ಕುಂದಾಪುರ: ನವರಾತ್ರಿ ಸಂದರ್ಭ ನಡೆಯುವ ಕದಿರು ಪೂಜೆಯ ವೇಳೆ ಬಸ್ರೂರಿನ ಮನೆತನವೊಂದು ಇಡೀ ಊರಿಗೆ ಕದಿರು ದಾನ ಮಾಡುವ ಸಂಪ್ರದಾಯ ಉಳಿಸಿಕೊಂಡಿದೆ. ಅದಕ್ಕಾಗಿಯೇ ಭತ್ತ ಬಿತ್ತಿ ಪೈರು ಬೆಳೆಯುವ ಗದ್ದೆಗೆ ಕದಿರು ಗದ್ದೆ ಎಂದೇ ಹೆಸರು!
ಬಸ್ರೂರಿನ ಪ್ರಮುಖ ಮನೆತನದಲ್ಲಿ ಒಂದಾದ ಕೊಳ್ಕೇರಿ ಮನೆತನ ಊರಿನ ಯಾವುದೇ ಧಾರ್ಮಿಕ ಶುಭ ಕಾರ್ಯಕ್ರಮಗಳಲ್ಲಿ ಮುಂಚೂಣಿ ಯಲ್ಲಿರುತ್ತದೆ. ಹೊಸ್ತು ಅಥವಾ ಕದಿರು ಹಬ್ಬದಲ್ಲೂ ಕದಿರು ದಾನದ ಮೂಲಕ ಸಂಪ್ರದಾಯ ಪಾಲಿಸುತ್ತಿದೆ. ಕೊಳ್ಕೇರಿಯ ಕದಿರು ಗದ್ದೆಯಲ್ಲಿ ಬೆಳೆದ ಪೈರನ್ನು ಹೊಸ್ತಿನ ಮುಂಚಿನ ಕಟಾವು ಮಾಡಿ ತಂದು ದೇವರ ಪ್ರಸಾದವನ್ನು ಹಾಕಿ ಮರುದಿನ ಬಸ್ ನಿಲ್ದಾಣದ ಸಮೀಪದ ಕದಿರು ಕಟ್ಟೆಯಲ್ಲಿ ಇಟ್ಟು ಸಾರ್ವಜನಿಕರಿಗೆ ಹಂಚುವುದು ರೂಢಿ.
ಕದಿರು ಉತ್ಸವದ ದಿನಾಂಕ ನಿಗದಿಯಾಗುವುದು ಪಂಚ ಗ್ರಾಮಗಳ ಅಧಿದೈವ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ. ಊರಿನ ಹಿರಿಯರು ಹಾಗೂ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆಯವರು ಇದರ ನೇತೃತ್ವ ವಹಿಸುತ್ತಾರೆ. ಹೊಸ್ತಿನ ಮುನ್ನಾ ದಿನ ಕದಿರು ಕಟಾವು ಮಾಡಿ ಮೆರವಣಿಗೆ ಮೂಲಕ ಕದಿರು ಕಟ್ಟೆಗೆ ತರಲಾಗುತ್ತದೆ. ಇದೊಂದು ರೀತಿಯಲ್ಲಿ ಕೊಡಗಿನ ಹುತ್ತರಿ ಹಬ್ಬವನ್ನು ನೆನಪಿಸುತ್ತದೆ.
ಹೊಸ್ತು ಹಬ್ಬದ ದಿನ ಬೆಳಗ್ಗೆ ದೇವಸ್ಥಾನದಲ್ಲಿ ಮಹಾ ಪೂಜೆಯಾದ ನಂತರ ಜಾಗಟೆ ಬಾರಿಸಲಾಗುತ್ತದೆ. ಆಗ ಜನರು ಬಸ್ ನಿಲ್ದಾಣದಲ್ಲಿರುವ ಕದಿರು ಕಟ್ಟೆಯ ಕಡೆ ತೆರಳುತ್ತಾರೆ. ಅಲ್ಲಿ ಊರಿನ ಜನರು ಸಾಮರಸ್ಯರಿಂದ ಕದಿರು ಪಡೆಯುತ್ತಾರೆ. ಆಗ ಮತ್ತೆ ದೇವಸ್ಥಾನದ ಜಾಗಟೆ ಮೊಳಗುತ್ತದೆ. ಆಗ ಎಲ್ಲರೂ ಸಾಲಾಗಿ ದೇವಸ್ಥಾನಕ್ಕೆ ಹೋಗಿ ದೇವರ ದರುಷನ ಪಡೆದು ಮತ್ತೆ ಮನೆ ಕಡೆ ತೆರಳಿ ಹಬ್ಬದ ಆಚರಣೆ ಮಾಡಲಾಗುತ್ತದೆ.
ಮನೆತನಕ್ಕೆ ದೇವರ ನೈವೇದ್ಯ
ಕೊಳ್ಕೇರಿ ಮನೆತನ ಸಾರ್ವಜನಿಕವಾಗಿ ಕದಿರು ದಾನ ನೀಡಿರುವ ಕಾರಣದಿಂದ ಮಹಾದೇವನ ಸನ್ನಿಧಿಯಲ್ಲಿ ನಡೆಯುವ ವಿಶೇಷ ನೈವೇದ್ಯ ಸೇವೆಯ ಪ್ರಸಾದವನ್ನು ಮನೆತನಕ್ಕೆ ನೀಡಲಾಗುತ್ತದೆ. “ಸಾರ್ವ ಜನಿಕ ಬಾಂಧವ್ಯ ಬೆಸೆಯುವಂತೆ ಮೆರವಣಿಗೆ ಮೂಲಕ ಕದಿರು ತರುವುದು ಅಪರೂಪದ ಕಾರ್ಯಕ್ರಮ. ಇದು ಇಂದಿಗೂ ಕೊಳ್ಕೇರಿ ಮನೆತನದ ಹೆಮ್ಮೆಯ ಸಂಗತಿ ಎನಿಸಿದೆ” ಎನ್ನುತ್ತಾರೆ ವಿಕಾಸ್ ಹೆಗ್ಡೆ ಕೊಳ್ಕೇರಿ .