Advertisement

ಫ್ಲಾಟ್‌ಫಾರಂನಲ್ಲಿ ನಿಲ್ಲದ ಬಸ್‌-ಜನ ಹೈರಾಣ

12:36 PM Apr 21, 2022 | Team Udayavani |

ಜೇವರ್ಗಿ: ಪಟ್ಟಣದ ಬಸ್‌ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಬಸ್‌ಗಳನ್ನು ನಿಲ್ಲಿಸದ ಕಾರಣ ಕಲಬುರಗಿ ನಗರಕ್ಕೆ ಪ್ರಯಾಣಿಸುವ ಪ್ರಯಾಣಿಕರು ಪರದಾಡುವಂತಾಗಿದೆ.

Advertisement

ಕಲಬುರಗಿ ನಗರಕ್ಕೆ ಜೇವರ್ಗಿ ಬಸ್‌ ನಿಲ್ದಾಣದಿಂದ ನಿತ್ಯ ನೂರಾರು ಬಸ್‌ ಗಳು ಓಡಾಡುತ್ತಿದ್ದು, ಸಾವಿರಾರು ಜನ ಪ್ರಯಾಣ ಮಾಡುತ್ತಾರೆ. ಆದರೆ, ಕಳೆದ ಕೆಲ ತಿಂಗಳುಗಳಿಂದ ಬಸ್‌ಗಳನ್ನು ಪ್ಲಾಟ್‌ ಫಾರಂನಲ್ಲಿ ನಿಲ್ಲಿಸುತ್ತಿಲ್ಲ, ಬದಲಾಗಿ ನಿಲ್ದಾಣದ ಗೇಟ್‌ ಬಳಿ ನಿಲ್ಲಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

43 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ಇದ್ದು, ಕೆಂಡದಂತ ಬಿಸಿಲಿಗೆ ಜನ ಬೇಸತ್ತು ಹೋಗಿದ್ದಾರೆ. ಈ ಮಧ್ಯೆ ಪ್ರಯಾಣಿಕರು ಬಸ್‌ಗಾಗಿ ಖಡಕ್‌ ಬಿಸಿಲಲ್ಲಿ ಬಸ್‌ಗಾಗಿ ಕಾಯುವಂತಾಗಿದೆ.

ಬೆಳಗ್ಗೆ 8 ಗಂಟೆಯಾದರೇ ಸಾಕು ಬಿಸಿಲಿನ ಅಬ್ಬರ ಆರಂಭವಾಗುತ್ತದೆ. ಸಂಜೆ 6 ಗಂಟೆ ವರೆಗೆ ಜನತೆ ಮನೆ ಬಿಟ್ಟು ಹೊರಗೆಬಾರದಂತಾಗಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ತಾಪಮಾನ ಜಿಲ್ಲೆಯಲ್ಲಿದೆ. ಬಿಸಿಲಿನ ಝಳಕ್ಕೆ ಜನ-ಜಾನುವಾರುಗಳು ತತ್ತರಿಸಿ ಹೋಗಿವೆ. ಹೀಗಿದ್ದರೂ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಕೆಲ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ.

ಸುಸಜ್ಜಿತವಾದ ಬಸ್‌ ನಿಲ್ದಾಣ ನಿರ್ಮಿಸಿದರೂ, ಪ್ರಯಾಣಿಕರ ಪರದಾಟ ತಪ್ಪುತ್ತಿಲ್ಲ. ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ಬಸ್‌ಗಾಗಿ ಬಿಸಿಲಿನ ಝಳದ ಮಧ್ಯೆ ಬಸ್‌ ಗಾಗಿ ಕಾಯುವಂತಾಗಿದೆ. ಇದರಿಂದ ಸಾಕಷ್ಟು ಜನರ ಆರೋಗ್ಯದಲ್ಲಿ ಏರು ಪೇರಾಗಿದೆ ಎಂದು ಹೇಳಲಾಗುತ್ತಿದೆ.

Advertisement

ಫ್ಲಾಟ್‌ಫಾರಂನಲ್ಲಿ ಬಸ್‌ ನಿಲ್ಲಿಸದ ಕಾರಣ ನಿಲ್ದಾಣದಲ್ಲಿರುವ ಮಳಿಗೆಗಳ ವ್ಯಾಪಾರ ವಹಿವಾಟಿಗೂ ಹೊಡೆತ ಬಿದ್ದಿದೆ. ಈ ಬಗ್ಗೆ ಹಲವಾರು ಬಾರಿ ಬಸ್‌ ನಿಲ್ದಾಣದ ಮೇಲ್ವಿಚಾರಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಕೂಡಲೇ ಕಲಬುರಗಿ ನಗರಕ್ಕೆ ತೆರಳುವ ಬಸ್‌ಗಳನ್ನು ನಿಗದಿಪಡಿಸಿದ ಪ್ಲಾಟ್‌ ಫಾರಂನಲ್ಲಿ ನಿಲ್ಲಿಸಬೇಕು. ನಿಲ್ದಾಣದ ಸ್ವತ್ಛತೆಗೆ ಹೆಚ್ಚಿನ ಗಮನ ಕೊಡಬೇಕು. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು. ವಾಹನ ಪಾರ್ಕಿಂಗ್‌ ಸ್ಥಳಕ್ಕೆ ಮೇಲ್ಛಾವಣಿ ಹಾಕಬೇಕು, ನಿಲ್ದಾಣದಲ್ಲಿ ಮಳಿಗೆಗಳ ಬಾಡಿಗೆ ದರ ಕಡಿಮೆ ಮಾಡಬೇಕು. ಒಡೆದ ನೀರಿನ ಪೈಪ್‌ ದುರಸ್ತಿ ಮಾಡಬೇಕು ಹಾಗೂ ಮೂಲಸೌಲಭ್ಯ ಒದಗಿಸಬೇಕು. ಕಲಬುರಗಿ ನಗರಕ್ಕೆ ಜೇವರ್ಗಿ ಘಟಕದಿಂದ ಇನ್ನೂ ಮೂರ್‍ನಾಲ್ಕು ಹೆಚ್ಚುವರಿಯಾಗಿ ಬಸ್‌ ಗಳನ್ನು ಬಿಡಬೇಕು ಎಂದು ಪುರಸಭೆ ಸದಸ್ಯ ಸಂತೋಷ ಮಲ್ಲಾಬಾದ ಆಗ್ರಹಿಸಿದ್ದಾರೆ.

-ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next