ಚಿಕ್ಕಬಳ್ಳಾಪುರ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಬೇಕೆಂದು ಆಗ್ರಹಿಸಿ ನಡೆಯು ತ್ತಿದ್ದ ಮುಷ್ಕರ ಅಂತ್ಯಗೊಳ್ಳುವ ಮುನ್ನವೇ ಜಿಲ್ಲೆಯಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ಕೇವಲ 10 ಬಸ್ ಸಂಚಾರ ಆರಂಭಿಸಲಾಗಿದೆ.
ಸಾರಿಗೆ ನೌಕರರು ಮಂಡಿಸಿದ 10 ಬೇಡಿಕೆಗಳಲ್ಲಿ ಸರ್ಕಾರ 09 ಬೇಡಿಕೆ ಈಡೇರಿಸಲು ಆಶ್ವಾಸನೆ ನೀಡಿದರೂ ಜಿಲ್ಲೆಯಲ್ಲಿ ಸಾರಿಗೆ ನೌಕರರು ಪರಿಪೂರ್ಣವಾಗಿ ಮುಷ್ಕರ ಅಂತ್ಯಗೊಳಿಸಿರಲಿಲ್ಲ. ಈ ಮಧ್ಯೆ ಸಾರಿಗೆ ಸಂಸ್ಥೆಯ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ಅವರು ಪೊಲೀಸ್ ಇಲಾಖೆಯ ಸಹಕಾರದಿಂದ ಕೇವಲ 10 ಬಸ್ ಸಂಚಾರ ಆರಂಭಿಸಿದ್ದರು.
ಜಿಲ್ಲೆಯ ಶಿಡ್ಲಘಟ್ಟ ಹಾಗೂ ಬಾಗೇಪಲ್ಲಿ ಮಾರ್ಗದಲ್ಲಿ ತಲಾ ಮೂರು ಹಾಗೂ ದೊಡ್ಡ ಬಳ್ಳಾಪುರ ವಿಭಾಗದಲ್ಲಿ 4 ಬಸ್ ಸಹಿತ 10 ಬಸ್ ಸಂಚಾರ ಆರಂಭಿಸಲಾಗಿತ್ತು. ಆದರೂ, ಜಿಲ್ಲಾ ಕೇಂದ್ರದ ಬಸ್ ನಿಲ್ದಾಣ ಮಾತ್ರ ಪ್ರಯಾಣಿಕರು ಮತ್ತು ಬಸ್‌ಗಳಿಲ್ಲದೇ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಾಜ್ಯ ಸರ್ಕಾರ ಮತ್ತುಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶ ಪಾಲಿಸುವ ಸಲುವಾಗಿ ಜಿಲ್ಲಾ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಸವಾಲು ತೆಗೆದುಕೊಂಡು ಸಾರಿಗೆ ಸಂಸ್ಥೆಯ ಸಿಬ್ಬಂದಿಯನ್ನು ಬಸ್‌ನಲ್ಲಿ ನಿಯೋಜಿಸಿ ಸಂಚಾರ ಆರಂಭಿಸಿದ್ದರು.
ಖಾಸಗಿ ಬಸ್‌ನಲ್ಲಿ ಸಂಚಾರ: ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾರಿಗೆ ಬಸ್ ಸೌಲಭ್ಯ ಇಲ್ಲದೇಪ್ರಯಾಣಿಕರು ಖಾಸಗಿ ಬಸ್ ಅವಲಂಬಿಸಿದ್ದರು. ಜತೆಗೆ ಕ್ಯಾಬ್ ಹಾಗೂ ಆಟೋ ಗಳಲ್ಲಿಯೂಪ್ರಯಾಣಿಕರು ಅನಿವಾರ್ಯ ವಾಗಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರಿಗೆ ಬಸ್ ಇಲ್ಲದೇ ಕೆಲ ಖಾಸಗಿ ಬಸ್‌ಗಳಲ್ಲಿ ಅಧಿಕ ಟಿಕೆಟ್‌ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿತ್ತು. ಸಂಜೆಯಾಗು ತ್ತಲೇ ಮುಷ್ಕರ ವಾಪಸ್ ಪಡೆದಿದ್ದರಿಂದ ಕೆಲವೆಡೆ ಯತಾಸ್ಥಿತಿಯಲ್ಲಿ ಬಸ್‌ಗಳು ಸಂಚಾರಕ್ಕೆ ಮುಂದಾದವು.
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸಹಕಾರದಿಂದ 10 ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದೆವು.ಯಾವುದೇ ತೊಂದರೆಯಾಗಿಲ್ಲ. ನೌಕರರ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸವಿದೆ.
–ಬಸವರಾಜು, ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ