿ ಬೋಲ್ಡ್‌ ಮೆಂಡೋನ್ಸಾ ಸಭೆ ಕರೆದಿದ್ದೀರಿ, ನೀತಿ ನಿಯಮಗಳು ಸರಿ ಇರಲಿಲ್ಲ ಎಂದು ಹೇಳಿದರು.

ಪುರಸಭೆ 23 ವಾರ್ಡ್‌ಗೂ ತಂದೆ ತಾಯಿ ಇದ್ದಂತೆ
ವಿಪಕ್ಷ ಸದಸ್ಯ ಆಶ#ಕ್‌ ಅಹಮ್ಮದ್‌ ಪುರಸಭೆ ಆಡಳಿತ ಎಂದರೆ ತಂದೆ ತಾಯಿ ಇದ್ದಂತೆ ಎಲ್ಲ 23 ವಾರ್ಡ್‌ಗೂ ನ್ಯಾಯ ಒದಗಿಸಬೇಕು. ಒಂದು ವಾರ್ಡ್‌ ಮಾತ್ರ ಅಲ್ಲ, ಹೂಳೆತ್ತುವ ಕೆಲ ಆಗಬೇಕಿದೆ. ಪ್ರತಿಮ ರಾಣೆಯವರ ಬಂಗ್ಲೆಗುಡ್ಡೆ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಪುರಸಭೆಯಿಂದ ಬೋರ್‌ವೆಲ್‌ ತೆಗೆಸಿ, ಟಿ.ಸಿ ಹಾಕಿಸಿ ಈಗಿರುವ ನೀರಿನ ಪೈಪ್‌ಗ್ಳಿಗೆ ಪಬ್ಲಿಕ್‌ ಸಂಪರ್ಕ ನೀಡುವುದು. 4ರಿಂದ 5 ಇಂಚಿಗಿಂತ ಹೆಚ್ಚು ನೀರು ದೊರಕಿದರೆ ತೊಟ್ಟಿ ನಿರ್ಮಾಣ ಮಾಡುವ ಈ ಬಗ್ಗೆ ಸರ್ವಾನುಮತದ ನಿರ್ಣಯ ಮಾಡೋಣ ಎಂದಾಗ ಎಲ್ಲರೂ ಒಪ್ಪಿಗೆ ಸೂಚಿಸಿದ್ದು, ಚರ್ಚೆಗೆ ತೆರೆಬಿದ್ದಿತ್ತು.

ಬಡವರಿಗೆ ಅನ್ಯಾಯವಾಗಬಾರದು
ವಿಪಕ್ಷ ಸದಸ್ಯೆ ರೆಹಮತ್‌ ಎನ್‌.ಶೇಖ್‌ ತನ್ನ ವಾರ್ಡ್‌ನ ಬಡ ಅಸಹಾಯಕ ಕುಟುಂಬದ ಶೌಚಾಲಯ ಗುಂಡಿಗಳನ್ನು ಪಕ್ಕದವರೊಬ್ಬರು ದೂರು ನೀಡಿದ್ದರೆಂದು ಪುರಸಭೆ ಅಧಿಕಾರಿಗಳು ರಾಜಕೀಯ ಉದ್ದೇಶದಿಂದ ಮುಚ್ಚಿದ್ದಾಗಿ ದೂರಿದರು. ಆಡಳಿತ ಪಕ್ಷದ ಸದಸ್ಯೆ ಶಶಿಕಲಾ ಅವರೂ ಇಂತಹುದೇ ಸಮಸ್ಯೆ ಗಮನಕ್ಕೆ ತಂದಿದ್ದರೂ ಪರಿಹಾರವಾಗಿಲ್ಲ ಎಂದರು. ನೋಟಿಸ್‌ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿ ಹೇಳಿದರು.

Advertisement

ಉಳಿದಂತೆ 72 ಕೋ.ರೂ ಕುಡಿಯುವ ನೀರಿನ ಯೋಜನೆ, ಜೈನ್‌ ಹೊಟೇಲ್‌ ಬಳಿ ನಂದಿನಿ ಹಾಲು ಉತ್ಪನ್ನ ಮಾರಾಟ ಕೇಂದ್ರ ತೆರೆಯಲು ಅನುಮತಿ ವಿಚಾರ, ಬಂಡಿಮಠ ಬಸ್‌ ಶೆಲ್ಟರ್‌, ಆಸನ ವ್ಯವಸ್ಥೆ, ಪುರಸಭೆಯಲ್ಲಿ ಮಧ್ಯವರ್ತಿಗಳ ನಿಯಂತ್ರಣ, ಹಿರಿಯ ನಾಗರಿಕರಿಗೆ ತೆರಿಗೆ ವಿಚಾರದಲ್ಲಿ ಅಲೆದಾಟ ತಪ್ಪಿಸುವುದು ಇತ್ಯಾದಿ ಕುರಿತು ಚರ್ಚೆ ನಡೆಯಿತು. ಮಾಜಿ ಪುರಸಭೆ ಸದಸ್ಯ ಭೋಜ ಭಂಡಾರಿಯವರ ಸ್ಮರಣಾರ್ಥ ಮೌನಪ್ರಾರ್ಥನೆ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಪಲ್ಲವಿ, ಸ್ಥಾಯೀ ಸಮಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ ಮಲ್ಯ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಉಪಸ್ಥಿತರಿದ್ದರು.

ಸತ್ಯ ಪ್ರಮಾಣಕ್ಕೆ ಸಿದ್ಧರಿದ್ದೀರಾ?
ತನ್ನ ವಾರ್ಡ್‌ನ 30 ಲಕ್ಷ ರೂ. ಅನುದಾನ ವಾಪಸ್‌ ಹೋಗಲು ಕಾರಣರಾದ್ದಲ್ಲದೆ, ಎಸ್‌ಸಿಎಸ್‌ಟಿ ಅನುದಾನವನ್ನು ಕೊಡುವುದು ಬೇಡ ಎಂದು ನೀವು ಹೇಳಿದಲ್ಲವೆ? ಎಂದು ಸದಸ್ಯೆ ಪ್ರತಿಮಾ ರಾಣೆ ಮುಖ್ಯಾಧಿಕಾರಿಯವರಿಗೆ ಕೇಳಿ, ಸತ್ಯ ಪ್ರಮಾಣಕ್ಕೆ ಸಿದ್ಧರಿದ್ದೀರಾ ಎಂದು ಪ್ರಶ್ನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next