Advertisement
ಪರಿಸರ ಸಂರಕ್ಷಣೆ, ಪಾರದರ್ಶಕತೆ ಹಾಗೂ ಆಧುನಿಕ ತಂತ್ರಜ್ಞಾನದ ಅಳವಡಿಕೆಯ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳನ್ನು ಕಾಗದ ರಹಿತ ಇಲಾಖೆಯಾಗಿಸಲು ಈಗಾಗಲೇ ರಾಜ್ಯ ಸರ್ಕಾರ ನಿರ್ದೇಶಿಸಿದೆ. ಕೆಲ ಇಲಾಖೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹಾಗೂ ಇನ್ನೂ ಕೆಲವು ಇಲಾಖೆಗಳಲ್ಲಿ ಭಾಗಶಃ ಅನುಷ್ಠಾನವಾಗಿದೆ. ಕೆಲವು ಇಲಾಖೆಗಳಲ್ಲಿ ಈಗಷ್ಟೇ ಅನುಷ್ಠಾನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
Related Articles
Advertisement
ಅಲ್ಲದೆ, ಸಹಿ ಮಾಡಲು ಸಮಸ್ಯೆಯಾಗುತ್ತಿದೆ ಎನ್ನುತ್ತಿದ್ದಾರೆ. ಆನ್‌ಲೈನ್‌ನಲ್ಲೇ ಇರುವುದನ್ನು ಪ್ರಿಂಟ್ ತೆಗೆದುಕೊಡುವಂತೆ ಸೂಚಿಸುತ್ತಿದ್ದಾರೆ. ಹೀಗಾಗಿ, ಕಾಗದ ರಹಿತ ಇಲಾಖೆ ಮಾಡಿ ಪ್ರಯೋಜನವೇನೆಂದು ಬಹುಮಹಡಿ ಕಟ್ಟಡದಲ್ಲಿರುವ ಸರ್ಕಾರಿ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.
ಇ-ಕಚೇರಿಯು ಆನ್‌ಲೈನ್ ಮೂಲಕವೇ ಸೇವೆ ಸಲ್ಲಿಸಲಿದೆ ಹಾಗೂ ಯಾವುದೇ ಮಾಹಿತಿ ಇಲ್ಲಿ ಕಳೆದು ಹೋಗುವುದಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ಆನ್‌ಲೈನ್ ಮೂಲಕವೇ ಸಹಿ ಮಾಡಬಹುದಾದ ಸಾಫ್ಟ್ವೇರ್‌ನ್ನು ಕೂಡ ಸಿದ್ಧಪಡಿಸಲಾಗಿದೆ. ಅಲ್ಲದೆ, ಕಡತಗಳನ್ನು ತಕ್ಷಣವೇ ಹುಡುಕಲು ಇದು ಸಹಕಾರಿಯಾಗಿದೆ.
ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ)ದಿಂದಲೇ ಇದಕ್ಕೆ ಸಾಫ್ಟವೇರ್ ಸಿದ್ಧಪಡಿಸಲಾಗಿದೆ. ಮೈಸೂರು ಸೇರಿ ಕೆಲವೊಂದು ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಚೆನ್ನಾಗಿ ನಡೆಯುತ್ತಿದೆ. ಆದರೆ, ಸರ್ಕಾರದ ವಿವಿಧ ಇಲಾಖೆ ಇರುವ ಕೇಂದ್ರ ಕಚೇರಿಗಳಲ್ಲೇ ಇದು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಹೆಸರಿಗೆ ಮಾತ್ರ ಪೇಪರ್‌ಲೆಸ್ ಎನ್ನುತ್ತಿದ್ದಾರೆಂದು ಇನ್ನೋರ್ವ ಸಿಬ್ಬಂದಿ ದೂರಿದರು.
ಇಲಾಖೆಗೆ ವಿವಿಧ ರೀತಿಯಲ್ಲಿ ಅರ್ಜಿ ಆಹ್ವಾನ ಮಾಡುವುದು ಆನ್‌ಲೈನ್ ಮೂಲಕ ನಡೆಯುತ್ತದೆ. ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಯ ಮೂಲ ಪ್ರತಿಯನ್ನು ಇಲಾಖೆಗೆ ಖುದ್ದು ನೀಡಬೇಕಾಗುತ್ತದೆ. ಉನ್ನತಾಧಿಕಾರಿಗಳು ಇದನ್ನು ಪರಿಶೀಲಿಸಿ, ಸಹಿ ಮಾಡಬೇಕಾಗುತ್ತದೆ. ಶಿಕ್ಷಣ ಇಲಾಖೆಯ ವರ್ಗಾವಣೆ ಅರ್ಜಿಗಳನ್ನು ಕೂಡ ಆನ್‌ಲೈನ್‌ನಲ್ಲಿ ಆಹ್ವಾನಿಸಿದ್ದರೂ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಉಪನಿರ್ದೇಶಕರಿಗೆ ಸಲ್ಲಿಸಬೇಕು.
ಅವರು, ಆ ಎಲ್ಲ ಕಡತಗಳನ್ನು ಪರಿಶೀಲಿಸಿ, ಸಹಿ ಮಾಡಿ ಕೇಂದ್ರ ಕಚೇರಿಗೆ ಸಲ್ಲಿಸಬೇಕು. ಕೇಂದ್ರ ಕಚೇರಿಯಲ್ಲಿ ಅದನ್ನು ಉನ್ನತಾಧಿಕಾರಿಗಳು ಪರಿಶೀಲಿಸುತ್ತಾರೆ. ಹೀಗೆ ಬಹುತೇಕ ಎಲ್ಲ ಇಲಾಖೆಯಲ್ಲೂ ಕಾಗದ ರಹಿತವಾದರೂ, ಕಾಗದದಲ್ಲೇ ಎಲ್ಲ ವ್ಯವಹಾರ ನಡೆಯುತ್ತಿದೆಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.
ಸಿಬ್ಬಂದಿಗೆ ಸಂಕಟ: ಎಲ್ಲ ಕಡತಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು. ನಂತರ, ಅದನ್ನು ಸುರಕ್ಷಿತವಾಗಿ ಇಡಬೇಕು. ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಕೇಳಿದ ತಕ್ಷಣವೇ ಪ್ರಿಂಟ್‌ಔಟ್ ತೆಗೆದು ಕೊಡಬೇಕು. ಆನ್‌ಲೈನ್ ವ್ಯವಸ್ಥೆಯಲ್ಲಿ ಲಭ್ಯವಿದ್ದರೂ, ಅದನ್ನು ಅಧಿಕಾರಿಗಳು ಹಾಗೂ ಸಚಿವರು ಓದಲು ಸಿದ್ಧರಿರುವುದಿಲ್ಲ. ಕಾಗದ ರೂಪದಲ್ಲೇ ಕೇಳುತ್ತಾರೆ. ಕಾಗದ ರಹಿತ ಇಲಾಖೆ ಮಾಡಿದರೂ, ಕಾಗದದಲ್ಲೇ ವ್ಯವಹಾರ ನಡೆಯುತ್ತಿದೆ ಎಂದು ಉನ್ನತ ಶಿಕ್ಷಣ ಇಲಾಖ ಸಿಬ್ಬಂದಿಯೊಬ್ಬರು ಹೇಳುತ್ತಾರೆ.
* ರಾಜು ಖಾರ್ವಿ ಕೊಡೇರಿ