ಆಲೂರು: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅರ್ಧಕ್ಕೆ ಅಪೂರ್ಣಗೊಂಡಿರುವ ಕಟ್ಟಡ ಕಾಮಗಾರಿ, ಎಲ್ಲಿ ನೋಡಿದರೂ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮದ್ಯದ ಬಾಟಲ್, ಬೀಡಿ-ಸಿಗರೇಟ್. ನಶೆಯಲ್ಲಿ ಒರಳಾಡುತ್ತಿರುವ ಕುಡುಕರು… ಈ ದೃಶ್ಯ ಕಂಡು ಬಂದಿದ್ದು ಯಾವುದೋ ನಿರ್ಮಾಣ ಹಂತದ ನಿವೇಶನದಲ್ಲಿ ಅಲ್ಲ, ಬದಲಾಗಿ ಬಸ್ ನಿಲ್ದಾಣದ ಕಟ್ಟಡದಲ್ಲಿ!
ಆಲೂರು ಪಟ್ಟಣದ ಕೂಗಳತೆ ದೂರದ ಬೈರಾಪುರ ಗ್ರಾಪಂ ವ್ಯಾಪ್ತಿಯ ಬೈರಾಪುರ ಗ್ರಾಮದ ಮಗ್ಗೆ ರಸ್ತೆಯಲ್ಲಿನ ಬಸ್ ನಿಲ್ದಾಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು ಪ್ರಯಾಣಿಕರು ರೋಸಿ ಹೋಗಿದ್ದಾರೆ.
ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಾದು ಹೋಗಿರುವ ಮಗ್ಗೆ, ಕೆ.ಹೊಸಕೋಟೆ ಹಾಗೂ ಪಕ್ಕದ ಜಿಲ್ಲೆ ಮಡಕೇರಿ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು, ರಸ್ತೆಯಲ್ಲಿ ನಿಂತು ಬಸ್ ಗಾಗಿ ಕಾಯಬೇಕಿತ್ತು. ಹೀಗಾಗಿ ಎಚ್. ಎಂ.ವಿಶ್ವನಾಥ್ ಅವರು ಶಾಸಕರಾಗಿದ್ದ ವೇಳೆ ಬೈರಾಪುರದಿಂದ ಮಗ್ಗೆ ಕೆ.ಹೊಸಕೋಟೆ ಹಾಗೂ ಮಡಿಕೇರಿ ಜಿಲ್ಲೆಗೆ ತೆರಳುವ ಪ್ರಯಾಣಿಕರ ಹಿತದೃಷ್ಟಿಯಿಂದ ಶಾಸಕರ ಅನುದಾನ ದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡ ಲಾಗಿತ್ತು. ಆದರೆ, ಜನ ಪ್ರತಿನಿಧಿಗಳು ಹಾಗೂ ಗ್ರಾಪಂ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ಜನಸಾಮಾನ್ಯರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಗ್ರಾಪಂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಪಂ ಅಧಿಕಾರಿಗಳು ಬೈರಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ ಮರೆತಿದ್ದಾರೆ. ಸೋಂಕು ತಡೆಗೆ ಸರ್ಕಾರಗಳು ಅನುದಾನ ನೀಡಿದ್ದರೂ ಸ್ವಚ್ಛತೆಗೆ ಗಮನ ನೀಡದೇ ಹಣ ದುರುಪಯೋಗ ಮಾಡಿದ್ದಾರೆ. ಈ ಬಗ್ಗೆ ಗ್ರಾಪಂ ಗ್ರಾಮ ಸಭೆಗಳಲ್ಲಿ ಚರ್ಚೆ ಮಾಡಲಾಗಿತ್ತು ಎಂದು ಸ್ಥಳೀಯರೇ ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ:ಕೃಷಿ ಬದುಕಿಗೆ ಆಶಾಕಿರಣವಾದ ವೆನಿಲ್ಲಾ ಬೆಳೆ, ಏನಿದರ ಇತಿಹಾಸ…
ಕಳೆದ ತಿಂಗಳು ನಡೆದ ಸಾಮಾನ್ಯ ಸಭೆಯಲ್ಲಿ ಬಸ್ ನಿಲ್ದಾಣ ಸೇರಿ ಗ್ರಾಪಂ ವ್ಯಾಪ್ತಿಯ ಸ್ವತ್ಛತೆಗೆ ಪಿಡಿಒ 2 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಸಭೆಗೆ ತಿಳಿಸಿದ್ದರು. ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಾಗ, ಪಿಡಿಒ ಭವ್ಯಾ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜವಾಬ್ದಾರಿ. ಇದು ನಮಗೆ ಬರುವುದಿಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದರಾದರೂ, ಸ್ವಚ್ಛತೆ ನಿಮ್ಮ ವ್ಯಾಪ್ತಿಗೆ ಬರುತ್ತದೆ. ನೀವು ಸುಳ್ಳು ಹೇಳುತ್ತಿದ್ದೀರಿ. ಪ್ರಾಮಾಣಿಕವಾಗಿ ಕಾರ್ಯನಿರ್ವ ಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು
ನಾನು ಗ್ರಾಪಂ ಸದಸ್ಯನಾಗಿ 10 ತಿಂಗಳು ಕಳೆದಿದೆ. ಪ್ರತಿ ಸಭೆಯಲ್ಲಿ ಗ್ರಾಮದ ಸ್ವಚ್ಛತೆ ಬಗ್ಗೆ ಗಮನ ಸೆಳೆದಿದ್ದೇನೆ. ಬಸ್ ನಿಲ್ದಾಣದಲ್ಲಿ ಅನೈರ್ಮಲ್ಯದಿಂದ ಕೂಡಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಸರಿಪಡಿಸುವ ಪ್ರಯತ್ನ ಮಾಡುವೆ.
-ರುದ್ರೇಗೌಡ, ಗ್ರಾಪಂ ಸದಸ್ಯ
ಈ ಹಿಂದೆ ಶಾಸಕರಾಗಿದ್ದ ವಿಶ್ವನಾಥ್ ಅವರ ಶಾಸಕರ ಅನುದಾನಡಿ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿತ್ತು. ಪುನಃ ಚುನಾವಣೆ ವೇಳೆ ಮೀಸಲಾತಿ ಬದಲಾವಣೆಯಿಂದ ಕುಮಾರಸ್ವಾಮಿ ಆಯ್ಕೆಯಾಗಿದರು. ಅವರಿಗೂ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
-ಸಿ.ಡಿ.ಅಶೋಕ್, ಗ್ರಾಪಂ ಮಾಜಿ ಅಧ್ಯಕ್ಷ
ಹಲವು ವರ್ಷಗಳಿಂದ ಬಸ್ ನಿಲ್ದಾಣ ಕಾಮಗಾರಿ ನನೆಗುದಿಗೆ ಬಿದ್ದಿದ್ದು ಕುಡುಕರ ಅಡ್ಡೆಯಾಗಿದೆ. ಕೂಡಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸ ದಿದ್ದರೆ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಲಾಗುವುದು.
● ವೆಂಕಟೇಶ್, ಬಟ್ಟೆ ಅಂಗಡಿ ಮಾಲಿಕ
ಸ್ವಚ್ಛತೆಯಲ್ಲಿ ಬೈರಾಪುರ ಗ್ರಾಪಂ ತಾಲೂಕಿನಲ್ಲಿಯೇ ನಂ.1 ಸ್ಥಾನ ಪಡೆದಿತ್ತು. ಆದರೆ, ಈಗಿಲ್ಲ. ತಹಶೀಲ್ದಾರ್ ಅವರು, ಈ ರಸ್ತೆಯ ಲ್ಲಿಯೇ ಓಡಾಡು ತ್ತಾರೆ. ಆದರೆ ತಿರುಗಿಯೂ ನೋಡುತ್ತಿಲ್ಲ.
– ಕೃಷ್ಣೇಗೌಡ, ಗ್ರಾಮದ ಹಿರಿಯ ಮುಖಂಡ
ಸ್ವಚ್ಛತೆ ಕೈಗೊಳ್ಳುವ ಕುರಿತು ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿತ್ತು. ಈಗ, ಅರಣ್ಯ ಇಲಾ ಖೆಯೂ ಸ್ವಚ್ಛತೆಕೈಗೊಳ್ಳುವುದಿಲ್ಲ ಎಂದು ಮರು ಪತ್ರ ಬರೆದಿದೆ. ಹೀಗಾಗಿ ವಾರದಲ್ಲಿ ಬಸ್ ನಿಲ್ದಾಣ ಸೇರಿದಂತೆ ಗ್ರಾಮದಲ್ಲಿ ಸ್ವತ್ಛತೆ ಕೈಗೊಳ್ಳುವ ಕುರಿತು ತೀರ್ಮಾನಿಸಲಾಗುವುದು.
ಭವ್ಯಾ, ಪಿಡಿಒ
– ಟಿ.ಕೆ.ಕುಮಾರಸ್ವಾಮಿ, ಆಲೂರು