Advertisement

ವ್ಯಾಪಾರಸ್ಥರ ಬದುಕು ಅತಂತ್ರ; ಬಿಸಿಲಿನ ಧಗೆ- ಪ್ರವಾಸಿ ತಾಣ ಬಿಕೋ

02:55 PM Apr 03, 2024 | Team Udayavani |

ಉದಯವಾಣಿ ಸಮಾಚಾರ
ಅಮೀನಗಡ: ಬಿಸಿಲಿನ ಧಗೆಗೆ ದೇವಾಲಯಗಳ ತೊಟ್ಟಿಲು ಎಂದೇ ಖ್ಯಾತಿ ಪಡೆದ ಐತಿಹಾಸಿಕ ಪ್ರವಾಸಿ ತಾಣ ಐಹೊಳೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ಇದರಿಂದ ಪ್ರವಾಸಿಗರಿಲ್ಲದೆ ಪ್ರವಾಸಿ ತಾಣಗಳು ಬಿಕೋ
ಎನ್ನುತ್ತಿವೆ.

Advertisement

ಹೌದು, ಕಳೆದ ಒಂದು ತಿಂಗಳ ಹಿಂದೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಐತಿಹಾಸಿಕ ಐಹೊಳೆ ಪ್ರವಾಸಿ ತಾಣಗಳು, ಈಗ ಮಳೆಯೂಯಿಲ್ಲದೆ, ತಾಪಮಾನ ಶೇ 39 ರಿಂದ 40 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ಉಷ್ಣಾಂಶ ಹೆಚ್ಚಾಗಿದ್ದರಿಂದ, ಪ್ರವಾಸಿಗರು ಪ್ರವಾಸಿ ತಾಣಗಳತ್ತ ಸುಳಿಯುತ್ತಿಲ್ಲ, ಇದರಿಂದ ಐತಿಹಾಸಿಕ ಐಹೊಳೆಯಲ್ಲಿ ಪ್ರವಾಸಿಗರಿಲ್ಲದೆ ಸ್ಮಾರಕಗಳು ಬಿಕೋ ಎನ್ನುತ್ತಿವೆ. ಪ್ರವಾಸಿ ಮಾರ್ಗದರ್ಶಿಗಳು ಎಂದಿನಂತೆ ಪ್ರಮುಖ ಸ್ಮಾರಕಗಳ ಬಳಿ ಪ್ರವಾಸಿಗರ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ.

ದೇವಾಲಯಗಳ ತೊಟ್ಟಿಲು: ಚಾಲುಕ್ಯರ ಕಾಲದ ಪ್ರಮುಖ ನಗರವಾಗಿದ್ದ ಐಹೊಳೆ, ರಾಷ್ಟ್ರೀಯ ಪ್ರವಾಸಿ ತಾಣವಾಗಿದೆ, ಕಲಾ ಇತಿಹಾಸದಲ್ಲಿ ದೇವಾಲಯ, ವಾಸ್ತುಶೈಲಿಗಳ ತೊಟ್ಟಿಲು ಪ್ರಯೋಗಾಲಯ ಎಂದೇ ಖ್ಯಾತಿ ಪಡೆದಿರುವ ಮತ್ತು ಸಂಸತ ಭವನ ನಿರ್ಮಾಣ ಪ್ರೇರಣೆ ಎನ್ನಲಾಗುವ ಐತಿಹಾಸಿಕ ಪ್ರವಾಸಿ ತಾಣದ ಐಹೊಳೆಯಲ್ಲಿ ದುರ್ಗಾ ದೇವಾಲಯ, ಲಾಡಖಾನ, ರಾವಳಪಡಿ ಗುಹಾಂತರ, ಹುಚ್ಚುಮಲ್ಲಿ ದೇವಾಲಯ, ಗಳಗನಾಥ ದೇವಾಲಯ, ಮೇಗುತಿ ದೇವಾಲಯ, ಚಕ್ರ ದೇವಾಲಯ ಸೇರಿ ಸುಮಾರು 125 ಕ್ಕೂ ಹೆಚ್ಚು ದೇವಾಲಯಗಳನ್ನು ಪುರಾತತ್ವ ಇಲಾಖೆ 22 ಗುಂಪುಗಳಾಗಿ ವಿಂಗಡಿಸಿದೆ.

ಇಲ್ಲಿಯ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲು ದೇಶ-ವಿದೇಶಗಳಿಂದ ಪ್ರವಾಸಿಗರು ನಿತ್ಯ ಭೇಟಿ ನೀಡಿ, ಚಾಲುಕ್ಯರ ಕಾಲದ ಐತಿಹಾಸಿಕ ದೇವಾಲಯಗಳನ್ನು ವೀಕ್ಷಣೆ ಮಾಡಿ ಸಂತಸ ಪಡುತ್ತಾರೆ ಆದರೆ ಬಿರು ಬಿಸಿಲಿನಿಂದ ಐತಿಹಾಸಿಕ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ.

ಬಿಸಿಲಿನ ಝಳದಿಂದ ಪ್ರವಾಸಕ್ಕೆ ಬರುತ್ತಿರುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ, ಟಿಕೆಟ್‌ ಕೌಂಟರ್‌ಗಳ ಬಳಿ ಜನರಿಲ್ಲದಾಗಿದೆ. ಐಹೊಳೆಯಲ್ಲಿ ಅಲ್ಲೊಬ್ಬ, ಇಲ್ಲೊಬ್ಬ ಪ್ರವಾಸಿಗರು ಕಾಣಿಸುತ್ತಿರುವುದು ಕಂಡು ಬಂದಿದೆ.

Advertisement

ಜೀವನ ಕಷ್ಟ: ಒಂದು ಕಡೆ ಮಳೆಯಿಲ್ಲದೆ ಬರಗಾಲ, ಮತ್ತೊಂದು ಕಡೆ ಬಿರು ಬಿಸಿಲಿನಿಂದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದರಿಂದ, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರನ್ನು ನಂಬಿ ಬದುಕು ಕಟ್ಟಿಕೊಂಡ ಹಣ್ಣು ವ್ಯಾಪಾರಸ್ಥರು, ಹೊಟೇಲ್‌ ಸೇರಿದಂತೆ ಇತರ ಸಣ್ಣಪುಟ್ಟ, ವ್ಯಾಪಾರಸ್ಥರು, ವ್ಯಾಪಾರವಿಲ್ಲದೆ ಕುಟುಂಬದ ಬದುಕಿನ ಬಂಡಿದೂಗಿಸಲು ಚಿಂತಾಕ್ರಾಂತರಾಗಿದ್ದಾರೆ. ಅಷ್ಟೆ ಅಲ್ಲದೆ ಇದೇ ರೀತಿ ಮುಂದುವರೆದರೆ ಪ್ರವಾಸಿಗರನ್ನು ನಂಬಿರುವ ಹಲವಾರು ಕುಟುಂಬಗಳ ಜೀವನ ಕಷ್ಟವಾಗುತ್ತದೆ ಎನ್ನುತ್ತಾರೆ ಸ್ಥಳಿಯ ವ್ಯಾಪಾರಸ್ಥರು.

ಐತಿಹಾಸಿಕ ರಾಷ್ಟ್ರೀಯ ಪ್ರವಾಸಿ ತಾಣ ಐಹೊಳೆಗೆ ಕಳೆದು ಒಂದು ತಿಂಗಳಿಂದ ಪ್ರವಾಸಿಗರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ನಿತ್ಯ ಶೇ. 5ರಿಂದ 10ರಷ್ಟು ಮಾತ್ರ ಪ್ರವಾಸಿಗರು, ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.
*ಬಿ.ಡಿ.ಮುತ್ತಗಿ, ಸಿಬ್ಬಂದಿ, ಭಾರತೀಯ ಪುರಾತತ್ವ ಇಲಾಖೆ, ಐಹೊಳೆ

*ಎಚ್‌.ಎಚ್‌.ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next