Advertisement

ಜಿಲ್ಲೆಯಲ್ಲಿ ವ್ಯಾಪಾರ-ವಹಿವಾಟು ಚುರುಕು

03:45 PM May 05, 2020 | Suhan S |

ಗದಗ: ಲಾಕ್‌ಡೌನ್‌ ಸಡಿಲಿಕೆಯಿಂದ ಕಿತ್ತಳೆ(ಆರೆಂಜ್‌) ವಲಯದಲ್ಲಿರುವ ಜಿಲ್ಲಾದ್ಯಂತ ಸೋಮವಾರ ವ್ಯಾಪಾರ- ವಹಿವಾಟು ಚಾಲನೆ ಪಡೆದಿದ್ದು, ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.

Advertisement

ಹೌದು, ಕೋವಿಡ್ 19 ಭೀತಿಯಿಂದಾಗಿ 40 ದಿನಗಳಿಂದ ಲಾಕ್‌ಡೌನ್‌ ಜಾರಿಯಲ್ಲಿದ್ದರಿಂದ ಅವಳಿ ನಗರ ಸೇರಿದಂತೆ ಇಡೀ ಜಿಲ್ಲೆ ಸ್ತಬ್ಧಗೊಂಡಿತ್ತು. ಆದರೆ ರಾಜ್ಯ ಸರಕಾರ ಸೋಮವಾರ ಲಾಕ್‌ಡೌನ್‌ಗೆ ಸಡಿಲಿಕೆ ನೀಡಿ, ವ್ಯಾಪಾರ-ವಹಿವಾಟಿಗೆ ಅನುಮತಿ ನೀಡಿರುವುದು ವರ್ತಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ವರ್ತಕರಿಗೆ ಗೊಂದಲ: ಲಾಕ್‌ಡೌನ್‌ ಸಡಿಲಿಕೆಯಾಗಿದ್ದರಿಂದ ಬೆಳಗ್ಗೆ 9 ಗಂಟೆ ವೇಳೆಗೆ ಕೆಲವರು ತಮ್ಮ ಅಂಗಡಿ, ಮುಂಗಟ್ಟುಗಳನ್ನು ತೆರೆದಿದ್ದರು. ಇನ್ನೂ ಕೆಲವರು ಬಾಗಿಲು ತೆರೆಯುವಷ್ಟರಲ್ಲಿ ಆಗಮಿಸಿದ ಪೊಲೀಸರು, ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದವರಷ್ಟೇ ಅಂಗಡಿಗಳನ್ನು ತೆರೆಯಬಹುದು. ಇನ್ನುಳಿದವರು ತೆರೆಯುವಂತಿಲ್ಲ ಎಂದು ಎಚ್ಚರಿಸಿದರು.

ಪೊಲೀಸರ ಮಾತಿನಿಂದ ಬೆದರಿದ ವರ್ತಕರು 10 ಗಂಟೆವರೆಗೂ ತಮ್ಮ ಮಳಿಗೆಗಳ ಮುಂದೆ ಗುಂಪುಗೂಡಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಸ್‌ಪಿ ಯತೀಶ್‌ ಅವರು, ಸರಕಾರದ ಆದೇಶದಂತೆ ಅಂಗಡಿ ತೆರೆಯಲು ಅವಕಾಶವಿದೆ. ಆದರೆ ಅಂಗಡಿಕಾರರು ಹ್ಯಾಂಡ್‌ ಗ್ಲೌಸ್‌ ಧರಿಸಬೇಕು, ಸ್ಯಾನಿಟೈಸರ್‌ ಬಳಸಬೇಕು. ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ಅಧಿಕಾರಿಗಳ ಗೊಂದಲದ ಹೇಳಿಕೆಯಿಂದ ಕೆಲಕಾಲ ಅಂಗಡಿ ಬಾಗಿಲು ತೆರೆಯಲಿಲ್ಲ. ಬಳಿಕ ವ್ಯಾಪಾರ ನಡೆಸಲು ಜಿಲ್ಲಾಧಿಕಾರಿಗಳ ಅನುಮತಿಯಿದೆ ಎಂದು ತಿಳಿಯುತ್ತಿದ್ದಂತೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ವರ್ತಕರು ಅಂಗಡಿ, ಮುಂಗಟ್ಟುಗಳನ್ನು ತೆರೆದರು. ತಿಂಗಳಿಂದ ಧೂಳು ಹಿಡಿದಿದ್ದ ಅಂಗಡಿಗಳನ್ನು ಸ್ವತ್ಛಗೊಳಿಸಿ, ವ್ಯಾಪಾರ ಆರಂಭಿಸಿದರು.

Advertisement

ಭಾಗಶಃ ಬಂದ್‌: ಇಲ್ಲಿನ ಸ್ಟೇಷನ್‌ ರಸ್ತೆಯ ಮಹೇಂದ್ರಕರ್‌ ವೃತ್ತದಿಂದ ಹುಯಿಲಗೋಳ ನಾರಾಯಣರಾವ್‌ ವೃತ್ತದವರೆಗಿನ ಅಂಗಡಿಗಳಿಗೆ ಮಾತ್ರ ಅವಕಾಶ ಇದೆ. ನಾಮಜೋಶಿ ರಸ್ತೆಯ ಅಂಗಡಿಗಳಿಗೆ ಅನುಮತಿ ಇಲ್ಲ ಎನ್ನಲಾಗಿದೆ. ಹೀಗಾಗಿ ನಾಮಜೋಶಿ ರಸ್ತೆಯಲ್ಲಿರುವ ಎಲೆಕ್ಟ್ರಿಕಲ್‌ ಹೊರತಾಗಿ ಎಲ್ಲ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಇನ್ನುಳಿದಂತೆ ಬೆರಳೆಣಿಕೆಯಷ್ಟು ಆಟೋಗಳು ರಸ್ತೆಗಿಳಿದಿದ್ದು, ದ್ವಿಚಕ್ರ ವಾಹನಗಳ ಸಂಚಾರ ಸಾಮಾನ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next