Advertisement
ಮುಕ್ತ ಮಾರುಕಟ್ಟೆ ಅಥವಾ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಗ್ರಾಹಕನೇ ರಾಜ ಎಂಬ ಮಾತಿದೆ. ತನ್ನ ಆಸಕ್ತಿ, ಅಭಿರುಚಿಗೆ ಅನುಗುಣವಾಗಿ ಗ್ರಾಹಕ ತಾನೇನು ಕೊಳ್ಳಬೇಕು, ಎಲ್ಲಿ ಕೊಳ್ಳಬೇಕು, ಯಾವಾಗ ಕೊಳ್ಳಬೇಕು ಮತ್ತು ಯಾರಿಂದ ಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಸ್ವತಂತ್ರನಿರುತ್ತಾನೆ. ಕೊಳ್ಳದೇ ಇರುವ ಸ್ವಾತಂತ್ರ್ಯವೂ ಆತನಿಗಿದೆ. ಆತನ ಅಭಿರುಚಿಗೆ ತಕ್ಕುದಾದ ಸರಕು-ಸೇವೆಗಳನ್ನು ಒದಗಿಸುವ ಕರ್ತವ್ಯ ಉದ್ಯಮಿಯದ್ದು.
Related Articles
Advertisement
ಇದಿಷ್ಟೇ ಆಗಿದ್ದಿದ್ದರೆ ಇದೇನೂ ಹೊಸತಲ್ಲ ಎಂದು ಹೇಳಿಬಿಡಬಹುದಿತ್ತು. ಲಾಗಾಯ್ತಿನಿಂದಲೂ ಇದೇ ನಡೆ ಯುತ್ತಿದ್ದದ್ದು ಎಂದು ಇತಿಹಾಸ ಓದಿದವರು ಹೇಳಿ ಯಾರು. ಅದು ಸತ್ಯವೇ. ಉದಾಹರಣೆಗೆ ನಮ್ಮ ದೇಶಕ್ಕೆ ಹೊಸ ಸಮುದ್ರ ಮಾರ್ಗವನ್ನು ಕಂಡುಹಿಡಿಯಲು ಹೊರಟವರು, ಉತ್ಸಾಹ ತೋರಿದವರು ಉದ್ಯಮಿ(ವ್ಯಾಪಾರಿ)ಗಳೇ. ಸರಕಾರಗಳಲ್ಲ! ಸರಕಾರಗಳ ಪಾತ್ರ ಉದ್ಯಮಿಗಳಿಗೆ ಅನುಮತಿ ನೀಡುವುದಕ್ಕಷ್ಟೇ ಸೀಮಿತವಾಗಿತ್ತು. ವ್ಯಾಪಾರಿಗಳು ಪಾವತಿಸುವ ತೆರಿಗೆಯೇ ಸರಕಾರಗಳಿಗೆ ಆಸಕ್ತಿಯ ವಿಷಯ ವಾಗಿತ್ತು. ಭೌಗೋಳಿಕ ಅನ್ವೇಷಣೆಗೆ ಹೊರಟವರೆಲ್ಲರೂ ಸ್ವದೇಶಕ್ಕೆ ಮರಳಲಿಲ್ಲ! ಅದೆಷ್ಟೋ ಜನ ಸಮುದ್ರದಲ್ಲೇ ಸಮಾಧಿಯಾಗಿದ್ದಿರಬಹುದು, ಸಮುದ್ರಗಳ್ಳರಿಂದ ಕೊಳ್ಳೆಗೀಡಾಗಿರಬಹುದು. ಆದರೆ ಇದೆಲ್ಲ ಮುಖ್ಯ ವಾಗಲಿಲ್ಲ. ಅನ್ವೇಷಣೆ ಹಾಗೂ ವ್ಯಾಪಾರ ಗಳೇ ಮುಖ್ಯ ವಾದವು. ಇತಿಹಾಸದಲ್ಲಿ ಮಹತ್ವ ಪಡೆದ ಘಟನೆಗಳಾದವು.ಹಾಗಾದರೆ ಇನ್ನೇನಾಗಿದೆ? ಎನ್ನುವ ಪ್ರಶ್ನೆ ಸಹಜವೇ. ಈ ಪ್ರಶ್ನೆಗೆ ಉತ್ತರ ಇತ್ತೀಚಿನ ವಿದ್ಯಮಾನಗಳಲ್ಲಿ ಅಡಗಿದೆ. ಬಾಹ್ಯಾಕಾಶ ಯಾನದ ವಿಚಾರವನ್ನು ಗಮನಿಸಿ. ರಾಷ್ಟ್ರಗಳು ಈ ಬಗ್ಗೆ ಆಸಕ್ತರಾಗಿ ಸಾಕಷ್ಟು ಸಾಧನೆ ಮಾಡಿದ್ದು ಸರ್ವ ವೇದ್ಯ. ಆದರೆ ಇತ್ತೀಚೆಗೆ ಸುದ್ದಿ ಮಾಡುತ್ತಿರುವುದು ಉದ್ಯಮಿಗಳ ಬಾಹ್ಯಾಕಾಶ ಯಾನದ ಪ್ರಾಯೋಜಕತ್ವ. ಬಾಹ್ಯಾಕಾಶದಲ್ಲೂ ಪ್ರವಾಸೋದ್ಯಮಕ್ಕೆ ಅವಕಾಶ ಕಂಡುಕೊಂಡಿರುವ ಉದ್ಯಮಿಗಳದ್ದು ವ್ಯರ್ಥಾಲಾಪವೇನೂ ಅಲ್ಲ. ಅದರಲ್ಲಿ ಈಗಾಗಲೇ ಯಶಸ್ಸು ಗಳಿಸಿದ್ದಾರೆ. ಇನ್ನು ಮಂಗಳ ಗ್ರಹದಲ್ಲಿ ವಸಾಹತು ಸ್ಥಾಪಿಸುವ ಉದ್ಯಮಿಗಳ ಪ್ರಯತ್ನವನ್ನು ಹುಚ್ಚು ಸಾಹಸವೆಂದು ನಾವ್ಯಾರೂ ತಳ್ಳಿಹಾಕುತ್ತಿಲ್ಲ! ಒಂದಲ್ಲ ಒಂದು ದಿನ ಇದು ನಿಜವಾಗಬಹುದು ಎಂದು ನಂಬಿದ್ದೇವೆ. ಅಷ್ಟು ವಿಶ್ವಾಸವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು ಹುಟ್ಟಿಸಿವೆ. ಈಗೇನಾಗಿದೆ? ಕೆಲವು ಉದ್ಯಮಿಗಳು ಈ ಕ್ಷೇತ್ರದಲ್ಲಿ ಮುಂದುವರಿದು ಏಕಸ್ವಾಮ್ಯ ಸಾಧಿಸಿಬಿಡುತ್ತಾರೇನೋ ಎಂಬ ಶಂಕೆ ಮೂಡಿದೆ. ಅಮೆರಿಕದ ಉದ್ಯಮಿಯೊಬ್ಬರ ಒಡೆತನದ ಅನೇಕ ಉಪಗ್ರಹಗಳಿವೆ. ಆ ಉಪಗ್ರಹಗಳ ಮೂಲಕ ಅಂತರ್ಜಾಲದ ಮೇಲೆ ಅವರು ಹಿಡಿತ ಹೊಂದಿದ್ದಾರೆ. ಇದೀಗ ಪ್ರತಿಯೊಂದು ಕೆಲಸವೂ ಒಂದಿಲ್ಲೊಂದು ರೀತಿಯಲ್ಲಿ ಅಂತರ್ಜಾಲವನ್ನವಲಂಬಿಸಿದೆ. ಹಾಗಿರುವಾಗ ಪ್ರಪಂಚದ ಆಗು ಹೋಗುಗಳನ್ನು ನಿಯಂತ್ರಿಸುವ ಮಂತ್ರದಂಡವೊಂದು ಆ ಉದ್ಯಮಿಯ ಕೈಯಲ್ಲಿ ಇದೆ ಎಂದಾಯಿತಲ್ಲವೇ? ಆತ ತನ್ನ ಹಿತಾಸಕ್ತಿ ರಕ್ಷಿಸಿಕೊಳ್ಳಲು ಅದನ್ನು ಬಳಸಬಾರದೆಂದು ನಿರ್ಬಂಧಿಸುವವರು ಯಾರು? ಎಲಾನ್ ಮಸ್ಕ್ ಎಂಬ ಮಹಾನ್ ಉದ್ಯಮಿ ಇತ್ತೀಚೆಗೆ ರಷ್ಯಾದ ಯುದ್ಧನೌಕೆಯ ಚಲನವಲನಗಳ ಜಾಡು ಹಿಡಿದು ಅದನ್ನು ಧ್ವಂಸ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಪ್ರಪಂಚದ ಅತ್ಯಂತ ದೊಡ್ಡ, ಮಾತ್ರವಲ್ಲ ಅತ್ಯಂತ ಬಲಿಷ್ಟ ರಾಷ್ಟ್ರದ ಅಧಿಪತಿಗೇ ಪಂಥಾಹ್ವಾನ ನೀಡುವಷ್ಟು, ರಷ್ಯಾಧಿಪತಿಯನ್ನು ಸೋಲಿಸುವುದು ತನಗೆ ಎಡಗೈಯ ಕೆಲಸ ಎಂದು ಹೇಳುವಷ್ಟು ಬಲಾಡ್ಯ ಆತ. ಅಂತರ್ಜಾಲದ ಬಳಕೆಯ ವ್ಯಾಪ್ತಿ ಹೆಚ್ಚಾಗಿರುವ ಈ ಕಾಲದಲ್ಲಿ ಅರ್ಥ ವ್ಯವಸ್ಥೆಯ ಮೇಲೆ ಸಂಬಂಧಪಟ್ಟ ಸೇವೆ ಒದಗಿಸುವವರ ಹಿಡಿತವೂ ಬಿಗಿಯಾಗಿದೆ. ಬ್ಯಾಂಕಿಂಗ್, ಆನ್‌ಲೈನ್ ಮಾರ್ಕೆಟಿಂಗ್, ಸಾಮಾಜಿಕ ಜಾಲತಾಣಗಳು, ರೈಲ್ವೇ, ವಿಮಾನಯಾನ, ಶಿಕ್ಷಣ ಹಾಗೂ ಆರೋಗ್ಯ ಸೇವೆ – ಎಲ್ಲದರಲ್ಲೂ ಅಂತರ್ಜಾಲ ಸೇವೆಯದ್ದೇ ಪ್ರಮುಖ ಪಾತ್ರ. ಹೀಗಿರುವಾಗ ಸಹಜ ವಾಗಿ ಆ ಉದ್ಯಮಿಗಳ ಆದಾಯ ಹಾಗೂ ಸಂಪತ್ತು ವೃದ್ಧಿ ಯಾಗುತ್ತಾ ಹೋಗುವುದರಲ್ಲಿ ಆಶ್ಚರ್ಯವಿಲ್ಲ. ರಕ್ಷಣ ಸಾಮಗ್ರಿಗಳನ್ನು ಉತ್ಪಾದಿಸುವವರೂ ಉದ್ಯಮಿಗಳೇ ಅಲ್ಲವೇ? 2018ರಲ್ಲಿ ರಕ್ಷಣ ಸಾಮಗ್ರಿಗಳನ್ನು ಉತ್ಪಾದಿಸುವ ಕಂಪೆನಿಗಳ ವಹಿವಾಟು 420 ಬಿಲಿಯನ್ ಡಾಲರು ಗಳಾಗಿದ್ದವಂತೆ! ಈ ಕಂಪೆನಿಗಳ ಉತ್ಪನ್ನಗಳಿಗೆ ಬೇಡಿಕೆ ಬರುವುದು ಯುದ್ಧಗಳು ನಡೆದರೆ ಅಥವಾ ಯುದ್ಧದ ಸಾಧ್ಯತೆ ಅಥವಾ ಭೀತಿ ಹೆಚ್ಚಾದಾಗ ಮಾತ್ರ ತಾನೇ? ಹಾಗಿರುವಾಗ ಈ ಕಂಪೆನಿಗಳು ಜಾಗತಿಕವಾಗಿ ಅಥವಾ ಸ್ಥಳೀಯವಾಗಿ ಯುದ್ಧಗಳು ನಡೆಯುವಂತೆ ಕಾರ್ಯತಂತ್ರ ರೂಪಿಸುವಲ್ಲಿ ಆಸಕ್ತಿ ತೋರುವುದಿಲ್ಲವೆಂದು ಹೇಗೆ ಹೇಳ್ಳೋಣ? ಇನ್ನು ನಮ್ಮ ದೇಶದ ಪರಿಸ್ಥಿತಿಯನ್ನು ಅವಲೋಕಿಸಿದರೆ, ಈಗಾಗಲೇ ಆರು ವಿಮಾನ ನಿಲ್ದಾಣಗಳು ಉದ್ಯಮಿ ಯೊಬ್ಬರ ಹಿಡಿತದಲ್ಲಿವೆ(ಇನ್ನೂ ಕೆಲವು ನಿಲ್ದಾಣಗಳನ್ನು ಖಾಸಗೀಕರಣ ಮಾಡುವ ಉದ್ದೇಶ ಸರಕಾರಕ್ಕಿದೆ). ಅಂತೆಯೇ ಗುಜರಾತಿನಲ್ಲಿ ಕೆಲವು ಬಂದರುಗಳೂ ಉದ್ಯಮಿಯೊಬ್ಬರ ಒಡೆತನದಲ್ಲಿವೆ. ಅವುಗಳಲ್ಲೊಂದು ಕಲ್ಲಿದ್ದಲಿನ ಅತ್ಯಧಿಕ ವ್ಯವಹಾರ ನಡೆಸುವಂಥದ್ದು. ಅಲ್ಲಿಗೆ ದೇಶದ ವಿದ್ಯುತ್ ಉತ್ಪಾದನ ಕ್ಷೇತ್ರದಲ್ಲಿಯೂ ಉದ್ಯಮಿಗಳ ಪಾತ್ರವಿದೆ ಎಂದಾಯಿತು. ಸ್ವಾಸ್ಥ್ಯಕ್ಕೆ ಸಂಬಂಧಿಸಿದಂತೆ ಉದ್ಯಮಿಗಳು ಮೇಲ್ಮೈ ಹೊಂದಿದ್ದಾರೆ ಎನ್ನುವುದು ನಿಸ್ಸಂಶಯ. ಮೆಡಿ ಕಲ್ ಮಾಫಿಯಾ ಎಂಬುದೊಂದಿದೆ ಎಂದು ಹಲವರು ನಂಬುವ ಕಾಲ ಬಂದಿದೆ. ಬಿಲ್ ಗೇಟ್ಸ್ ಎಂಬ ಉದ್ಯ ಮಿಯ ಬಗ್ಗೆ ತಿಳಿಯದವರು ಇಲ್ಲ. 2016ರಲ್ಲಿಯೇ ಆತ ಜಾಗತಿಕ ಮಟ್ಟದಲ್ಲಿ ಸಾಂಕ್ರಾಮಿಕ ರೋಗವೊಂದು ಹರಡಲಿರುವುದರ ಬಗ್ಗೆ ಎಚ್ಚರಿಕೆಯ ಅಗತ್ಯದ ಮಾತನಾಡಿ ರುವುದು ಪ್ರಪಂಚದ ಜನರ ಆರೋಗ್ಯದ ವಿಚಾರ ದಲ್ಲಿ ಉದ್ಯಮಿಗಳು ಕೈಯಾಡಿ ಸುತ್ತಾರೆ ಎನ್ನುವುದಕ್ಕೆ ಪುರಾವೆ! ಹೀಗೆ ಅನೇಕ ವಿದ್ಯಮಾನಗಳು ಜಗತ್ತನ್ನು ಉದ್ಯಮಿ ಗಳು ಆಳುತ್ತಿದ್ದಾರೆ ಎನ್ನುವುದನ್ನು ಸಾರಿ ಹೇಳುತ್ತಿವೆ. ಮುಂದೊಂದು ದಿನ ಸಣ್ಣ ಪುಟ್ಟ ದೇಶಗಳನ್ನೇ ಈ ಉದ್ಯಮಿಗಳು ಖರೀದಿಸಿದರೂ ಆಶ್ಚರ್ಯವಿಲ್ಲ! – ಸಂಪಿಗೆ ರಾಜಗೋಪಾಲ ಜೋಶಿ