Advertisement

ರಭಸದ ಅಲೆಗಳಿಗೆ ಢಿಕ್ಕಿ ಹೊಡೆಯುವ ಉದ್ಯಮಿ ಎಲಾನ್‌ ಮಸ್ಕ್ ಸಾಧನೆಯ ಮಾತು

09:27 PM Aug 28, 2020 | Karthik A |

ಆತನೊಬ್ಬ ಎಂಜಿನಿಯರ್‌, ಅನ್ವೇಷಕ, ಇನೋವೇಟಿವ್‌ ಬಿಸಿನೆಸ್‌ಮ್ಯಾನ್‌. ಅದಕ್ಕೂ ಮೀರಿ ಒಬ್ಬ ಅಸಾಮಾನ್ಯ ಪ್ರತಿಭೆ.

Advertisement

ಅವರೇ ಎಲಾನ್‌ ಮಸ್ಕ್. ಟೆಸ್ಲಾ, ಸ್ಪೇಸ್‌ ಎಕ್ಸ್‌, ಸೋಲಾರ್‌ ಸಿಟಿ, ದಿ ಬೋರಿಂಗ್‌ ಕಂಪೆನಿ, ಹೈಪರ್‌ ಲೂಪ್‌, ನ್ಯೂರಾ ಲಿಂಕ್‌ ಮತ್ತು ಓಪನ್‌ ಎ.ಐ. ಮೊದಲಾದ ಕಂಪೆನಿಗಳ ಮಾಲಕರಾಗಿರುವ ಅವರು ಹಿಂದೆ ಹೊಟ್ಟೆಪಾಡಿಗಾಗಿ ಬೈಲಾರ್‌ ಕ್ಲೀನಿಂಗ್‌ ಕೆಲಸವನ್ನು ಮಾಡುತ್ತಿದ್ದರು.

ಸಾಧ‌ನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಇವರೇ ಉದಾಹರಣೆ.

ಇವತ್ತು ಪ್ರಪಂಚದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾಗಿ ಬೆಳೆದು ನಿಂತಿದ್ದಾರೆ.

ಎಲಾನ್‌ ಮಸ್ಕ್ ಜೂನ್‌ 28, 1971ರ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಜನಿಸಿದರು. 12ನೇ ವಯಸ್ಸಿನಲ್ಲೇ ಬ್ಲಿಸ್ಟರ್‌ ಅನ್ನುವ ಗೇಮ್‌ ತಯಾರಿಸಿ ಅದನ್ನು 500 ಡಾಲರ್‌ಗೆ ಮಾರಾಟ ಮಾಡಿದ ಕೀರ್ತಿ ಎಲಾನ್‌ ಅವರದ್ದು.1992ರಲ್ಲಿ, ಪೆನ್ಸಿಲ್ವೇನಿಯಾ ವಿ.ವಿ.ಯಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಎಲಾನ್‌ ಅನಂತರ ಭೌತಶಾಸ್ತ್ರದಲ್ಲಿ ಎರಡನೇ ಸ್ನಾತಕೋತ್ತರ ಪದವಿ ಪಡೆದರು.

Advertisement

ಸ್ಟಾನ್‌ಫೋರ್ಡ್‌ ವಿ.ವಿ. ಯಲ್ಲಿ ಪಿಎಚ್‌.ಡಿ. ಮಾಡಲು ಅವಕಾಶ ಲಭಿಸಿದ್ದರೂ ಕಾರಣಾಂತರಗಳಿಂದ ಅದರಿಂದ ಹಿಂದೆ ಸರಿದರು. ಕಂಪ್ಯೂಟರ್‌ನಲ್ಲಿ ಆಸಕ್ತಿ ಇದ್ದ ಎಲಾನ್‌ ಅಲ್ಲಿಂದ ಸ್ವಂತ ಉದ್ಯಮದತ್ತ ಗಮನಹರಿಸಿದರು.

1995ರಲ್ಲಿ ತಮ್ಮ ಮೊದಲ ಕಂಪೆನಿ ಝಿಪ್‌2 ಕಾರ್ಪೊರೇಷನ್‌ ಪ್ರಾರಂಭಿಸಿದರು. 1999ರಲ್ಲಿ ಹಣದ ವಹಿವಾಟಿಗಾಗಿ ಅರಂಭಿಸಿದ ಎಕ್ಸ್‌.ಕಾಂ ಮುಂದೆ ‘ಪೇಪಾಲ್‌’ಗೆ ನಾಂದಿ ಹಾಡಿತು.

ಮೈಲುಗಲ್ಲಾದ ಸ್ಪೇಸ್‌ ಎಕ್ಸ್‌
ಬಾಹ್ಯಾಕಾಶ ಪ್ರಯಾಣಕ್ಕಾಗಿ ಬಾಹ್ಯಾಕಾಶ ನೌಕೆಗಳನ್ನು ನಿರ್ಮಿಸುವ ಉದ್ದೇಶದಿಂದ ಮಸ್ಕ್ ತನ್ನ ಮೂರನೇ ಕಂಪೆನಿಯಾದ ಸ್ಪೇಸ್‌
ಎಕ್ಸ್‌ಪ್ಲೋರೇಶನ್‌ ಟೆಕ್ನಾಲಜೀಸ್‌ ಕಾರ್ಪೊರೇಷನ್‌ (ಸ್ಪೇಸ್‌ ಎಕ್ಸ್‌) ಅನ್ನು 2002ರಲ್ಲಿ ಸ್ಥಾಪಿಸಿದರು.

ರಾಕೆಟ್‌ ತಯಾರಿ ಹಾಗೂ ಉಡಾವಣೆ ಅಂದರೆ ಅಷ್ಟು ಸುಲಭದ ಕೆಲಸವೇನಲ್ಲ. ಇದಕ್ಕೆ ಬಹಳಷ್ಟು ಶ್ರಮ, ಹಣ ಖರ್ಚಾಗುತ್ತದೆ. ಸ್ವಂತವಾಗಿ ಕಡಿಮೆ ಖರ್ಚಿನಲ್ಲಿ ಅಂತರಿಕ್ಷಕ್ಕೆ ರಾಕೆಟ್‌ ಉಡಾವಣೆ ಮಾಡಲು ಸ್ಥಾಪಿತವಾದ ಪ್ರಪಂಚದ ಮೊಟ್ಟ ಮೊದಲ ಖಾಸಗಿ ಕಂಪೆನಿ ಸ್ಪೇಸ್‌ಎಕ್ಸ್‌. ಬರೋಬ್ಬರಿ ಮೂರು ಸಾರಿ ಉಡಾವಣೆಯಾದರೂ ರಾಕೆಟ್‌ ಅಂತರಿಕ್ಷಕ್ಕೆ ತಲುಪಲಿಲ್ಲ. ಜತೆಗೆ ಸ್ಪೇಸ್‌ ಎಕ್ಸ್‌ ದಿವಾಳಿ ಹಂತಕ್ಕೆ ತಲುಪಿತು. ಮೇ 22, 2012ರಂದು ಕಂಪೆನಿಯು ತನ್ನ ಫಾಲ್ಕನ್‌ 9 ರಾಕೆಟ್‌ ಅನ್ನು ಮಾನವ ರಹಿತ ಕ್ಯಾಪುÕಲ್ನೊಂದಿಗೆ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದಾಗ ಸ್ಪೇಸ್‌ಎಕ್ಸ್‌ ಇತಿಹಾಸ ನಿರ್ಮಿಸಿತು.

ಸೋತು ಗೆದ್ದ ಟೆಸ್ಲಾ
ಎಲ್ಲರಿಗಿಂತಲೂ ವಿಭಿನ್ನವಾಗಿ ಯೋಚಿಸುವ ಎಲಾನ್‌ ಮಸ್ಕ್, ಕಾರು ತಯಾರಿಕ ಕಂಪೆನಿ ಟೆಸ್ಲಾ ಮೋಟಾರ್ ಸ್ಥಾಪಿಸಿ ಅದರಲ್ಲೂ (ಪೆಟ್ರೋಲ್‌ ರಹಿತ) ಎಲೆಕ್ಟ್ರಿಕಲ್‌ ಕಾರು ತಯಾರಿಸಲು ಮುಂದಾದರು. ಮೊದಲು ತಯಾರಿಸಿದ ಕಾರು ಟೆಸ್ಲಾ ರೋಡ್‌ಸ್ಟರ್‌. ಇದು ವಿಫ‌ಲವಾಗಿ ಎಲ್ಲರಿಂದಲೂ ನಂಬಿಕೆ ಕಳೆದುಕೊಂಡಿತು. ಆದರೆ ಅನಂತರದ ಪರಿಶ್ರಮದ ಫ‌ಲವಾಗಿ ಇಂದಿಗೂ ಅತ್ಯುನತ ಎಲೆಕ್ಟ್ರಿಕಲ್‌ ಕಾರು ಮತ್ತು ಸುರಕ್ಷತೆಯ ವಿಷಯದಲ್ಲಿ ಟೆಸ್ಲಾ ರೋಡ್‌ಸ್ಟರ್‌ ನಂ. 1 ಸ್ಥಾನದಲ್ಲಿದೆ.

ಸೋಲಾರ್‌ ಸಿಟಿ ಕಂಪೆನಿ ಮಸ್ಕ್ ಅವರ ಮತ್ತೂಂದು ಆವಿಷ್ಕಾರಕ್ಕೆ ನಾಂದಿಯಾಯಿತು. ಇದು ಅಮೆರಿಕದ ಅತೀ ಡೊಡ್ಡ ಸೋಲಾರ್‌ ಸರ್ವಿಸ್‌ ಕಂಪೆನಿ. ವಿಭಿನ್ನವಾಗಿ ಯೋಚಿಸುವ ಎಲಾನ್‌ ಮಸ್ಕ್ ದೂರದೃಷ್ಟಿಯಿಂದ ಭವಿಷ್ಯತ್ತಿನಲ್ಲಿ ಎದುರಾಗುವ ಆರ್ಟಿಫಿಶ್ಶಿಯಲ್‌ ಇಂಟೆಲಿಜೆನ್ಸಿ (ಕೃತಕ ಬುದ್ಧಿಮತ್ತೆ) ಪರಿಣಾಮವನ್ನು ಎದುರಿಸಲು ನ್ಯೂರಾಲಿಂಕ್‌ ಕಂಪೆನಿ ಮತ್ತು ಭವಿಷ್ಯತ್ತಿನಲ್ಲಿ ವಿಮಾನಕ್ಕಿಂತ ವೇಗವಾಗಿ ಚಲಿಸುವ ದೊಡ್ಡ ಟ್ಯೂಬ್‌ಗಳನ್ನು ತಯಾರಿಸುವ ಹೈಪರ್‌ಲೂಪ್‌ ಕಂಪೆನಿ, ದಿ ಬೋರಿಂಗ್‌ ಸಹಿತ ಹಲವಾರು ಕಂಪೆನಿಗಳನ್ನು ಸ್ಥಾಪಿಸಿದ್ದಾರೆ.

“ಪ್ರತಿದಿನ ಇತರರಿಗಿಂತ ಒಂದು ಗಂಟೆ ಹೆಚ್ಚು ಕೆಲಸ ಮಾಡಿ ಇದು ವರ್ಷಗಳ ಅನಂತರ ನಿಮ್ಮ ಭವಿಷ್ಯ ಬದಲಾಯಿಸಿರುತ್ತದೆ’ ಎನ್ನುವ ಎಲಾನ್‌ಮಸ್ಕ್ ಕಠಿನ ಪರಿಶ್ರಮವೇ ಯಶಸ್ಸಿನ ಹಾದಿ ಎಂಬುದನ್ನು ನಿರೂಪಿಸಿದ್ದಾರೆ.


 ಬಾಬು ಪ್ರಸಾದ್‌ ಎ. ವಿಜಯನಗರ ವಿವಿ, ಬಳ್ಳಾರಿ 

Advertisement

Udayavani is now on Telegram. Click here to join our channel and stay updated with the latest news.

Next