ದೊಡ್ಡಬಳ್ಳಾಪುರ: ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರಮೂರನೇ ದಿನಕ್ಕೆ ಕಾಲಿಟ್ಟಿದ್ದು, ದೊಡ್ಡಬಳ್ಳಾಪುರದಲ್ಲಿ ಸಾರಿಗೆ ಸಂಸ್ಥೆಯ ನೌಕರರು ಬಸ್ ಸಂಚಾರಗಳನ್ನು ಸ್ಥಗಿತಗೊಳಿಸಿ ಮುಷ್ಕರ ಮುಂದುವರಿಸಿದ್ದಾರೆ.
ಸರ್ಕಾರ ಹಾಗೂ ಸಾರಿಗೆ ಇಲಾಖೆ ನೌಕರರ ಹಗ್ಗಜಗ್ಗಾಟ ನಡುವೆಯೇ ನಗರದಲ್ಲಿ 2 ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗೆ ಇಳಿದವು.ಬೆಳಗ್ಗೆ ದಾಬಸ್ ಪೇಟೆಗೆ ಒಂದು ಬಸ್ ತೆರಳಿದರೆ, ಮಧ್ಯಾಹ್ನ ನಗರದ ಬಸ್ ನಿಲ್ದಾಣದಿಂದ ಪ್ರಯಾಣಿಕರು ಹೊತ್ತು ದೊಡ್ಡಬಳ್ಳಾಪುರದಿಂದದೇವನಹಳ್ಳಿ ಕಡೆಗೆ ಬಸ್ ಸೇವೆ ಆರಂಭಿಸಿತು. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಈ ಬಸ್ಸಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಖುದ್ದು ಡಿಪೋ ವ್ಯವಸ್ಥಾಪಕ ಆನಂದ್ ಬಸ್ಸಿನಲ್ಲಿ ರಕ್ಷಣೆಗೆ ತೆರಳಿದ್ದರು. ತೀವ್ರವಾಗಿರುವ ನೌಕರರ ಮುಷ್ಕರದ ನಡುವೆಯೇ ಗುರುವಾರಎರಡು ಬಸ್ ಹಾಗೂ ಶುಕ್ರವಾರ ಎರಡು ಬಸ್ ಕಾರ್ಯನಿರ್ವಹಿಸಿದ್ದವು. ಉಳಿದಂತೆ ತರಬೇತಿ ನೌಕರರಿಗೆ ನೋಟಿಸ್ ನೀಡಿದಹಿನ್ನೆಲೆಯಲ್ಲಿ ಸಿಬ್ಬಂದಿಗಳು ಕೆಲಸಕ್ಕೆ ಬರಲಾರಂಭಿಸಿದ್ದು, ಶನಿವಾರ ಹೆಚ್ಚಿನ ಬಸ್ಸುಗಳು ರಸ್ತೆಗಿಳಿಯುವ ಸಾಧ್ಯತೆಗಳಿವೆ.
ಕೆಲಸಕ್ಕೆ ಬರಲು 50 ಮಂದಿ ಟ್ರೈನಿ ನೌಕರರಿಗೆ ನೋಟಿಸ್ :
ಚಿಕ್ಕಬಳ್ಳಾಪುರ ಡಿಪೋ ವ್ಯಾಪ್ತಿಗೆ ಒಳಪಡುವ 50 ಮಂದಿ ತರಬೇತಿ ನೌಕರರಿಗೆ ಕರ್ತವ್ಯಕ್ಕೆ ಹಾಜ ರಾಗುವಂತೆ ನೋಟಿಸ್ ನೀಡಲಾಗಿದೆ. ಇದರನ್ವಯ ದೊಡ್ಡಬಳ್ಳಾಪುರ ಡಿಪೋಗೆ ಸೇರಿದ 13 ಮಂದಿಗೆ ನೋಟಿಸ್ ನೀಡಿದ್ದು,ಕೆಲಸಕ್ಕೆ ಹಾಜರಾಗದಿದ್ದಲ್ಲಿ ವಜಾ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಖಾಸಗಿ ಬಸ್‌ಗಳು ಶುಕ್ರವಾರ ಸಹ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಿದವು. ಆದರೆ, ನಿರ್ದಿಷ್ಟ ಮಾರ್ಗಗಳಿಗೆ ತೆರಳಲು ಪ್ರಯಾಣಿಕರ ಕೊರತೆ ಇತ್ತು.