ಸಂಗೀತ ನಿರ್ದೇಶಕ ರವಿ ಬಸ್ರೂರುಗೆ ನಿರ್ದೇಶನದ ಕಡೆಗೆ ಆಸಕ್ತಿ ಇರೋದು, ಈಗಾಗಲೇ “ಗರ್‌ಗರ್ ಮಂಡ್ಲ’, “ಬಿಲಿಂಡರ್’ ಎಂಬ ಕುಂದಾಪುರ ಕನ್ನಡವನ್ನಿಟ್ಟುಕೊಂಡು ಸಿನಿಮಾ ನಿರ್ದೇಶನ ಮಾಡಿರೋದು ನಿಮಗೆ ಗೊತ್ತೇ ಇದೆ. ಇಂತಿಪ್ಪ ರವಿ ಬಸ್ರೂರು ಸದ್ದಿಲ್ಲದೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಅದು “ಕಟಕ’.ಹಾಗಂತ ಇದು ಕುಂದಗನ್ನಡ ಸಿನಿಮಾವಲ್ಲ. ಇದೊಂದು ಹಾರರ್ ಜಾನರ್‌ಗೆ ಸೇರುವ ಸಿನಿಮಾ. ಹಾಗಂತ ಇದನ್ನು ಸಂಪೂರ್ಣ ಹಾರರ್ ಸಿನಿಮಾ ಎಂದೂ ಹೇಳುವಂತಿಲ್ಲ.
ವಾಮಾಚಾರ ಸುತ್ತ ನಡೆಯುವ ಸಿನಿಮಾ “ಕಟಕ’. ಇದು ನೈಜ ಘಟನೆಯನ್ನಾಧರಿಸಿದ ಸಿನಿಮಾ. ಐದು ವರ್ಷದ ಬಾಲಕಿಯೊಬ್ಬಳ ಮೇಲೆ ವಾಮಾಚಾರ ಪ್ರಯೋಗವಾದಾಗ ಏನೆಲ್ಲಾ ಆಗುತ್ತದೆ ಎಂಬ ಅಂಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಕರಾವಳಿಯಲ್ಲಿ ಸುಮಾರು 14 ವರ್ಷಗಳ ಹಿಂದೆ ನಡೆದ ಘಟನೆಗೆ ಸಿನಿಮೀಯ ಸ್ಪರ್ಶ ಕೊಟ್ಟು “ಕಟಕ’ ಮಾಡಿದ್ದಾರೆ ರವಿ ಬಸ್ರೂರು. ಚಿತ್ರದಲ್ಲಿ ವಾಮಚಾರ ಹಾಗೂ ಈ ಪ್ರಪಂಚ ಎಷ್ಟೊಂದು ಘೋರವಾಗಿದೆ ಎಂಬ ಅಂಶವನ್ನು ಹೇಳಲು ಪ್ರಯತ್ನಿಸಿದ್ದಾರಂತೆ.
ಚಿತ್ರದ ಟೈಟಲ್ ಕಥೆಗೆ ದೊಡ್ಡ ಪ್ಲಸ್ ಅಂತೆ. ಈ ಚಿತ್ರದ ಮತ್ತೂಂದು ಹೈಲೈಟ್ ಅಂದರೆ ಸೌಂಡ್. ಚಿತ್ರದಲ್ಲಿ ಸೌಂಡಿಂಗ್ ತುಂಬಾ ವಿಭಿನ್ನವಾಗಿರಬೇಕು, ಕಥೆಯನ್ನು ಮತ್ತೂಂದು ಎತ್ತರಕ್ಕೆ ಕೊಂಡೊಯ್ಯಬೇಕೆಂಬ ಉದ್ದೇಶದಿಂದ ಹಾಲಿವುಡ್ ಚಿತ್ರಗಳ ಸೌಂಡಿಂಗ್‌ನಲ್ಲಿ ಕೆಲಸ ಮಾಡುವ ಸುಮಾರು 14 ಕಂಪೆನಿಗಳು ಈ ಚಿತ್ರಕ್ಕೆ ಸೌಂಡ್ ಎಫೆಕ್ಟ್ ನೀಡಿವೆ. ಈ ಹಿಂದೆ “ಗುಡ್ಡದ ಭೂತ’ ಧಾರಾವಾಹಿಯನ್ನು ಚಿತ್ರೀಕರಿಸಿದ ಮನೆಯಲ್ಲೇ “ಕಟಕ’ ಚಿತ್ರೀಕರಣ ಕೂಡಾ ಮಾಡಿರೋದು ವಿಶೇಷ.
ಚಿತ್ರದಲ್ಲಿ ಒಂದು ಸಿನಿಮಾದಲ್ಲಿ ಬಹುತೇಕ ಹೊಸಬರೇ ನಟಿಸಿದ್ದಾರೆ. ಶ್ಲಾಘ ಸಾಲಿಗ್ರಾಮ ಎಂಬ ಬಾಲಕಿ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಚಿತ್ರವನ್ನು ಎನ್.ಎಸ್.ರಾಜ್‌ಕುಮಾರ್ ನಿರ್ಮಿಸಿದ್ದಾರೆ. ಈ ಹಿಂದೆ “ಜಟ್ಟ’, “ಮೈತ್ರಿ’ ಸಿನಿಮಾಗಳನ್ನು ನಿರ್ಮಿಸಿರುವ ಎನ್.ಎಸ್.ರಾಜ್‌ಕುಮಾರ್ ಅವರು ಈಗ “ಕಟಕ’ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಸಚಿನ್ ಬಸ್ರೂರು ಛಾಯಾಗ್ರಹಣವಿದೆ. ಇಡೀ ಸಿನಿಮಾ ಕರಾವಳಿಯಲ್ಲಿ ಚಿತ್ರೀಕರಣವಾಗಿದೆ.