ವಿಶ್ವಬ್ಯಾಂಕ್ ಬಿಡುಗಡೆಗೊಳಿಸಿದ ಉದ್ಯಮಸ್ನೇಹಿ ದೇಶಗಳ ಪಟ್ಟಿಯಲ್ಲಿ ಭಾರತ ಕಂಡಿರುವ ನೆಗೆತ ಚೇತೋಹಾರಿಯಾಗಿದ್ದು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. 190 ದೇಶಗಳ ಪೈಕಿ ಭಾರತ 77ನೇ ಸ್ಥಾನದಲ್ಲಿದೆ ಎನ್ನುವುದು ಕಡಿಮೆ ಸಾಧನೆಯಲ್ಲ. ಬರೀ ನಾಲ್ಕು ವರ್ಷದಲ್ಲಿ ಈ ಸಾಧನೆ ಸಾಧ್ಯವಾಗಿದೆ ಎನ್ನುವುದು ಗಮನಾರ್ಹ ಅಂಶ. 2014ರಲ್ಲಿ ನಮ್ಮ ದೇಶ 142ನೇ ಸ್ಥಾನದಲ್ಲಿತ್ತು. ಈ ಸಂದರ್ಭದಲ್ಲಿ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಮೋದಿಯವರು ಉದ್ಯಮ ಸ್ನೇಹಿ ವಾತಾವರಣದಲ್ಲಿ ಅಗ್ರ 50 ದೇಶಗಳ ಸಾಲಿಗೆ ಸೇರ್ಪಡೆಯಾಗುವುದು ನಮ್ಮ ಗುರಿ ಎಂದು ಹೇಳಿದಾಗ ಇದು ಸಾಧ್ಯವಾಗುವ ಮಾತಲ್ಲ ಎಂದು ಹೇಳಿದವರೇ ಹೆಚ್ಚು. ಆದರೆ ಇದೀಗ ಬಿಡುಗಡೆಯಾದ ಪಟ್ಟಿಯನ್ನು ನೋಡುವಾಗ 50ರೊಳಗೆ ಸೇರ್ಪಡೆ ಯಾಗುವುದು ಅಸಾಧ್ಯವಲ್ಲ ಎಂಬ ವಿಶ್ವಾಸ ಮೂಡಿರುವುದಂತೂ ಸತ್ಯ. ಹಾಗೆಂದು ಈ ಸಾಧನೆ ರಾತ್ರಿ ಬೆಳಗಾಗುವುದರೊಳಗೆ ಆಗಿದೆ ಎಂದು ಭಾವಿಸಬೇಕಿಲ್ಲ. ಇದರ ಹಿಂದೆ ನಿರಂತರ ಪ್ರಯತ್ನವಿದೆ. ವಿವಿಧ ಇಲಾಖೆಗಳ ನಡುವಿನ ಅವಿರತ ಶ್ರಮವಿದೆ. ಕೇಂದ್ರ -ರಾಜ್ಯ ಸರಕಾರಗಳ ಮಾತ್ರವಲ್ಲದೆ ಸ್ಥಳೀಯಾಡಳಿತಗಳ ಯೋಗದಾನವೂ ಇದೆ.
ಪ್ರಸ್ತುತ ನಾವು ದಕ್ಷಿಣ ಏಶ್ಯಾದಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ಮೂರು ವರ್ಷದಲ್ಲಿ 65 ಸ್ಥಾನ ಮೇಲೇರುವುದು ನಮ್ಮಿಂದ ಸಾಧ್ಯವಾಗಿದೆ. ಯಾವುದೇ ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಕೈಗಾರಿಕೋದ್ಯಮಗಳು ಸ್ಥಾಪನೆಯಾಗುವುದು ಅಗತ್ಯ. ಸ್ವಾತಂತ್ರ್ಯ ಸಿಕ್ಕಿದ ಕಾಲಘಟ್ಟದಲ್ಲೇ ಕೈಗಾರಿಕೋದ್ಯಮಗಳ ಅಗತ್ಯವನ್ನು ಮನಗಂಡಿದ್ದರೂ ಅದನ್ನು ಕಾರ್ಯರೂಪಕ್ಕಿಳಿಸುವುದು ನಮ್ಮಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ನಾವು ಆಮದು ದೇಶವಾಗಿಯೇ ಉಳಿಯಬೇಕಾಯಿತು. ಬಹುರಾಷ್ಟ್ರೀಯ ಕಂಪೆನಿಗಳಿಗೆ ಭಾರತ ಎನ್ನುವುದು ತಮ್ಮ ಉತ್ಪನ್ನಗಳನ್ನು ಮಾರಲು ವಿಪುಲ ಅವಕಾಶವುಳ್ಳ ಮಾರುಕಟ್ಟೆಯಾಯಿತು. ಬೇರೆ ದೇಶಗಳು ಉತ್ಪಾದಿಸಿದ ಸರಕುಗಳನ್ನು ಬಳಸುವ ದೇಶವಾದವೆಯೇ ಹೊರತು ನಾವೇ ಉತ್ಪಾದಕ ದೇಶವಾಗುವಲ್ಲಿ ಸೋತೆವು. ಹೀಗಾಗಿ ಇಂದಿಗೂ ನಮ್ಮ ಆರ್ಥಿಕತೆ ಅಭಿವೃದ್ಧಿಶೀಲ ಹಂತದಲ್ಲೇ ಉಳಿದಿದೆ.
ನಿಧಾನವಾಗಿಯಾದರೂ ಈ ಪರಿಸ್ಥಿತಿ ಬದಲಾಯಿಸುತ್ತಿದೆ ಎನ್ನುವುದು ಸಮಾಧಾನಕೊಡುವ ಸಂಗತಿ. ಉದ್ಯಮಸ್ನೇಹಿ ರ್‍ಯಾಂಕಿಂಗ್‌ನಂತಹ ಅಂತರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುವುದು ಎಂದರೆ ಹೂಡಿಕೆದಾರರ ವಿಶ್ವಾಸ ಗಳಿಸುವುದು ಎಂದು ಅರ್ಥ. ಭಾರತದಲ್ಲಿ ಹೂಡಿಕೆ ಮಾಡಲು ಉತ್ತಮ ವಾತಾವರಣ ಇದೆ ಎಂಬ ಸಂದೇಶ ಇದರಿಂದ ರವಾನೆಯಾಗುತ್ತದೆ.
ಆದರೆ ನಮ್ಮ ಉದ್ಯಮ ಸ್ನೇಹಿ ವಾತಾವರಣ ನಗರ ಕೇಂದ್ರಿತವಾಗಿದೆ ಎನ್ನುವುದು ಕೂಡಾ ಗಮನಾರ್ಹ ಅಂಶ. ಮುಖ್ಯವಾಗಿ ಮುಂಬಯಿ, ದಿಲ್ಲಿಯಂಥ ಮಹಾನಗರಗಳನ್ನು ಆದ್ಯತೆಯಾಗಿರಿಸಿಕೊಂಡೇ ಉದ್ಯಮಗಳು ಬೆಳೆಯುತ್ತಿರುವುದು ಆರೋಗ್ಯಕಾರಿಯಲ್ಲ. ಮಹಾ ನಗರಗಳ ಮೇಲೆ ಬೀಳುವ ಒತ್ತಡ ಕಡಿಮೆಯಾಗಬೇಕಾದರೆ ಭುವನೇಶ್ವರ, ಲೂಧಿಯಾನ, ಹೈದರಾಬಾದ್ ಮತ್ತಿತರ ದ್ವಿತೀಯ ಸ್ತರದ ನಗರಗಳಲ್ಲೂ ಈ ವಾತಾವರಣ ಬೆಳೆಯಬೇಕಾಗಿದೆ. ಈ ಅಂಶದತ್ತ ಸರಕಾರ ಗಮನ ಹರಿಸಬೇಕು.
ಹೂಡಿಕೆಗಳನ್ನು ಆಕರ್ಷಿಸುವಲ್ಲಿ ರಾಜ್ಯಗಳ ನಡುವೆ ಸ್ಪರ್ಧೆ ಏರ್ಪಟ್ಟಿರುವುದು ಆರೋಗ್ಯಕಾರಿ ಬೆಳವಣಿಗೆ. ಆದರೆ ಇದರಲ್ಲಿ ಕೆಲವೇ ರಾಜ್ಯಗಳು ಮಾತ್ರ ತೊಡಗಿಕೊಂಡಿದೆ. ಎಲ್ಲ 29 ರಾಜ್ಯಗಳೂ ಈ ಸ್ಪರ್ಧೆಯಲ್ಲಿ ಸಹಭಾಗಿಯಾದರೆ ಮಾತ್ರ ಇದು ಅರ್ಥಪೂರ್ಣ. ಅಂತೆಯೇ ಮುಂದಿನ ದಿನಗಳಲ್ಲಿ ಈ ಸ್ಪರ್ಧೆಯನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸುವ ಯೋಜನೆಯೂ ಸರಕಾರದ ಮುಂದಿದೆ. ಹೂಡಿಕೆಗೆ ಮೂಲಸೌಕರ್ಯ ಕಲ್ಪಿಸಿಕೊಡುವಲ್ಲಿ ಈ ಮಾದರಿಯ ಸ್ಪರ್ಧೆ ಪೂರಕವಾಗಲಿದೆ. ಹೀಗಾದರೆ ಭಾರತ ಉದ್ಯಮ ಪ್ರಾರಂಭಿಸಲು ಅತಿ ಸುಲಭವಾದ ಮತ್ತು ಸರಳ ಪ್ರಕ್ರಿಯೆಯನ್ನೊಳಗೊಂಡಿರುವ ದೇಶವನ್ನಾಗಿ ಮಾಡುವ ಕನಸು ನನಸಾದೀತು.