Advertisement

ಬಸ್‌ ನಿಲ್ದಾಣ ಉದ್ಘಾಟನೆ 

11:58 AM Dec 21, 2017 | Team Udayavani |

ಕಿನ್ನಿಗೋಳಿ: ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯತ್‌ ಗಳನ್ನು ಸೇರಿಸಿ ನಗರ ಪಂಚಾಯತ್‌ ಮಾಡುವುದು ಅಗತ್ಯವಾಗಿದೆ. ಕಿನ್ನಿಗೋಳಿ ಪೇಟೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಮರು ಕಾಮಗಾರಿ ಹಾಗೂ ಡಿವೈಡರ್‌ ಮತ್ತು ದಾರಿದೀಪ ಆಳವಡಿಸಿ ಸುಂದರ ಕಿನ್ನಿಗೋಳಿ ಮಾಡಲಾಗುವುದು ಎಂದು ಶಾಸಕ ಅಭಯಚಂದ್ರ ಜೈನ್‌ ಹೇಳಿದರು.

Advertisement

ಅವರು ಕಿನ್ನಿಗೋಳಿ ಮಾರ್ಕೆಟ್‌ ಕಟ್ಟಡದ ಆವರಣದಲ್ಲಿ ಕಿನ್ನಿಗೋಳಿ ಪಂಚಾಯತ್‌ ನಿಂದ ನೂತನವಾಗಿ ನಿರ್ಮಾಣಗೊಂಡಿರುವ 49 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಎರಡನೇ ಹಂತದ ಪಂಚಾಯತ್‌ ವಾಣಿಜ್ಯ ಸಂಕೀರ್ಣ ಕಟ್ಟಡ, 15 ಲಕ್ಷ ರೂ. ವೆಚ್ಚದಲ್ಲಿ ಕೇಂದ್ರ ಬಸ್ಸು ನಿಲ್ದಾಣ, ಪೊಲೀಸ್‌ ಸಹಾಯ ಕೇಂದ್ರ, ರಿಕ್ಷಾ ನಿಲ್ದಾಣ, 36 ಲಕ್ಷ ರೂ. ವೆಚ್ಚದ ಬಿತ್ತುಲ್‌ ದ್ರವ ತ್ಯಾಜ್ಯ ಘಟಕ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಕಿನ್ನಿಗೋಳಿಯ ಬಹು ಗ್ರಾಮ ಯೋಜನೆಯು ಗುತ್ತಿಗೆದಾರರಿಂದಾಗಿ ನಿಧಾನಗತಿಯಲ್ಲಿದ್ದು, ಈ ಬಾರಿ ಮತ್ತೆ ಸಿದ್ದರಾಮಯ್ಯ ಅವರು ಹೆಚ್ಚುವರಿಯಾಗಿ ಎರಡು ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ. ಮುಂದಿನ ಫ್ರೆಬವರಿ ತಿಂಗಳಿನಲ್ಲಿ ಈ ಯೋಜನೆ ಉದ್ಘಾಟನೆಗೊಳ್ಳಲಿದೆ ಎಂದರು. 

ಗಣ್ಯರ ಉಪಸ್ಥಿತಿ
ಕಿನ್ನಿಗೋಳಿ ಪಂಚಾಯತ್‌ ಅಧ್ಯಕ್ಷೆ ಲೋಮಿನಾ ಸಿಕ್ವೇರಾ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಸುಜನ್‌ ಚಂದ್ರ, ತಾಲೂಕು ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ಮೋನು, ಎಪಿಎಂಸಿ ಅಧ್ಯಕ್ಷ ಪ್ರಮೋದ್‌ ಕುಮಾರ್‌, ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಜಿಲ್ಲಾ ಮಹಿಳಾ ಕಾಂಗ್ರಸೆ ಅಧ್ಯಕ್ಷೆ ಶಾಲೆಟ್‌ ಪಿಂಟೊ, ಮಾಜಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುಗಂಧಿ ಕೊಂಡಾಣ, ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯೆ ಶೈಲಾ ಸಿಕ್ವೇರ, ಕಿನ್ನಿಗೋಳಿ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಲವ ಶೆಟ್ಟಿ , ಪಿಡಿಒ ಅರುಣ್‌ ಪ್ರದೀಪ್‌ ಡಿ’ಸೋಜಾ, ಕಿರಿಯ ಅಭಿಯಂತರ ವಿಶ್ವನಾಥ್‌ ಮೊದಲಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗುತ್ತಿಗೆದಾರರಾದ ಸಂತೋಷ್‌ ಕುಮಾರ್‌ ಹೆಗ್ಡೆ, ಸುಧಾಕರ ಶಿಬರೂರು, ಎಂ.ಎಸ್‌. ಅಬ್ದುಲ್‌ ಹಮೀದ್‌, ಸುನೀಲ್‌ ಅಂಚನ್‌ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸದಸ್ಯ ಸಂತೋಷ್‌ ಕುಮಾರ್‌ ವಂದಿಸಿದರು. ಶರತ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

ಬಿಜೆಪಿ ಬಹಿಷ್ಕಾರ
ಬಿತ್ತುಲ್‌ ದ್ರವ ತ್ಯಾಜ್ಯ ಘಟಕಕ್ಕೆ ಕೇಂದ್ರ ಸರಕಾರದಿಂದ ಜಿ.ಪಂ.ಮೂಲಕ 20 ಲ.ರೂ. ಹಾಗೂ ನೂತನ ಬಸ್‌ ನಿಲ್ದಾಣದ ಶೌಚಾಲಯಕ್ಕೆ 1. 80 ಲ.ರೂ. ಜಿಲ್ಲಾ ಪಂಚಾಯತ್‌ನಿಂದ ಅನುದಾನವಿದ್ದರೂ ಅದರ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲವೂ ಗ್ರಾ. ಪಂ. ಕೆಲಸ ಎನ್ನುತ್ತಾ ಜಿಲ್ಲಾ ಪಂಚಾಯತ್‌ ಅನುದಾನವನ್ನು ಅವಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷವು ಕಾರ್ಯಕ್ರಮವನ್ನು ಬಹಿಷ್ಕರಿಸಿದೆ ಎಂದು ಜಿ.ಪಂ. ಸದಸ್ಯ ವಿನೋದ್‌ ಬೊಳ್ಳೂರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next