ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನ ಪ್ರಾಬಲ್ಯ ತಡೆಗೆ ಕೇಂದ್ರ ಸರಕಾರ ಹೊಸ ಯೋಜನೆ ರೂಪಿಸಿದೆ. ತೈವಾನ್ ಜತೆಗೆ ಸಮಗ್ರ ವ್ಯಾಪಾರ-ವಾಣಿಜ್ಯ ಬಾಂಧವ್ಯ ವೃದ್ಧಿ ಮಾಡುವ ಬಗ್ಗೆ ಚಿಂತನೆ ಶುರುವಾಗಿದೆ. ಕೆಲ ವರ್ಷ ಗಳಿಂದ ಈ ಬಗ್ಗೆ ತೈವಾನ್ ಸರಕಾರದಿಂದ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದರೂ, ಪ್ರಧಾನಿ ಮೋದಿ ನೇತೃತ್ವದ ಸರಕಾರ ಅದಕ್ಕೆ ಸ್ಪಂದಿಸಿರಲಿಲ್ಲ. ಲಡಾಖ್ ಬಿಕ್ಕಟ್ಟಿನ ಬಳಿಕ ತೈವಾನ್‌ನ ಪ್ರಾಮುಖ್ಯತೆಯನ್ನು ಅರಿತುಕೊಂಡಿರುವ ಸರಕಾರ, ಆ ದೇಶದೊಂದಿಗೆ ವ್ಯಾಪಾರ ವಹಿವಾಟಿನ ಬಾಂಧವ್ಯ ಹೊಂದಲು ಯೋಜಿಸಿದೆ. ಅಲ್ಲದೆ, ಅತ್ತ ಚೀನ ಸರಕಾರ ಕೂಡ ತೈವಾನ್ ತನ್ನ ಭಾಗ ಎಂದು ವಾದ ಮಂಡಿಸುತ್ತಿದ್ದು, ಆ ಎರಡೂ ರಾಷ್ಟ್ರಗಳ ನಡುವೆ ವೈಮನಸ್ಸು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರಕಾರದ ತಂತ್ರ ಮಹತ್ವ ಪಡೆದಿದೆ.
ತೈವಾನ್ ಜತೆ ಒಪ್ಪಂದ ಮಾಡಿಕೊಂಡರೆ ವಿಶ್ವ ವಾಣಿಜ್ಯ ಸಂಘಟನೆಯಲ್ಲಿ ಚೀನ ಜತೆಗೆ ವಾಣಿಜ್ಯ ಸಮರವೂ ಉಂಟಾಗುವ ಆತಂಕವಿರುವ ಕಾರಣ ಇಷ್ಟು ದಿನ ಭಾರತ ಸರಕಾರ ಅಂಥ ಚಿಂತನೆಗೆ ಮುಂದಾಗಿರಲಿಲ್ಲ. ಆದರೆ ಆ ದೇಶದೊಂದಿಗೆ ವಾಣಿಜ್ಯಿಕ ಬಾಂಧವ್ಯ ದೃಢಗೊಳಿಸುವ ಮೂಲಕ ಚೀನಕ್ಕೆ ಟಾಂಗ್ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ವಿಶೇಷವಾಗಿ ತಾಂತ್ರಿಕ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಳ ಸೇರಿದಂತೆ ಎರಡೂ ರಾಷ್ಟ್ರಗಳಿಗೆ ಹಲವು ರೀತಿಯಲ್ಲಿ ಅನುಕೂಲಕರವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಅನುಮೋದನೆ: ಈ ವಾದಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದಷ್ಟೇ ಮೋದಿ ಸರಕಾರ ಮುಂದಿನ ಐದು ವರ್ಷಗಳಲ್ಲಿ ಸ್ಮಾರ್ಟ್‌ಫೋನ್ ತಯಾರಿಕೆಯ ಕ್ಷೇತ್ರದಲ್ಲಿ 10.5 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ತೈವಾನ್‌ನ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್, ವಿಸ್ಟರ್ನ್ ಕಾರ್ಪ್, ಪೆಗಟ್ರಾನ್ ಕಾರ್ಪ್ ಎಂಬ ಸಂಸ್ಥೆಗಳಿಗೆ ಅನುಮೋದನೆ ನೀಡಿತ್ತು. 2 ದೇಶಗಳ ನಡುವೆ 2018ರಲ್ಲಿ ದ್ವಿಪಕ್ಷೀಯ ಒಪ್ಪಂದ ಏರ್ಪಟ್ಟಿತ್ತು.
ತೈವಾನ್ ಅಧ್ಯಕ್ಷೆ ಸಾಯ್ ಇಂಗ್ವೆನ್ ತಮ್ಮ ದೇಶದ ರಾಷ್ಟ್ರೀಯ ದಿನದ ಬಗ್ಗೆ ಭಾರತದ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಕ್ಕೆ ಚೀನ ಆಕ್ಷೇಪಿಸಿದ್ದಾಗ “ಗೆಟ್‌ಲಾಸ್ಟ್’ ಎಂದಿದ್ದರು. ಜತೆಗೆ ಕೆಲ ದಿನಗಳ ಹಿಂದೆ ಚನ್ನಾ ಮತ್ತು ನಾನ್ ತಮಗಿಷ್ಟವೆಂದು ಟ್ವೀಟ್ ಮಾಡಿದ್ದರು.
ಮಾಲಕತ್ವ ವಿವರ ಕಡ್ಡಾಯ: ದೇಶದ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಚೀನ ಮತ್ತು ಪಾಕಿಸ್ಥಾನ ಕಂಪೆನಿಗಳ ಹೂಡಿಕೆ ತಗ್ಗಿಸುವ ನಿಟ್ಟಿನಲ್ಲಿ ಅವುಗಳ ಮಾಲೀಕತ್ವ ವಿವರಣೆ ನೀಡುವುದನ್ನು ಕೇಂದ್ರ ಕಡ್ಡಾಯಗೊಳಿಸಿದೆ. ಈ ಬಗ್ಗೆ ಕಳೆದ ವಾರ ಮಾರ್ಗ ಸೂಚಿ ಪ್ರಕಟಿಸಲಾಗಿದೆ. ಮೊಬೈಲ್ ಫೋನ್, ಲ್ಯಾಪ್‌ಟಾಪ್, ರಸ್ತೆ ಮತ್ತು ಟನೆಲ್ ನಿರ್ಮಾಣ ಕ್ಷೇತ್ರ, ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳಲ್ಲಿನ ಟೆಂಡರ್‌ಗಳಲ್ಲಿ ಭಾಗಿಯಾಗುವ ಕಂಪನಿಗಳಿಗೆ ಈ ನಿಯಮ ಕಡ್ಡಾಯಗೊಳಿಸಲಾಗಿದೆ.
ಬಂಧಿತ ಚೀನ ಸೈನಿಕನ ಬಿಡುಗಡೆ ಸದ್ಯಕ್ಕಿಲ್ಲ?
ಸೋಮವಾರವಷ್ಟೇ ಎಲ್‌ಎಸಿ ದಾಟಿಬಂದು ಭಾರತೀಯ ಸೇನೆಯ ಕೈಗೆ ಸಿಕ್ಕಿಬಿದ್ದ ಚೀನ ಸೈನಿಕ ಇನ್ನೂ ಕೆಲವು ದಿನ ಭಾರತದ ವಶದಲ್ಲಿಯೇ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಔಪಚಾರಿಕ ಪ್ರಕ್ರಿಯೆ ಮುಗಿದ ಬಳಿಕ ಸೈನಿಕ ವಾಂಗ್ ಯಾ ಲಾಂಗ್‌ರನ್ನು ಚೀನಗೆ ಹಸ್ತಾಂತರಿಸಲಾಗುವುದು ಎಂದು ಸೇನೆ ತಿಳಿಸಿತ್ತು. ಆದರೆ ಇನ್ನೂ ಕೆಲವು ದಿನಗಳ ಕಾಲ ವಾಂಗ್ ಭಾರತದ ವಶದಲ್ಲೇ ಇರಲಿದ್ದು, ತದನಂತರ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ ಎಂದು ಮಂಗಳವಾರ ಮೂಲಗಳು ಹೇಳಿವೆ. ಇದೇ ವೇಳೆ, “ನಾಪತ್ತೆಯಾಗಿರುವ ನಮ್ಮ ಸೈನಿಕನನ್ನು ಭಾರತವು ಮಾತು ಕೊಟ್ಟಂತೆ ಆದಷ್ಟು ಬೇಗ ನಮಗೆ ಹಸ್ತಾಂತರಿಸುತ್ತದೆ ಎಂಬ ನಂಬಿಕೆಯಿದೆ’ ಎಂದು ಚೀನ ಸೇನೆ ಹೇಳಿದೆ.
ಚೀನಗೆ ಮಲಬಾರ್ ಬಿಸಿ
ನವೆಂಬರ್‌ನಲ್ಲಿ ನಡೆಯಲಿರುವ ಮಲಬಾರ್ ನೌಕಾ ಕವಾಯತಿನಲ್ಲಿ ಆಸ್ಟ್ರೇಲಿಯಾ ಕೂಡ ಭಾಗಿಯಾಗಲು ಒಪ್ಪಿರುವುದು ಚೀನ ವನ್ನು ತಬ್ಬಿಬ್ಬುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಪ್ರತಿಕ್ರಿಯಿಸಿರುವ ಚೀನ, “ಎಲ್ಲ ಬೆಳವಣಿಗೆಗಳನ್ನೂ ನಾವು ಗಮನಿಸುತ್ತಿದ್ದೇವೆ. ಸೇನಾ ಸಹಕಾರ ಎಂಬುದು ಯಾವತ್ತೂ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ದಾರಿ ಮಾಡಿಕೊಡುವಂತಿರಬೇಕು’ ಎಂದು ಹೇಳಿದೆ.
ಚೀನ ಸರಕಾರದ ವಿರುದ್ಧ ಹೊಸದಿಲ್ಲಿಯಲ್ಲಿ ಭಾರತ-ಟಿಬೆಟ್ ಸಹಯೋಗ್ ಮಂಚ್ ಪ್ರತಿಭಟನೆ.