ಕಲಬುರಗಿ: “ರಫೇಲ್ ಡೀಲ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮನ್ನು ರಕ್ಷಿಸಿಕೊಳ್ಳಲು ಇಡೀ ದೇಶದ ಜನರನ್ನೇ ಚೌಕಿದಾರರನ್ನಾಗಿ ಮಾಡಲು ಹೊರಟಿದ್ದಾರೆ” ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ಧಾಳಿ ನಡೆಸಿದ್ದಾರೆ. ಈ ಮೂಲಕ ಬಿಜೆಪಿಯ “ನಾನು ಚೌಕಿದಾರ್’ಅಭಿಯಾನಕ್ಕೆ ಟಾಂಗ್ ನೀಡಿದ್ದಾರೆ.
ಕಲಬುರಗಿಯ ನೂತನ ಮಹಾವಿದ್ಯಾಲಯ ಮೈದಾನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪರಿವರ್ತನಾ ರ್ಯಾಲಿ ಹಾಗೂ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, “ಪ್ರಧಾನಿ ಮೋದಿ ದೊಡ್ಡ ಉದ್ದಿಮೆದಾರರ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಬಡ ಹಾಗೂ ದೇಶದ ಜನರ ಕಾವಲುಗಾರರಾಗಿ ಅಲ್ಲ. ಉದ್ಯಮಿದಾರರಾದ ಅನಿಲ ಅಂಬಾನಿ, ಮೆಹುಲ್ ಚೌಕ್ಸಿ, ನೀರವ್ ಮೋದಿ, ಲಲಿತ ಮೋದಿ, ವಿಜಯ ಮಲ್ಯರಂತವರ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಕಾಶ್ಮೀರದ ಪುಲ್ವಾಮದಲ್ಲಿ ಸೈನಿಕರ ಮೇಲೆ ಭಯೋತ್ಪಾದಕ ದಾಳಿಯ ದಿನ ಚೌಕಿದಾರ್ ದೇಶದ ಆರು ವಿಮಾನ ನಿಲ್ದಾಣಗಳನ್ನು ಅದಾನಿಗೆ ಉಡುಗೊರೆಯಾಗಿ ನೀಡಿದ್ದರು. ರಫೇಲ್ ವಿಮಾನ ಖರೀದಿ ಜಗತ್ತಿನ ಅತ್ಯಂತ ದೊಡ್ಡ ರಕ್ಷಣಾ ಹಗರಣ. ಯುಪಿಎ ಸರ್ಕಾರ ಬೆಂಗಳೂರಿನ ಎಚ್‌ಎಎಲ್‌ಗೆ ಗುತ್ತಿಗೆ ನೀಡಲು ಮುಂದಾಗಿತ್ತು. ಒಂದು ಫೈಟರ್ ಜೆಟ್ ಬೆಲೆಯನ್ನು 526 ಕೋಟಿ ರೂ.ಗೆ ನಿಗದಿ ಮಾಡಿತ್ತು. ಆದರೆ, ಮೋದಿ ಅವರು, ಇದನ್ನು ಅನಿಲ್ ಅಂಬಾನಿಗೆ ಲಾಭ ಮಾಡಿಕೊಡಲು 1600 ಕೋಟಿಗೆ ಖರೀದಿ ಮಾಡಿದ್ದಾರೆ ಎಂದು ಆರೋಪಿಸಿದರು.
ಚೌಕಿದಾರ್ ಉದ್ಯೋಗ ಕಿತ್ತುಕೊಳ್ಳುವುದಲ್ಲದೇ 30 ಸಾವಿರ ಕೋಟಿ ರೂ. ಹಗರಣ ಎಸಗಿದ್ದಾರೆ. ರಫೇಲ್ ಒಪ್ಪಂದ ಕುರಿತು ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಬಂದ ವರದಿ ಪ್ರಧಾನಿಯು ರಕ್ಷಣಾ ಇಲಾಖೆಯನ್ನು ಹೊರಗಿಟ್ಟು ಫ್ರಾನ್ಸ್‌ನೊಂದಿಗೆ ರಫೆಲ್ ಒಪ್ಪಂದ ಕುರಿತು ನೇರವಾಗಿ ಮಾತುಕತೆ ನಡೆಸಿರುವುದು ಸಾಬೀತಾಗಿದೆ. ಮಾತುಕತೆ ತಂಡ ಹೇಳುವಂತೆ ಚೌಕಿದಾರ್ ಸ್ವತಂತ್ರವಾಗಿ ಹಾಗೂ ನೇರವಾಗಿ ಫ್ರಾನ್ಸ್‌ನೊಂದಿಗೆ ಮಾತುಕತೆ ನಡೆಸಲು ಅವಕಾಶ ನೀಡಿಲ್ಲ ಎಂಬುದು ದಾಖಲೆಗಳಿಂದ ತಿಳಿದಿದೆ. ಚೌಕಿದಾರ್ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದು, ಈಗ ಇಡೀ ದೇಶವನ್ನೇ ಚೌಕಿದಾರ್ ಎಂದು ಹೇಳಲು ಹೊರಟಿದ್ದಾರೆ. ಇದು ಸರಿಯಲ್ಲ. ಸಿಕ್ಕಿ ಬೀಳುವ ಮೊದಲು ನರೇಂದ್ರ ಮೋದಿ ಮಾತ್ರ ಚೌಕಿದಾರರಾಗಿದ್ದರು. ಸಿಕ್ಕಿ ಬಿದ್ದ ನಂತರ ಇಡೀ ಭಾರತವನ್ನು ಚೌಕಿದಾರರನ್ನಾಗಿಸಲು ಹೊರಟಿದ್ದಾರೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಿಂದ ಸ್ಪರ್ಧಿಸಿದ್ದು, ಎಲ್ಲ ಕ್ಷೇತ್ರಗಳಲ್ಲಿ ಮೈತ್ರಿಕೂಟ ಜಯ ಸಾಧಿಸಲಿದೆ. ನಿರೀಕ್ಷೆಯಂತೆ ಕಾಂಗ್ರೆಸ್ ಸ್ಥಾನಗಳನ್ನು ಗೆದ್ದು ಜನರ ವಿಶ್ವಾಸ ಗಳಿಸಲಿದೆ.
– ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ