Advertisement

ನಗರದಲ್ಲೆಲ್ಲ ವ್ಯಾಪಾರ ಬಿರುಸು

09:54 AM Oct 18, 2018 | |

ಮಹಾನಗರ: ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಾರ ಚಟುವಟಿಕೆ ಬಿರುಸುಗೊಂಡಿದೆ. ಗುರುವಾರ ನಡೆಯುವ ಆಯುಧ ಪೂಜೆಗೆ ಬುಧವಾರ ಬೆಳಗ್ಗೆಯಿಂದಲೇ ಹೂ ಹಣ್ಣು ಖರೀದಿ ಆರಂಭವಾಗಿದ್ದು, ವ್ಯಾಪಾರಸ್ಥರಿಗೂ ಭರ್ಜರಿ ವ್ಯಾಪಾರ ಕುದುರಿದೆ. ನಗರದ ರಸ್ತೆ ಬದಿಗಳಲ್ಲೆಲ್ಲ ಸೇವಂತಿಗೆ, ಮಲ್ಲಿಗೆ, ಚೆಂಡು ಹೂವು ಘಮಿಸುತ್ತಿದೆ.

Advertisement

ಸ್ಥಳೀಯ ವ್ಯಾಪಾರಸ್ಥರೊಂದಿಗೆ, ಉತ್ತರ ಕರ್ನಾಟಕ ಭಾಗದ ವ್ಯಾಪಾರಸ್ಥರೂ ಈಗಾಗಲೇ ನಗರಕ್ಕೆ ಆಗಮಿಸಿದ್ದು, ಆಯುಧ ಪೂಜೆಗೆ ಬೇಕಾಗುವ ಹೂವುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ನಗರದ ಮಣ್ಣಗುಡ್ಡೆ ರಸ್ತೆ, ಬಿಜೈ ಬಸ್‌ ನಿಲ್ದಾಣದ ಬಳಿ, ಕಂಕನಾಡಿ, ಪಂಪ್‌ ವೆಲ್‌, ಹಂಪನಕಟ್ಟೆ, ಸ್ಟೇಟ್‌ ಬ್ಯಾಂಕ್‌, ಬಲ್ಮಠ ಸೇರಿದಂತೆ ನಗರದ ವಿವಿಧೆಡೆ ರಸ್ತೆ ಬದಿಗಳಲ್ಲಿ ಹೂವು ವ್ಯಾಪಾರ ನಡೆಯುತ್ತಿದ್ದು, ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿದೆ.

ಮುಖ್ಯವಾಗಿ ಆಯುಧಪೂಜೆಯಂದು ಮನೆಯಲ್ಲೇ ಇರುವ ವಿವಿಧ ವಸ್ತುಗಳಿಗೆ ಪೂಜೆ ನಡೆಸುವ ಸಲುವಾಗಿ ಜನ ಹೂವು ಖರೀದಿಯಲ್ಲಿ ತೊಡಗಿದ್ದಾರೆ. ಅಲ್ಲದೆ, ವಾಹನಗಳ ಪೂಜೆಗಾಗಿಯೂ ಹೂ ಖರೀದಿಯಲ್ಲಿ ಸಾರ್ವಜನಿಕರು ತೊಡಗಿದ್ದಾರೆ.

ಈಗಾಗಲೇ ಸೇವಂತಿಗೆ, ಮಲ್ಲಿಗೆ, ಚೆಂಡು ಹೂವುಗಳು ನಗರದ ಅಲ್ಲಲ್ಲಿ ಕಂಡು ಬರುತ್ತಿದ್ದು, ಭರ್ಜರಿ ವ್ಯಾಪಾರ ನಡೆಯುತ್ತಿದೆ. ದೊಡ್ಡ ಸೇವಂತಿಗೆ ಮಾರಿಗೆ 70 ರೂ., ಸಣ್ಣ ಸೇವಂತಿಗೆ 60 ರೂ., ಚೆಂಡು ಹೂ 100 ರೂ., ಮಲ್ಲಿಗೆ 85 ರೂ.ಗಳಿಂದ 100 ರೂ.ಗೆ ಮಾರಾಟವಾಗುತ್ತಿದ್ದು, ಎಲ್ಲಿಯೂ ಏಕದರ ಇಲ್ಲ.

ಹಣ್ಣಿನ ಖರೀದಿ ಬಲು ಜೋರು
ಸೇಬು, ಕಿತ್ತಳೆ, ದಾಳಿಂಬೆ, ಬಾಳೆಹಣ್ಣು ಮುಂತಾದ ಹಣ್ಣುಗಳ ಖರೀದಿಯೂ ಬಿರುಸಾಗಿದೆ. ಸೇಬು ಕೆಜಿಗೆ 150 ರೂ. ಗಳಿಂದ 200 ರೂ.ಗಳು, ದಾಳಿಂಬೆ ಕೆಜಿಗೆ 60 ರೂ. ತನಕ ಕೆಲವು ವ್ಯಾಪಾರಸ್ಥರು ದರ ನಿಗದಿ ಮಾಡಿದ್ದಾರೆ. ಇದರೊಂದಿಗೆ ಆಯುಧ ಪೂಜೆಯ ದಿನದ ವಿಶೇಷ ಆಹಾರಕ್ಕಾಗಿ ತರಕಾರಿ ಖರೀದಿಯೂ ಬಿರುಸಾಗಿದೆ.

Advertisement

ದೇವಸ್ಥಾನಗಳಲ್ಲಿ ಸಿದ್ಧತೆ 
ಆಯುಧ ಪೂಜೆಯ ದಿನದಂದು ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ವಾಹನ ಪೂಜೆ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿಯೂ ಸಿದ್ಧತೆಗಳು ನಡೆಯುತ್ತಿವೆ. ವಿಶೇಷ ವಾಗಿ ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನಗಳಲ್ಲಿ ಆಯುಧ ಪೂಜಾ ತಯಾರಿಗಳು ನಡೆಯುತ್ತಿವೆ.

ಲಿಂಬೆ, ಹಸಿಮೆಣಸಿನ ಖರೀದಿ
ಆಯುಧ ಪೂಜೆಯಂದು ಹೂವಿನ ಜತೆಗೆ ಬಹುಮುಖ್ಯವಾಗಿ ಬೇಕಾಗುವ ಲಿಂಬೆಹಣ್ಣು ಮತ್ತು ಹಸಿಮೆಣಸಿನ ಮಾಲೆಗೂ ಉತ್ತಮ ಬೇಡಿಕೆ ಕಂಡು ಬರುತ್ತಿದೆ. ಲಿಂಬೆ ಹಣ್ಣಿಗೆ ಐದು ರೂ.ಗಳಾದರೆ, ಲಿಂಬೆ ಮತ್ತು ಹಸಿ ಮೆಣಸಿನ ಮಾಲೆಗೆ 10 ರೂ.ಗಳನ್ನು ವ್ಯಾಪಾರಸ್ಥರು ನಿಗದಿಪಡಿಸಿದ್ದಾರೆ. ಸೀಯಾಳವು 35 ರೂ.ಗಳಿಂದ 40 ರೂ.ಗಳ ತನಕ ಮಾರಾಟವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next