ಕುಷ್ಟಗಿ: ಪಟ್ಟಣದ ಮುಖ್ಯ ರಸ್ತೆಯ ವಿಭಜಕ ಹಾಗೂ ರಸ್ತೆ ಅಕ್ಕ ಪಕ್ಕದಲ್ಲಿ ಟ್ರೀ ಗಾರ್ಡ್ ರಕ್ಷಣೆಯ ಗಿಡಗಳಿಗೆ ಪಟ್ಟಣದ ಉದ್ಯಮಿಯೊಬ್ಬರು ಸ್ವಯಂ ಪ್ರೇರಿತರಾಗಿ ನೀರುಣಿಸುವ ಕಾಳಜಿ ಅನುಕರಣೀಯವೆನಿಸಿದೆ.
ಕುಷ್ಟಗಿ ಪಟ್ಟಣದ ವನ್ಯಜೀವಿ ಛಾಯಾಗ್ರಾಹಕ ಪಾಂಡುರಂಗ ಆಶ್ರೀತ ಹಾಗೂ ಉದಯವಾಣಿ ಪತ್ರಕರ್ತ ಮಂಜುನಾಥ ಮಹಾಲಿಂಗಪುರ ನೇತೃತ್ವದ ‘ಹಸಿರು ಕುಷ್ಟಗಿ’ ತಂಡದ ಸಹಯೋಗದಲ್ಲಿ ಎನ್ಎಚ್ ಕ್ರಾಸ್ ದಿಂದ ಬಸವೇಶ್ವರ ವೃತ್ತ, ಮಾರುತಿ ವೃತ್ತದಿಂದ ಬಸ್ ನಿಲ್ದಾಣದವರೆಗೂ ಗಿಡಗಳನ್ನು ನೆಡಲಾಗಿದೆ.
ಈ ಗಿಡಗಳಿಗೆ ಹಿಂದಿನ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ʼಹಸಿರು ಕುಷ್ಟಗಿʼ ತಂಡದ ಸ್ಪಂದನೆ ಮೇರೆಗೆ ಸೋಲಾರ್ ಪ್ಲಾಂಟ್ ಕಂಪನಿ ಟ್ರೀ ಗಾರ್ಡ್ ಮಾಡಿಸಿಕೊಟ್ಟಿತ್ತು. ಸಾಮಾಜಿಕ ಅರಣ್ಯ ಇಲಾಖೆ ಸಸಿಗಳನ್ನು ನೀಡಿದೆ. ಶಾಸಕ ದೊಡ್ಡನಗೌಡ ಪಾಟೀಲ ಅವರ ನೆರವಿನೊಂದಿಗೆ ರಸ್ತೆ ವಿಭಜಕದಲ್ಲಿ ಹಾಗೂ ರಸ್ತೆ ಪಕ್ಕದಲ್ಲಿ ಗುಂಡಿ ಅಗೆದು ಟ್ರೀ ಗಾರ್ಡ್ ರಕ್ಷಣೆಯಲ್ಲಿ ಗಿಡ ನೆಡಲಾಗಿದೆ.
ಈ ಸಾಮಾಜಿಕ ಕಾಳಜಿಗೆ ಕುಷ್ಟಗಿ ಪುರಸಭೆ ನೀರುಣಿಸಲು ಆಸಕ್ತಿ ತೋರಿಸಲಿಲ್ಲ. ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಸದ್ಯಕ್ಕೆ ಅವಕಾಶ ಇಲ್ಲ. ಮುಂದಿನ ಆರ್ಥಿಕ ವರ್ಷದಲ್ಲಿ ಕ್ರಿಯಾ ಯೋಜನೆ ಸಲ್ಲಿಸಿ ಅನುಮೋದನೆ ಪಡೆದೇ ಗಿಡಗಳಿಗೆ ನೀರುಣಿಸುವುದಾಗಿ ಹೇಳಿ ಹಿಂದುಳಿಯಿತು. ಈ ಪರಿಸ್ಥಿತಿಯಲ್ಲಿ ಕುಷ್ಟಗಿ ಪಟ್ಟಣದ ಎನ್.ಸಿ.ಎಚ್. ಪ್ಯಾಲೇಸ್ ಮಾಲೀಕ ನಾಗಪ್ಪ ಹೊಸವಕ್ಕಲ್ ಸ್ವಯಂಪ್ರೇರಿತರಾಗಿ ಈ ಗಿಡಗಳಿಗೆ ಆಶ್ರಯದಾತರಾಗಿದ್ದಾರೆ.
ನಾಗಪ್ಪ ಹೊಸವಕ್ಕಲ ಅವರು ಪ್ರತಿ ವಾರದಲ್ಲಿ ಎರಡು ದಿನ ತಮ್ಮ ಸ್ವಂತ ಖರ್ಚಿನಲ್ಲಿ ನೀರಿನ ಟ್ಯಾಂಕರ್ ನಿಂದ ಬೆಳಗ್ಗೆ ಗಿಡಗಳಿಗೆ ನೀರುಣಿಸುವುದು ದಿನಚರಿಯಾಗಿದೆ.
ನೀರುಣಿಸುವ ಸೇವೆಯಿಂದ ಸಂತೃಪ್ತ ಭಾವ ಕಾಣುವ ನಾಗಪ್ಪ ಮಾತನಾಡಿ, ಸಮಾಜದಲ್ಲಿ ನನ್ನ ವಾಣಿಜ್ಯ ವ್ಯವಹಾರ ಚೆನ್ನಾಗಿ ನಡೆಯುತ್ತಿದೆ. ಹೀಗಾಗಿ ಸಮಾಜದ ಋಣ ನನ್ನ ಮೇಲಿದ್ದು ಈ ರೀತಿ ತೀರಿಸುತ್ತಿದ್ದೇನೆ. ಉತ್ತಮ ದೇಹಾರೋಗ್ಯಕ್ಕೆ ದಿನ ಬೆಳಗಾದರೆ ವಾಕಿಂಗ್ ಮಾಡಬೇಕು. ವಾಕಿಂಗ್ ಮಾಡುವ ಬದಲು ಗಿಡಗಳಿಗೆ ನೀರುಣಿಸುತ್ತಿರುವೆ. ಪಟ್ಟಣದ ಉದ್ಯಾನವನ, ಲೇಔಟ್ ನಲ್ಲಿ ನೆಟ್ಟಿರುವ ಗಿಡಗಳಲ್ಲದೇ ಪಟ್ಟಣದ ಮುಖ್ಯ ರಸ್ತೆಯ ವಿಭಜಕ ಮತ್ತು ರಸ್ತೆ ಪಕ್ಕದ ಗಿಡಗಳಿಗೆ ನೀರುಣಿಸುತ್ತಿದ್ದು ಇದರಲ್ಲಿ ಖುಷಿ ಇದೆ ಎನ್ನುತ್ತಾರೆ.