ಬೆಂಗಳೂರು: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳು. ಈಗಾಗಲೇ ಪಂಚಮಿ, ವರಮಹಾ ಲಕ್ಷ್ಮೀ,ಬಕ್ರೀದ್ ಹಬ್ಬ ಮುಗಿದಿದೆ. ಆಗಸ್ಟ್ ತಿಂಗಳಲ್ಲೇ ಗೌರಿ-ಗಣೇಶ ಹಬ್ಬ, ಒಣಂ ಬರಲಿವೆ. ಆದರೆ ಜವಳಿ ಉದ್ಯಮಕ್ಕೆ ಇಡೀ ದಕ್ಷಿಣ ಭಾರತದಲ್ಲಿ ಹೆಸರುವಾಸಿ ಆಗಿರುವ ಚಿಕ್ಕಪೇಟೆಯಲ್ಲಿ ವ್ಯಾಪಾರವೇ ಆಗುತ್ತಿಲ್ಲ.
ಹೌದು, ಶ್ರಾವಣ ಮಾಸ ಬಂತೆಂದರೆ ಚಿಕ್ಕಪೇಟೆ ಜವಳಿ ಉದ್ಯಮದಲ್ಲಿ ವ್ಯಾಪಾರದ ಕಳೆ ಇರುತ್ತಿತ್ತು. ಗ್ರಾಹಕರು ಹಾಗೂ ವ್ಯಾಪಾರಿಗಳಿಂದ ಚಿಕ್ಕಪೇಟೆ ಸದಾ ತುಂಬಿರುತ್ತಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ವ್ಯಾಪಾರವೇ ಇಲ್ಲದಂತಾಗಿದೆ. ಕೋವಿಡ್ ಲಾಕ್‌ಡೌನ್ ತೆರವು ನಂತರವೂ ಯಾರೂ ಚಿಕ್ಕಪೇಟೆ ಮಳಿಗೆಗಳತ್ತ ಮುಖ ಮಾಡುತ್ತಿಲ್ಲ. ಶೇ.15 ರಷ್ಟೂ ವಹಿವಾಟು ಇಲ್ಲದೆ ವ್ಯಾಪಾರಿಗಳು ಚಿಂತೆಗೀಡಾಗಿದ್ದಾರೆ. ಈ ಹಿಂದೆ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ದೊಡ್ಡ ಮಟ್ಟದ ವಹಿವಾಟು ನಡೆಯುತ್ತಿತ್ತು. ದೀಪಾವಳಿ ವೇಳೆ ನಡೆಯುವಷ್ಟೇ ವ್ಯಾಪಾರ ನಡೆಯುತ್ತಿತ್ತು. ಆದರೆ ಈ ಬಾರಿ ಅಂತಹ ವ್ಯಾಪಾರ ನಡೆದಿಲ್ಲ ಎಂದು ಚಿಕ್ಕಪೇಟೆ ಸಗಟು ಬಟ್ಟೆ ವ್ಯಾಪಾರಿಗಳು ಹೇಳುತ್ತಾರೆ.
ಕೋವಿಡ್ ದಿಂದಾಗಿ ಜನರು ಮಾರುಕಟ್ಟೆಗೆ ಬರಲು ಹೆದರುತ್ತಿದ್ದಾರೆ. ಈ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳು ಸೀಲ್‌ಡೌನ್ ಆಗಿದ್ದವು. ಈಗ ಸರ್ಕಾರ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ ಗ್ರಾಹಕರೇ ಇಲ್ಲ ಎಂದು ತಿಳಿಸುತ್ತಾರೆ. ವ್ಯಾಪಾರವಿಲ್ಲದ ಕಾರಣ ಈಗಾಗಲೇ ಚಿಕ್ಕಪೇಟೆ ಹಲವು ಕಡೆಗಳಲ್ಲಿ ವ್ಯಾಪಾರಿಗಳು ಮಳಿಗೆ ಖಾಲಿ ಮಾಡಿದ್ದಾರೆ. ವ್ಯಾಪಾರ ಇಲ್ಲದೆ ಇದ್ದರೂ ಬಾಡಿಗೆ ಜತೆಗೆ ವಿದ್ಯುತ್ ಬಿಲ್ ನೀಡಲೇ ಬೇಕು. ಹೀಗಾಗಿ ಹಲವರು ಮಳಿಗೆ ಖಾಲಿ ಮಾಡಿದ್ದಾರೆ ಎಂದು ಬಟ್ಟೆ ವ್ಯಾಪಾರಿ ಯೋಗೇಶ್ ತಿಳಿಸಿದರು. ಮಳಿಗೆಗಳ ಮುಂದೆ ಬಾಡಿಗೆಗೆ ಖಾಲಿ ಇದೆ ಎಂಬ ನಾಮಫಲಕಗಳು ಕಾಣಸಿಗುತ್ತವೆ.
ಶೇ.15ರಷ್ಟು ಮಾತ್ರ ವ್ಯಾಪಾರ : ಕೋವಿಡ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಂತರವೂ 21 ದಿನಗಳ ಕಾಲ ಚಿಕ್ಕಪೇಟೆಯನ್ನು ಬಂದ್ ಮಾಡಲಾಗಿತ್ತು. ಲಾಕ್‌ಡೌನ್‌ನಿಂದಾಗಿ ಕೋಟ್ಯಂತರ ರೂ.ನಷ್ಟ ಉಂಟಾಗಿ ಸಂಕಷ್ಟಕ್ಕೆ ಒಳಗಾಗಿದ್ದ ವ್ಯಾಪಾರಿಗಳು ನಂತರ ಚೇತರಿಕೆ ಕಂಡು ಬರುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಶೇ.15-20 ರಷ್ಟು ವ್ಯಾಪಾರ ಮಾತ್ರ ನಡೆಯುತ್ತಿದೆ ಎಂದು ಬೆಂಗಳೂರು ಹೋಲ್ ಸೇಲ್ ಕ್ಲಾಥ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ್ ಪೀರ್ ಗಲ್ ಹೇಳುತ್ತಾರೆ. ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಂದ ಬಟ್ಟೆ ವ್ಯಾಪಾರಿಗಳು, ಹುಬ್ಬಳ್ಳಿ, ದಾವಣಗೆರೆ, ಅರಸೀಕೆರೆ, ಶಿವಮೊಗ್ಗ ಭಾಗದಿಂದ ಬಟ್ಟೆ ವ್ಯಾಪಾರಿಗಳು ಚಿಕ್ಕಪೇಟೆಗೆ ಬರುತ್ತಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಅವರು ಕೂಡ ಈಗ ಬರುತ್ತಿಲ್ಲ ಎಂದರು.
ಕೋವಿಡ್ ಹಿನ್ನೆಲೆ ಮಹಿಳೆಯರು ಮನೆಯಿಂದ ಹೊರ ಬರುವುದಿಲ್ಲ. ಹೀಗಾಗಿಯೇ ವ್ಯಾಪಾರ ಆಗುತ್ತಿಲ್ಲ. ನಾವು ಸ್ಯಾನಿಟೈಸರ್ ಬಳಕೆ, ಮಾಸ್ಕ್ ಸೇರಿದಂತೆ ಎಲ್ಲ ರೀತಿಯ ಸುರಕ್ಷತಾ ಕ್ರಮ ಜರುಗಿಸಿದ್ದೇವೆ. ಆದರೂ ಗ್ರಾಹಕರು ಬರುತ್ತಿಲ್ಲ.
– ಯೋಗೇಶ್ ಶೇಟ್, ವ್ಯಾಪಾರಿ
–ದೇವೇಶ್ ಸೂರಗುಪ್ಪ