Advertisement

Bus ticket; ದೀಪಾವಳಿ ಸಂಭ್ರಮಕ್ಕೆ ಬಸ್‌ ಟಿಕೆಟ್‌ ದರ ತಣ್ಣೀರು

01:38 AM Oct 18, 2024 | Team Udayavani |

ಉಡುಪಿ: ದೀಪಾವಳಿ ಹಿನ್ನೆಲೆಯಲ್ಲಿ ಕರಾವಳಿಯಿಂದ ಬೆಂಗ ಳೂರು, ಬೆಂಗಳೂರಿನಿಂದ ಕರಾವಳಿಗೆ ಸಂಚರಿಸುವ ಬಹುತೇಕ ಎಲ್ಲ ಬಸ್‌ಗಳು ಮುಂಗಡ ಬುಕ್ಕಿಂಗ್‌ ಫುಲ್‌ ತೋರಿಸುತ್ತಿವೆ. ಈ ಮಧ್ಯೆ ಕೆಲವು ಸೀಟುಗಳ ಲಭ್ಯತೆ ಕಂಡರೂ ಬುಕ್ಕಿಂಗ್‌ ಮಾಡುವಾಗ ದಿಗಿಲು ಹಾರಿಸುತ್ತಿದೆ. ಅ.29ರಿಂದ ಮೊದಲ್ಗೊಂಡು ನ.3ರ ವರೆಗೆ ಎಲ್ಲ ಬಸ್‌ಗಳ ಟಿಕೆಟ್‌ಗಳು ಮುಂಗಡ ಬುಕಿಂಗ್‌ ಆಗಿದ್ದು, ಟಿಕೆಟ್‌ ದರವೂ ದುಪ್ಪಟ್ಟಾಗಿವೆ.

Advertisement

ಕೆಲವು ಖಾಸಗಿ ಬಸ್‌ಗಳ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್‌ ಮಾಡುವ ಸಂದರ್ಭದಲ್ಲಿ ಒಂದು ದರ ತೋರಿಸಿದರೆ ಸೀಟ್‌ ಆಯ್ಕೆ ಮಾಡಿ, ಹಣ ಪಾವತಿಸುವಾಗ ಇನ್ನೊಂದು ದರ ತೋರಿಸುತ್ತಿರುವುದು ಊರಿಗೆ ಬರಲು ತುದಿಗಾಲಿನಲ್ಲಿ ನಿಂತಿರುವವರಲ್ಲಿ ಆತಂಕ ಸೃಷ್ಟಿ ಮಾಡಿದೆ. ಹಣ ಪಾವತಿಸಿದರೂ ಸೀಟ್‌ ಸಿಗುವುದೋ ಇಲ್ಲವೋ ಎಂಬ ಭಯ ಕಾಡಲಾರಂಭಿಸಿದೆ. ರೈಲು, ಕಾರು ಸಹಿತ ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ಯೋಚಿಸುತ್ತಿದ್ದಾರೆ.

ಅ.30ರಿಂದ ನ.2ರ ವರೆಗೂ ದೀಪಾವಳಿ ಇರಲಿದೆ. ಹೀಗಾಗಿ ಬಹುತೇಕರು ಅ.29ರ ರಾತ್ರಿಯೇ ಊರಿಗೆ ಹೊರಡುವವರಿದ್ದಾರೆ. ಕೆಲವರು ದೀಪಾವಳಿ ನಿಮಿತ್ತ ಅ.26(ಶನಿವಾರದಂದೇ) ಹೊರಡುವ ಯೋಚನೆಯಲ್ಲಿದ್ದಾರೆ). ಅ.31ರಿಂದ ನ.3ರ ವರೆಗೂ ನಿರಂತರ ರಜೆ ಇರುವುದರಿಂದ ಎಲ್ಲರೂ ಊರಿಗೆ ಬರುವ ಯೋಜನೆ ರೂಪಿಸುತ್ತಿದ್ದಾರೆ.

ದರದಲ್ಲಿ ಅದಲು ಬದಲು
ಬಸ್‌ ಟಿಕೆಟ್‌ ಬುಕ್ಕಿಂಗ್‌ ಮಾಡುವ ಬಸ್‌ ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿ ನಮೂದಾಗಿರುವ ದರಕ್ಕೆ ಕ್ಲಿಕ್‌ ಮಾಡಿ ಬಳಿಕ ಸೀಟಿನ ಆಯ್ಕೆ ಮಾಡುವಾಗ ದರದಲ್ಲಿ ಬಹಳಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಉಡುಪಿಯಿಂದ ಬೆಂಗಳೂರಿಗೆ ವೆಬ್‌ಸೈಟ್‌ಗಳಲ್ಲಿ 1 ಸಾ. ರೂ. ದರ ನಮೂದಿಸಿದರೆ ಸೀಟ್‌ ಆಯ್ಕೆ ಮಾಡಿದಾಗ 300ರಿಂದ 400 ರೂ.ಗಳಷ್ಟು ಹೆಚ್ಚಳ ಕಂಡುಬರುತ್ತಿದೆ. ಜತೆಗೆ ವಿವಿಧ ರೀತಿಯ ತೆರಿಗೆ ಸೇರಿಸಿ 1,600 ರೂ. ವರೆಗೂ ತೋರಿಸುತ್ತಿದೆ. ದೀಪಾವಳಿ ದಿನ ಸಮೀಪಿಸುತ್ತಿದ್ದಂತೆ ಈ ದರ 3,500ರಿಂದ 4 ಸಾ. ರೂ.ಗಳ ವರೆಗೂ ಏರಿಕೆಯಾದೀತು.

ಎಷ್ಟು ದುಬಾರಿ
ಖಾಸಗಿ ಬಸ್‌ಗಳಲ್ಲಿ 1,500 ರೂ.ಗಳಿಂದ 4 ಸಾ. ರೂ.ಗಳಷ್ಟು ದರವಿದೆ. ಸಾಮಾನ್ಯ ದಿನಗಳಲ್ಲಿ 1 ಸಾ.ರೂ.ನಿಂದ 3 ಸಾ. ರೂ.ಗಳವರೆಗೆ ಸಿಗುತ್ತಿದ್ದ ಟಿಕೆಟ್‌ಗಳ ದರ ಏಕಾಏಕಿ ಏರಿಕೆ ಕಂಡಿ ರುವ ಪರಿಣಾಮ ಹಲವು ಮಂದಿ ದೀಪಾವಳಿಗೂ ಮುನ್ನವೇ ಊರು ಸೇರುವ ಉದ್ದೇಶ ಇಟ್ಟುಕೊಂಡಿದ್ದಾರೆ. ದರದ ಏರುಪೇರು ಅ.30ರಿಂದ ಆರಂಭಗೊಂಡು ನ.3ರ ವರೆಗೂ ಮುಂದುವರಿದಿದೆ. ಕೆಲವು ಖಾಸಗಿ ಬಸ್‌ ಮಾಲಕರು ಹೆಚ್ಚುವರಿ ಬಸ್‌ಗಳನ್ನು ಇಳಿಸಲು ಚಿಂತಿಸುತ್ತಿದ್ದಾರೆ.

Advertisement

ಕಾರುಗಳ ಮೊರೆ
ಹಬ್ಬಕ್ಕಾಗಿ ಬೆಂಗಳೂರಿನಿಂದ ಊರಿಗೆ ಬರುವ ಸ್ನೇಹಿತರು, ವಿದ್ಯಾರ್ಥಿ ಗಳೆಲ್ಲರೂ ಸೇರಿ ಬಾಡಿಗೆಗೆ ವಾಹನ ಪಡೆಯುವುದು ವಾಸಿ ಎನ್ನುತ್ತಿದ್ದಾರೆ. 1,200 ರೂ.ಗಳಿಂದ ದಿನಬಾಡಿಗೆ ಆಧಾರದಲ್ಲಿ ವಾಹನ ಸಿಗುತ್ತಿದೆ. ಈ ನಡುವೆ ಟ್ಯಾಕ್ಸಿಗಳಲ್ಲಿಯೂ ಬೆಂಗಳೂರಿ ನಿಂದ ಉಡುಪಿಗೆ 11ರಿಂದ 13 ಸಾ. ರೂ.ಗಳಷ್ಟು ದರ ವಿಧಿಸಲಾಗುತ್ತಿದೆ.

ದರ ನಿಗದಿಯಿಲ್ಲ
ಕ್ಯಾಂಟ್ರಾಕ್ಟ್ ಕ್ಯಾರಿಯೇಜ್‌ ಬಸ್‌ಗಳಾದ ಕಾರಣ ಅದರಲ್ಲಿ ಟಿಕೆಟ್‌ಗಳಿಗೆ ನಿರ್ದಿಷ್ಟ ದರ ಎಂದು ಆರ್‌ಟಿಒ ನಿಗದಿಪಡಿಸಿಲ್ಲ. ಬೇಡಿಕೆ ಇದೆ ಎಂಬ ಕಾರಣಕ್ಕೆ ಟಿಕೆಟ್‌ ದರವನ್ನು ಹೆಚ್ಚಿಸುವಂತೆಯೂ ಇಲ್ಲ. ಈ ಬಗ್ಗೆ ಪ್ರಯಾಣಿಕರಿಂದ ದೂರು ಬಂದಲ್ಲಿ ಪರಿಶೀಲಿಸಲಾಗುವುದು.
-ಎಲ್‌.ಪಿ.ನಾಯಕ್‌, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next